*ಮಲ್ಲೇಶ್ವರಂನಲ್ಲಿ ಶೃಂಗೇರಿ ಕಿರಿಯ ಶ್ರೀಗಳಿಗೆ ಭಕ್ತಿ-ಶ್ರದ್ಧೆಗಳ ಗುರುವಂದನೆ* ಬ್ರಾಹ್ಮಣ ಸಭಾ ಟ್ರಸ್ಟ್ ಮತ್ತು ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮ* ಸಚಿವ ಡಾ ಅಶ್ವತ್ಥನಾರಾಯಣ ಸೇರಿದಂತೆ ಬ್ರಾಹ್ಮಣ ಸಭಾ ಟ್ರಸ್ಟ್ ನಿಂದ ಹಲವಾರು ಗಣ್ಯರು ಭಾಗಿ

ಬೆಂಗಳೂರು (ಜೂ30); ಶೃಂಗೇರಿಯ ಶಂಕರಾಚಾರ್ಯ ಪೀಠದ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳಿಗೆ ಇಂದು (ಗುರುವಾರ) ಗುರುವಂದನೆ ಸಲ್ಲಿಸಲಾಯ್ತು. ಮಲ್ಲೇಶ್ವರ ಬ್ರಾಹ್ಮಣ ಸಭಾ ಟ್ರಸ್ಟ್ ಮತ್ತು ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಷ್ಠಾನ ವತಿಯಿಂದ ಮಲ್ಲೇಶ್ವರಂ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಯಿತು. 

ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಾಂತ ಶೃಂಗೇರಿ ಶಂಕರಾಚಾರ್ಯ ಪೀಠದ ಜಗದ್ಗುರು ಶ್ರೀ ಶ್ರೀ ವಿಭುದೇಶ ಭಾರತಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮ ನಡಿತಿದೆ. ಇಂದು ಮಲ್ಲೇಶ್ವರಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ ಅಶ್ವತ್ಥನಾರಾಯಣ ಸೇರಿದಂತೆ ಬ್ರಾಹ್ಮಣ ಸಭಾ ಟ್ರಸ್ಟ್ ನಿಂದ ಹಲವಾರು ಗಣ್ಯರು ಭಾಗಿಯಾಗಿದ್ರು. 

ಕರ್ನಾಟಕದ ಎಲ್ಲಾ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುರುವಂದನೆಯ ಸಂಕೇತವಾಗಿ ಇಡೀ ಮಲ್ಲೇಶ್ವರಂನಲ್ಲಿ ಬೆಳಿಗ್ಗೆಯಿಂದಲೇ ಭಕ್ತಾದಿಗಳಲ್ಲಿ ಸಂಭ್ರಮ ಮನೆಮಾಡಿತ್ತು. ಅದರಲ್ಲೂ ಚೌಡಯ್ಯ ಸ್ಮಾರಕ ಭವನದಲ್ಲಿ ಭಕ್ತವೃಂದ ಕಿಕ್ಕಿರಿದು ಹೋಗಿತ್ತು. ಭಕ್ತರು ವೇದಮಂತ್ರ ಪಠಣ ಮತ್ತು ಭಗವದ್ಗೀತೆಯ ವಾಚನದ ಮೂಲಕ ಇಡೀ ಕಾರ್ಯಕ್ರಮದಲ್ಲಿ ದೈವಿಕ ಕಳೆ ಬರುವಂತೆ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಪೌರಕಾರ್ಮಿಕರು, ಮಡಿವಾಳರು, ವಾಲ್ಮೀಕಿ ನಾಯಕರು ಮತ್ತು ಆಟೋ ಚಾಲಕರು ಕೂಡ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದ್ರು.

