ಹುಣಸೂರು ಕ್ಷೇತ್ರವನ್ನು ಬಿಎಸ್‌ವೈ ಸಂಪೂರ್ಣ ಕಡೆಗಣಿಸಿದ್ದಾರೆ : ಶಾಸಕ ಅಸಮಾಧಾನ
- ಹುಣಸೂರು ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ಶೂನ್ಯ
- ಶಾಸಕ ಎಚ್.ಪಿ. ಮಂಜುನಾಥ್ ಅಸಮಾಧಾನ
- ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ನಾಲ್ಕು ಅವಧಿಯಲ್ಲಿಯೂ ಹುಣಸೂರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ
ಮೈಸೂರು (ಜು.30): ಹುಣಸೂರು ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ಶೂನ್ಯ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ನಾಲ್ಕು ಅವಧಿಯಲ್ಲಿಯೂ ಹುಣಸೂರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಾಲ್ಕು ಬಾರಿ ಸಿಎಂ ಆದಾಗಲೂ ತಾಲೂಕಿಗೆ ಅವರ ಕೊಡುಗೆ ಶೂನ್ಯ. ಆದರೆ ದುರದೃಷ್ಟವಶಾತ್ ಎರಡು ಬಾರೆ ನಾನೇ ಶಾಸಕನಾಗಿದ್ದೆ ಎಂದರು.
'ಸಿಎಂ ಆದಾಗಿಂದಲೇ ಸವಾಲು: ಮೊದಲು ಪ್ರವಾಹ, ಬಳಿಕ ಕೊರೋನಾ, ಈಗ ಮತ್ತೆ ನೆರೆ'
ಹುಣಸೂರು ತಾಲೂಕು ಜನತೆಯ ಋುಣವನ್ನು ಯಡಿಯೂರಪ್ಪ ಅವರು ಮರೆಯಬಾರದು. ಹುಣಸೂರು ಜನತೆ ವಿಶ್ವನಾಥ್ ಅವರನ್ನು ಗೆಲ್ಲಿಸದಿದ್ದರೆ ಅವರು ರಾಜೀನಾಮೆಯನ್ನೂ ಕೊಡುವ ಅಗತ್ಯ ಬರುತ್ತಿರಲಿಲ್ಲ ಯಡಿಯೂರಪ್ಪ ಅವರು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಇದು ಹುಣಸೂರು ಜನರ ಕೊಡುಗೆ. ಅಲ್ಲದೆ ಹುಣಸೂರಿನಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಜಯಶಂಕರ್, ಪಾಪಣ್ಣ ಅವರನ್ನು ಗೆಲ್ಲಿಸಿ ಎರಡು ಬಾರಿ ಬಿಜೆಪಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಈ ಕೊಡುಗೆಯನ್ನೂ ಯಡಿಯೂರಪ್ಪ ಮರೆತಂತಿದೆ ಎಂದು ಅವರು ವಿಷಾದಿಸಿದರು.
ತಾಲೂಕಿನ ಅಭಿವೃದ್ಧಿ ಸಂಬಂಧ ನೀಡಿದ ಹಲವು ಬೇಡಿಕೆಯನ್ನು ಅವರು ಈಡೇರಿಸಲಿಲ್ಲ. ಆದ್ದರಿಂದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರು ಮಾಡಿದಂತೆ ಮಾಡಬಾರದು. ಬದಲಿಗೆ ನೆನಗುದಿಗೆ ಬಿದ್ದಿರುವ ಕಾಮಗಾರಿ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.