ಬಿಜೆಪಿಯದ್ದು ಯಡವಟ್ಟು ಸರ್ಕಾರ : ಶಾಸಕ ಮಹೇಶ್ ವಾಗ್ದಾಳಿ
ಇದೊಂದು ಎಡವಟ್ಟು ಸರ್ಕಾರ. ಜನರಿಗೆ ಯಾವುದು ಸಮಸ್ಯೆ ತಂದೊಡ್ಡುತ್ತದೆಯೋ ಅದನ್ನೇಮಾಡಲು ಹೊರಡುತ್ತದೆ ಎಂದು ಶಾಸಕ ಎನ್ ಮಹೇಶ್ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರು (ಜ.01): ಬಿಜೆಪಿ ಸರ್ಕಾರವು ಬೇಡವಾದ ವಿಷಯಕ್ಕೆ ಕೈ ಹಾಕಿ ಎಡವಟ್ಟು ಮಾಡಿಕೊಳ್ಳುತ್ತಿದೆ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಟೀಕಿಸಿದರು.
ನಗರದ ಕಲಾಮಂದಿರದಲ್ಲಿ ಭಾರತೀಯ ಪರಿವರ್ತನ ಸಂಘವನ್ನು (ಬಿಪಿಎಸ್) ಉದ್ಘಾಟಿಸಿ ಮತನಾಡಿದ ಅವರು, ಅಭಿವೃದ್ಧಿ ಕಾರ್ಯವನ್ನು ಬಿಟ್ಟು ಗೋ ಹತ್ಯೆ ವಿಚಾರ, ಮಾಂಸ ತಿನ್ನುವುದು, ರೈತರಿಗೆ ಬೇಡವಾದ ಕೃಷಿ ಕಾಯ್ದೆ ಸೇರಿದಂತೆ ಅನೇಕ ನಿರ್ಧಾರ ಕೈಗೊಳ್ಳುತ್ತಿದೆ. ಇದೊಂದು ಎಡವಟ್ಟು ಸರ್ಕಾರ. ಕೃಷಿ ಕಾಯ್ದೆಯಿಂದ ರೈತರಿಗೆ ಸಮಸ್ಯೆ ಆಗುತ್ತಿದ್ದು, ಇಂತಹ ಕಾನೂನು ಬೇಕಿಲ್ಲ ಎಂದರು.
ಹಿಂದಿ ಭಾಷೆ ಹೇರಿಕೆ ಬಗ್ಗೆ ನನಗೆ ಬಲವಾದ ವಿರೋಧವಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಎಲ್ಲಾ ಪರೀಕ್ಷೆಯು ಸ್ಥಳೀಯ ಭಾಷೆಯಲ್ಲಿಯೇ ನಡೆಯಬೇಕು. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಉತ್ತರ ಭಾರತೀಯರು ಮೇಲುಗೈ ಸಾಧಿಸುತ್ತಿದ್ದಾರೆ. ದಕ್ಷಿಣ ಭಾರತೀಯರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಭಾಷೆಗೂ ಆದ್ಯತೆ ನೀಡಬೇಕು. ಸರ್ಕಾರದ ತಪ್ಪು ತೀರ್ಮಾನದ ವಿರುದ್ಧದ ಹೋರಾಟಕ್ಕೆ ನನ್ನ ಬೆಂಬಲ ಇರುತ್ತದೆ ಎಂದು ಅವರು ಹೇಳಿದರು.
BJP ಪೋಸ್ಟರಲ್ಲಿ BSP ಉಚ್ಛಾಟಿತ ಶಾಸಕ ಎನ್.ಮಹೇಶ್ ಭಾವಚಿತ್ರ
ಸಂಘ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ. ರವೀಂದ್ರ ಭಟ್ಟ, ಇದುವರೆಗೆ ಯಾರಾದರೂ ಶಾಲೆ ಕಟ್ಟಿಸಲು ಹಣ ಎತ್ತಿದ ಉದಾಹರಣೆ ಇದೆಯಾ? ಆದರೆ ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ದೇವಸ್ಥಾನ ಕಟ್ಟಲು ಹಣ ಸಂಗ್ರಹಿಸಲಾಗುತ್ತಿದೆ. ಅಂದರೆ ಶಾಲೆಯ ಗಂಟೆಗಿಂತ, ದೇವಸ್ಥಾನದ ಗಂಟೆ ಹೆಚ್ಚಾಗಿ ಕೇಳಿಸುತ್ತಿದೆ. ಇದು ಅನಕ್ಷರಸ್ಥರ ಕೂಪ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಪಿಎಸ್ ಮುಖಂಡ ಡಾ. ಶ್ರೀನಿವಾಸ್ ವಿಷಯ ಮಂಡಿಸಿದರು. ಬಿಪಿಎಸ್ ಮುಖಂಡರಾದ ಕೆ.ಸಿ. ರಘು, ವೆಂಕಟರಾಮು, ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್ ಇದ್ದರು.