ಬಿಜೆಪಿ ಸೇರುತ್ತಿರುವ ಶಾಸಕ : ಮತ್ತೊಂದು ಕಡೆ ರಾಜೀನಾಮೆಗೆ ಒತ್ತಡ
- ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿ ಸೇರಲು ಮುಂದಾಗಿರುವ ಎನ್ ಮಹೇಶ್
- ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ
- ಎನ್ ಮಹೇಶ್ ವಿರುದ್ಧ ಬಿಎಸ್‌ಪಿ ಮುಖಂಡರ ಅಸಮಾಧಾನ
ಚಾಮರಾಜನಗರ (ಆ.04): ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿ ಸೇರಲು ಮುಂದಾಗಿರುವ ಎನ್ ಮಹೇಶ್ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಸವಾಲು ಹಾಕಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಎಸ್‌ಪಿ ಯಿಂದ ಶಾಸಕರಾಗಿರುವ ಮಹೇಶ್ ಸಿದ್ಧಾಂತಕ್ಕೆ ವಿರುದ್ದವಾಗಿ ಹೋಗಿ ಬಿಜೆಪಿ ಸೇರಲು ಮುಂದಾಗಿರುವುದು ದುರಂತ. ಬಿಎಸ್‌ಪಿಯಿಂದ ತಾಪಂ ಸದಸ್ಯರಾಗಿ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋದ ತಾಪಂ ಸದಸ್ಯರೊಬ್ಬರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದ ಮಹೇಶ್ ಇದೇ ಸವಾಲನ್ನು ತಾವೂ ಸ್ವೀಕಾರ ಮಾಡಬೇಕು ಎಂದರು.
ಮತ್ತೊಬ್ಬ ಶಾಸಕ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್..!
ಬಿಜೆಪಿ ತತ್ವ ಸಿದ್ಧಾಂತ ಅಂಬೇಡ್ಕರ್ ಅವರ ಸಮಾನತಾವಾದಕ್ಕೆ ವಿರುದ್ಧವಾಗಿದೆ. ಹಿಂದುತ್ವ ಅಂಬೇಡ್ಕರ್ ವಾದದಿಂದ ದೂರ ಸಾಗಿರುವ ಎನ್ ಮಹೇಶ್ ಕಾರ್ಯಕರ್ತರ ಬೆಂಬಲವನ್ನು ಕೇಳಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿರುವುದು ಸುಳ್ಳು. ಎನ್ ಮಹೇಶ್ ಇಲ್ಲದಿದ್ದರೆ ಬಿಎಸ್ಪಿ ಇರುವುದಿಲ್ಲ ಎನ್ನುವ ಭ್ರಮೆ ಸುಳ್ಳು. ಮಹೇಶ್ ಅವರ ಇಡೀ ರಾಜಕೀಯ ಜೀವನ ಬಿಎಸ್‌ಪಿಯಿಂದ ರೂಪುಗೊಂಡಿದ್ದು ಅವರ ಅವರ ರಾಜಕೀಯ ಜೀವನದ ಮೂಲೆ ಮೂಲೆಯಲ್ಲೂ ವಿದ್ಯಾರ್ಥಿಗಳು, ನೌಕರರು, ತನು,ಮನ, ದನ, ನೀಡಿ ಬೆಂಬಲಿಸಿದ್ದಾರೆ ಎಂದರು.
ಆಗಸ್ಟ್ 5 ರಂದು ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿಮಹೇಶ್ ಅವರೇ ತಿಳಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ರಚನೆ ಅವಧಿಯಲ್ಲಿ ಮಹೇಶ್ ತಟಸ್ಥ ನೀತಿ ಅನುಸರಿಸಿದ್ದರು.