ಈ ವೇಳೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ ಸಮಾಜದ ಪ್ರತಿಯೊಂದು ಮನೆಯಲ್ಲೂ ಸುಸಂಸ್ಕೃತಿ, ಸದಭಿರುಚಿ ಮತ್ತು ಮೌಲ್ಯವ್ಯವಸ್ಥೆ ಇರಬೇಕು. ಇವಾವೂ ಇಲ್ಲದ ಅಭಿವೃದ್ಧಿಗೆ ಅರ್ಥವಿಲ್ಲ. ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಧರ್ಮಪಾಲನೆಗೆ ಬದ್ಧರಾಗಿ ನಡೆದುಕೊಳ್ಳಲು ಸಿದ್ಧರಾಗಿದ್ದೇವೆ. ಅವರ ನೇತೃತ್ವದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣವಾಗಿದೆ. ಆದಿಶಂಕರರಿಂದಲೇ ಸ್ಥಾಪಿತವಾದ ಈ ಮಠದ ಯೋಗದಾನ ಮತ್ತು ಅದ್ವೈತ ತತ್ವದಿಂದ ಭಾರತವು ಅಖಂಡವಾಗಿ ಉಳಿದುಕೊಂಡಿದೆ. ಶ್ರೀಮಠದ ಆಶಯದಂತೆ ದೇಶದಲ್ಲಿ ರಾಮರಾಜ್ಯ ಸಾಕಾರಗೊಳ್ಳುತ್ತಿದೆ. ಸಮಾಜವು ಉಳಿಯಲು ಧರ್ಮ, ಕಲೆ, ಶಿಕ್ಷಣಗಳು ಆಧಾರಸ್ತಂಭಗಳಾಗಿವೆ. ಇವುಗಳ ಪೋಷಣೆಯಲ್ಲಿ ಶೃಂಗೇರಿ ಸಂಸ್ಥಾನದ ಪಾತ್ರ ಹಿರಿದಾದ ಪಾತ್ರ ವಹಿಸಿಕೊಂಡು ಬಂದಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು, ಇಡೀ ಸೃಷ್ಟಿಯಲ್ಲಿ ಧಾರ್ಮಿಕ ಅನುಸಂಧಾನದ ಮತ್ತು ಧರ್ಮರಕ್ಷಣೆಯ ಪ್ರಜ್ಞೆ ಇರುವುದು ಮನುಷ್ಯನಿಗೆ ಮಾತ್ರ. ಹೀಗಾಗಿಯೇ ನಮ್ಮ ಸಂಸ್ಕೃತಿ ಇನ್ನೂ ಉಳಿದುಕೊಂಡು ಬಂದಿದೆ. ಯಾವುದೇ ಕೆಲಸ ಮಾಡುವಾಗಲೂ ಶ್ರದ್ದೆಯಿಂದ ಮಾಡ್ಬೇಕು. ಸದಾ ಕಾಲ ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಒಳ್ಳೆಯದಾಗುತ್ತದೆ ಅಂತಂದ್ರು.

11ನೇ ಮುಖ್ಯರಸ್ತೆಯ ಶ್ರೀ ಶಂಕರಾಚಾರ್ಯ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು ನವೀಕೃತ ಭಜನಾ ಮಂದಿರ ಮತ್ತು ದಶಮಾನೋತ್ಸವ ಭವನಗಳನ್ನು ಲೋಕಾರ್ಪಣೆ ಮಾಡಿದರು. ಚೌಡಯ್ಯ ಸ್ಮಾರಕ ಭವನದ ಕಾರ್ಯಕ್ರಮದ ನಂತರ ಶ್ರೀಗಳು, ವೈಯಾಲಿಕಾವಲ್ ನಲ್ಲಿರುವ ಟಿಟಿಡಿ ಶ್ರೀ ವೆಂಕಟೇಶ್ವರ ದೇವಸ್ಥಾನ, ಭಗವಂತನ ದರ್ಶನ ಪಡೆದರು.

ಸಾರ್ವಜನಿಕ ಗುರುವಂದನೆಗೂ ಮೊದಲು ಶ್ರೀ ವಿಧುಶೇಖರ ಭಾರತಿಗಳು, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಡಾಲರ್ಸ್ ಕಾಲೊನಿ ಮನೆಗೆ ದಯಮಾಡಿಸಿ, ಪೂಜಾ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು, ಸಚಿವರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಆಶೀರ್ವದಿಸಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕ್ರೀಡಾ ಸಚಿವ ನಾರಾಯಣಗೌಡ, ಮಂಡ್ಯ ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಉಮೇಶ್, ಶ್ರೀ ವಿದ್ಯಾ ಮಂದಿರದ ಅಧ್ಯಕ್ಷರಾದ ಬಾಬು ಮುಂತಾದವರು ಕೂಡ ಆಗಮಿಸಿ, ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾದರು.