Asianet Suvarna News Asianet Suvarna News

ವಚನ ಭ್ರಷ್ಟ ಶಾಸಕರಿಂದ ಪಕ್ಷಕ್ಕೆ ಮಾರಕ: ಲೋಕೇಶ್ವರ್‌

. ಜನಸೇವೆಗೆಂದು ಬಂದಿರುವ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಸಲ್ಲಬೇಕಾಗಿರುವ ಗೌರವವನ್ನು ಕೊಡುವುದನ್ನು ತಿಳಿದುಕೊಳ್ಳಿ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ಶಾಸಕ ಕೆ. ಷಡಕ್ಷರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Breached MLAs are dangerous for the party: Lokeshwar snr
Author
First Published Jan 6, 2024, 10:26 AM IST

  ತಿಪಟೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದರೂ, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆ ಇಲ್ಲಿನ ಶಾಸಕ ಕೆ. ಷಡಕ್ಷರಿ ಅವರನ್ನು ಗೆಲ್ಲಿಸಲು ನನ್ನ ಕಾರ್ಯಕರ್ತರೊಂದಿಗೆ ಸಂಪೂರ್ಣ ಬೆಂಬಲ ನೀಡಿ ಭಾರಿ ಬಹುಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದ್ದರೂ ಅವರಿಗೆ ಈ ಬಗ್ಗೆ ಸ್ವಲ್ಪವೂ ಕೃತಜ್ಞತೆ ಇಲ್ಲವಾಗಿರುವುದು ತೀವ್ರ ನೋವು ತಂದಿದೆ. ಜನಸೇವೆಗೆಂದು ಬಂದಿರುವ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಸಲ್ಲಬೇಕಾಗಿರುವ ಗೌರವವನ್ನು ಕೊಡುವುದನ್ನು ತಿಳಿದುಕೊಳ್ಳಿ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ಶಾಸಕ ಕೆ. ಷಡಕ್ಷರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರೆದಿದ್ದ ನೊಂದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಕೆ. ಷಡಕ್ಷರಿ ಚುನಾವಣೆಯಲ್ಲಿ ಗೆಲ್ಲುವವರೆಗೂ ಚುನಾವಣಾ ಸಮಯದಲ್ಲಿ ದಿನನಿತ್ಯ ನನ್ನ ಸಹಾಯ ಪಡೆದು ಗೆದ್ದ ಮೇಲೆ ಸೌಜನ್ಯಕ್ಕಾದರೂ ಅಭಿನಂದನೆ ಹೇಳಲಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸಭೆ, ಸಮಾರಂಭಗಳಿಗೆ ನೂರಿನ್ನೂರು ಜನರನ್ನು ಸೇರಿಸುವ ಶಕ್ತಿ ಅವರಲ್ಲಿರಲಿಲ್ಲ. ಚುನಾವಣಾ ವಿಷಯದಲ್ಲಿ ಪ್ರತಿಯೊಂದಕ್ಕೂ ರಾಜ್ಯದ ಮುಖಂಡರು ನನ್ನ ಬಳಿ ಮಾಹಿತಿ ಪಡೆಯುತ್ತಿದ್ದರು. ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ ಷಡಕ್ಷರಿ ಮನೆಯಲ್ಲಿ ಕೂರಬೇಕಿತ್ತು. ನಾನು ಮತ್ತು ನನ್ನ ಕಾರ್ಯಕರ್ತರ ಬೆಂಬಲದಿಂದ ಗೆದ್ದು ಈಗ ಎಲ್ಲ ವಿಷಯದಲ್ಲೂ ನಮ್ಮನ್ನೇ ಕಡೆಗಣಿಸುತ್ತಿದ್ದಾರೆ.

ಚುನಾವಣೆಯಲ್ಲಿ ಗೆದ್ದ ನಂತರ ರಾಜಕೀಯ ಸ್ಥಾನಮಾನ ಕೊಡುತ್ತೇನೆಂದು ಹೇಳಿದ್ದ ಷಡಕ್ಷರಿ ಅವರು ವಚನ ಭ್ರಷ್ಟರಾಗಿದ್ದಾರೆ. ಸದ್ಯ ಅವರು ಕೇವಲ ಕುಟುಂಬ ರಾಜಕಾರಣ ಮಾಡುತ್ತಾ ತಾಲೂಕಿನ ಅಭಿವೃದ್ಧಿಯನ್ನು ಕಡೆಗೆಣಿಸುತ್ತಾ ಅಭಿವೃದ್ಧಿಯಲ್ಲಿ ಶೂನ್ಯರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳು ತಾಲೂಕಿನಲ್ಲಿ ಅರ್ಹ ಫಲಾನುಭವಿಗಳು ಸಿಗದೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ಸರ್ಕಾರದ ಅನುದಾನಗಳನ್ನು ಅವರ ಹಿಂಬಾಲಕರಿಗೆ ಮಾತ್ರ ಸೀಮಿತವಾಗಿಸುತ್ತಿದ್ದು, ಅರ್ಹರಿಗೆ ತಲುಪುತ್ತಿಲ್ಲ. ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಕಮಿಷನ್ ದಂಧೆ ಹೆಚ್ಚಾಗುತ್ತಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತಿದ್ದು, ಲೋಕಸಭಾ ಚುನಾವಣಾ ಸಂಘಟನೆಗೆ ತೀವ್ರ ಪೆಟ್ಟು ಬೀಳಲಿದೆ. ತಾಲೂಕು ಕಾಂಗ್ರೆಸ್ ಪಕ್ಷದ ನೊಂದ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಇಂದಿನ ಸಭೆಗೆ ಭಾಗವಹಿಸಿದ್ದು ಶಾಸಕರು ಇದನ್ನೆಲ್ಲಾ ಸರಿಪಡಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆ ಮುಂದೆ ಕೂತು ನ್ಯಾಯ ಕೇಳುತ್ತೇವೆ ಎಂದು ಆಗ್ರಹಿಸಿದರು.

ಸಭೆಯಲ್ಲಿ ನೊಂದ ಕಾಂಗ್ರೆಸ್ ಕಾರ್ಯಕರ್ತರಾದ ಸೊಪ್ಪುಗಣೇಶ್, ರೇಣುಕಾ ಪ್ರಸಾದ್, ಕೆರೆಗೋಡಿ ದೇವರಾಜು, ಬೀರಸಂದ್ರ ಸಿದ್ದರಾಮಯ್ಯ ಮುಂತಾದವರು ಮಾತನಾಡಿದರು.

ಸಭೆಯಲ್ಲಿ ಎಪಿಂಸಿ ಮಾಜಿ ನಿರ್ದೇಶಕ ಕೌಟು ಬಸವರಾಜು, ನಗರಸಭೆ ಸದಸ್ಯರಾದ ಭಾರತಿ, ಆಶೀಫಾ, ಕಾರ್ಯಕರ್ತರಾದ ಲೋಕೇಶ್ ಬೀರಸಂದ್ರ ಪಾಳ್ಯ, ಜಯಪ್ರಕಾಶ್, ಶಶಿಭೂಷಣ್, ರೇಣು, ನೆಹರು ನಗರದ ಗೌರಮ್ಮ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಬಾಕ್ಸ್.....

ರಾಷ್ಟ್ರಮಟ್ಟದ ಖೊ-ಖೋ ಪಂದ್ಯಾವಳಿಗೆ ಆಗಮಿಸದ ಶಾಸಕ

ತಾಲೂಕು ಮಟ್ಟದಲ್ಲಿ ಕಳೆದ ತಿಂಗಳು ನಾವು ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಪಂದ್ಯಾವಳಿ ನಡೆಯುತ್ತಿದ್ದರೂ ಒಂದು ದಿನವಾದರೂ ಪಂದ್ಯಾವಳಿ ವೀಕ್ಷಣೆಗೆ ಹಾಗೂ ಪ್ರೋತ್ಸಾಹಿಸಲು ಶಾಸಕರು ಬರಲಿಲ್ಲ. ಕ್ರೀಡಾಕೂಟಕ್ಕೆ ಆಗಮಿಸಬೇಕಾಗಿದ್ದ ಕ್ರೀಡಾ ಸಚಿವರು, ಉಸ್ತುವಾರಿ ಸಚಿವರು, ಸಹಕಾರ ಸಚಿವರನ್ನು ಪಂದ್ಯಾವಳಿ ಸಭೆಗೆ ಬಾರದಂತೆ ತಡೆದರು. ಇದು ಇವರ ಕೀಳು ಮಟ್ಟದ ರಾಜಕಾರಣವಾಗಿದೆ. ನಾವು ಯಾರ ಬಳಿಯೂ ನಯಾಪೈಸೆ ಹಣ ಕೇಳಿಲ್ಲ. ಶಾಸಕರ ಕ್ರೀಡಾ ಪ್ರೋತ್ಸಾಹ ಎಷ್ಟಿದೆ ಎಂದು ಜನತೆ ಅರ್ಥ ಮಾಡಿಕೊಂಡಿದ್ದಾರೆ.

ಕಳೆದ ವಿಧಾನಸಭೆಯಲ್ಲಿ ಜೋಡೆತ್ತುಗಳೆಂದು ಷಡಕ್ಷರಿ, ಲೋಕೇಶ್ವರ್‌ ಅವರನ್ನು ತಾಲೂಕಿನ ಜನತೆ ಕರೆಯುತ್ತಿದ್ದರು. ಚುನಾವಣೆಯಲ್ಲಿ ಷಡಕ್ಷರಿ ಅವರು ಗೆದ್ದ ನಂತರ ಲೋಕೇಶ್ವರ ಕಿಬ್ಬನಹಳ್ಳಿ ಕ್ರಾಸ್‌ನಿಂದ ತಿಪಟೂರಿನವರೆಗೆ ಶಾಸಕ ಷಡಕ್ಷರಿಯವರನ್ನು ಅದ್ಧೂರಿ ಮೆರವಣಗೆ ಮಾಡಿದ್ದರು. ಇಷ್ಟೆಲ್ಲಾ ಮಾಡಿದರೂ ಒಂದು ದಿನವೂ ನಮ್ಮ ಲೋಕೇಶ್ವರ ಅವರನ್ನಾಗಲಿ, ನಮ್ಮ ಕಾರ್ಯಕರ್ತರನ್ನಾಗಲಿ ಒಂದು ದಿನವೂ ಕರೆದು ಮಾತನಾಡಲಿಲ್ಲ. ಇದು ಹೀಗೆ ಮುಂದುವರೆದರೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಲು ತೀರ್ಮಾನಿಸುತ್ತೇವೆ. ಸೊಪ್ಪುಗಣೇಶ್, ನಗರಸಭೆ ಮಾಜಿ ಉಪಾಧ್ಯಕ್ಷರು

Latest Videos
Follow Us:
Download App:
  • android
  • ios