ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಡಿ.28): ಪ್ರತಿ ವರ್ಷ ತನ್ನ ಆದಾಯ ಮೂಲಕ್ಕಿಂತ ಹೆಚ್ಚು ಮೊತ್ತದ ಆಯವ್ಯಯ ಮಂಡನೆ ಮಾಡುವ ಬಿಬಿಎಂಪಿ, ಈ ಬಾರಿ ಅದಕ್ಕೆ ಕಡಿವಾಣ ಹಾಕಲು 2021-22ನೇ ಸಾಲಿನ ಆಯವ್ಯಯ ಅನುದಾನಕ್ಕೆ ಮಾಹಿತಿಯನ್ನು ಇಂಟಿಗ್ರೇಟೆಡ್‌ ಫೈನಾನ್ಸಿಯಲ್‌ ಮ್ಯಾನೇಜ್‌ಮೆಂಟ್‌ (ಐಎಫ್‌ಎಂಎಸ್‌) ಸಾಫ್ಟ್‌ವೇರ್‌ನ ಮುಖಾಂತರವೇ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಇದರಿಂದ ಆಯವ್ಯಯದಲ್ಲಿ ಒದಗಿಸಲಾದ ಅನುದಾನಕ್ಕೆ ಅನುಗುಣವಾಗಿ ಮಾತ್ರ ವೆಚ್ಚ ಮಾಡಬಹುದಾಗಿರುತ್ತದೆ. ಅನುದಾನ ಒದಗಿಸದೇ ಇರುವ ವೆಚ್ಚ, ಕಾರ್ಯಕ್ರಮ, ಕಾಮಗಾರಿಗಳನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲವೂ ಆನ್‌ಲೈನ್‌ನಲ್ಲಿ ಇರಲಿದೆ. ಹಾಗಾಗಿ, ಅತಿ ಎಚ್ಚರಿಕೆಯಿಂದ ನಿಗದಿತ ಅವಧಿಯೊಳಗೆ ವಿವರಗಳನ್ನು ಸಲ್ಲಿಕೆ ಮಾಡುವಂತೆ ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ.

ಸ್ವೀಕೃತಿ, ಆಡಳಿತಾತ್ಮಕ ವೆಚ್ಚ, ಕಾಮಗಾರಿ ವೆಚ್ಚಗಳಿಗೆ ಸಂಬಂಧಿಸಿದಂತೆ, ಎಲ್ಲ ಬಡವಾಡೆ ಅಧಿಕಾರಿಗಳಿಂದ ಮಾಹಿತಿಯು ಕೇಂದ್ರ/ವಲಯ ಉಪನಿಯಂತ್ರಕರು (ಹಣಕಾಸು) ಅವರಿಗೆ ಸಲ್ಲಿಕೆಯಾಗುವಂತೆ ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.

ಬಿಬಿಎಂಪಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಬಿಲ್‌ ಮೊತ್ತ ಹಾಗೂ ಮುಂದುವರೆದ ಕಾಮಗಾರಿ ವಿವರ, ಕಾಮಗಾರಿಗೆ ಕಾರ್ಯಾದೇಶ ಪಡೆದಿರುವ ವಿವರ, ಕಾಮಗಾರಿಗೆ ಜಾಬ್‌ ಕೋಡ್‌ ಪಡೆದ ವಿವರ, ಟೆಂಡರ್‌ ಆಹ್ವಾನಿಸಲಾದ ವಿವರ, ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಕೆ ಮಾಡಿದ ವಿವರ ಹಾಗೂ ಹೊಸದಾಗಿ ಸಲ್ಲಿಕೆ ಮಾಡಿದ ಪ್ರಸ್ತಾವನೆಗಳನ್ನು ತಂತ್ರಾಂಶದ ಮೂಲಕವೇ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಈ ಹಿಂದೆ ಬಜೆಟ್‌ಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗುತ್ತಿದ್ದ ಆಯವ್ಯಯ ಮಾಹಿತಿ ನಮೂನೆ (ಬಿಐಡಿಎಸ್‌) ಅನ್ನು (ಐಎಫ್‌ಎಂಎಸ್‌) ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗಿದೆ. ವೇತನ, ಭತ್ಯೆ, ಪಿಂಚಣಿ, ಹಾಗೂ ನಿವೃತ್ತಿ ಸೌಲಭ್ಯಗಳ ಮಾಹಿತಿಯನ್ನು ಬಿಐಡಿಎಸ್‌ ಮೂಲಕ ಸಲ್ಲಿಕೆ ಮಾಡುವ ವಿವರಗಳನ್ನು ತಂತ್ರಾಂಶದ ಮೂಲಕವೇ ಸಲ್ಲಿಕೆ ಮಾಡಬಹುದಾಗಿದೆ.

ಇಂದು ನಾಪತ್ತೆಯಾದವರ ಹುಡುಕಾಟ, ಟ್ರೇಸ್‌ಗೆ ಬಿಬಿಎಂಪಿ ಮಾಡಿದೆ ಮಾಸ್ಟರ್ ಪ್ಲ್ಯಾನ್!

ಇನ್ನು 2020ರ ಡಿ.31ರ ವರೆಗೆ ಸಂಗ್ರಹಿಸಲಾದ ಆಸ್ತಿ ತೆರಿಗೆ ವಿವರ ಹಾಗೂ 2021 ಮಾ.31ರ ವರೆಗೆ ಸಂಗ್ರಹಿಸಬಹುದಾದ ವಿವರ, ಕರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಟ್ಟಡ ಮೇಲೆ ವಿಧಿಸಬಹುದಾದ ಶುಲ್ಕ, ದಂಡ, ಬಡ್ಡಿ, ಉಪ ಕರ ಮಾಹಿತಿಯನ್ನು ಪಡೆದು ಬಿಐಡಿಎಸ್‌ ನಮೂನೆ ಮೂಲಕ ಸಲ್ಲಿಕೆ ನಿರ್ದೇಶಿಸಲಾಗಿದೆ.

ಆದಾಯ, ಖರ್ಚು ಸಲ್ಲಿಕೆಗೆ ಸೂಚನೆ:

ಇನ್ನು 2019-20 ಹಾಗೂ 2020-21ನೇ ಸಾಲಿನ ಡಿಸೆಂಬರ್‌ ಅಂತ್ಯದ ವರೆಗೆ ಆದಾಯ ಮತ್ತು ಖರ್ಚು ವಿವರಗಳನ್ನು ಜ.4ರ ಒಳಗೆ ಸಲ್ಲಿಸಲು ಸೂಚಿಸಲಾಗಿದೆ. ಜತೆಗೆ 2021ರ ಜನವರಿಯಿಂದ ಮಾಚ್‌ರ್‍ 31ರ ವರೆಗೆ ಸಂಗ್ರಹಿಸಬಹುದಾದ ಸಂಪನ್ಮೂಲ ಹಾಗೂ ಪಾವತಿ ಅವಶ್ಯಕವಿರುವ ಅನುದಾನದ ವಿವರವನ್ನು ಐಎಫ್‌ಎಂಎಸ್‌ ಸಾಫ್ಟ್‌ವೇರ್‌ನ ಮುಖಾಂತರವೇ ಸಲ್ಲಿಕೆ ಮಾಡಬೇಕು. ಡಿ.31ರ ವರೆಗೆ ಮುಖ್ಯ ಆರ್ಥಿಕ ಅಧಿಕಾರಿಗಳು ನೀಡಲಾಗಿರುವ ಜಾಬ್‌ ಕೋಡ್‌ ಮಾಹಿತಿಯನ್ನು ಲೆಕ್ಕ ಶೀರ್ಷಿಕೆವಾರು ಸಲ್ಲಿಕೆಗೆ ಸೂಚಿಸಲಾಗಿದೆ.

ಚರ್ಚೆಗೆ ವೇಳಾ ಪಟ್ಟಿಸಿದ್ಧ

ಐಎಫ್‌ಎಂಎಸ್‌ ಸಾಫ್ಟ್‌ವೇರ್‌ನ ಮುಖಾಂತರ ಸಲ್ಲಿಕೆಯಾದ ವಿವರಗಳನ್ನು ಪರಿಶೀಲನೆಗೆ ಮಾಡಿ 2021-22ನೇ ಸಾಲಿನ ಅಂದಾಜು ಪಟ್ಟಿಯನ್ನು ಜ.4ರಿಂದ ಡಿ.12ರ ವರೆಗೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಜ.15ರಂದು ಬಜೆಟ್‌ ಅಂದಾಜು ಪಟ್ಟಿಯನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಕೆ ಮಾಡಲಾಗುತ್ತದೆ. ಸ್ಥಾಯಿ ಸಮಿತಿ ಸದಸ್ಯರು ಇಲ್ಲದಿರುವುದರಿಂದ ಆಡಳಿತಾಧಿಕಾರಿಗಳೇ ಅಧಿಕಾರ ಬಳಸಿ ಪರಿಶೀಲನೆ ನಡೆಸಿ ಅಂತಿಮ ಆಯವ್ಯಯ ಸಿದ್ಧಪಡಿಸಲಿದ್ದಾರೆ.

22,565 ಕೋಟಿ ರು. ಬಿಲ್‌

ಬಿಬಿಎಂಪಿಯ ಆದಾಯಕ್ಕಿಂತ ಹೆಚ್ಚು ಬಜೆಟ್‌ ಮಂಡನೆ ಆಗಿರುವುದರಿಂದ ಕೇಂದ್ರದ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಅನುದಾನದಡಿ ನಡೆಸಲಾದ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಬಿಬಿಎಂಪಿಯು ಒಟ್ಟು 22,565 ಕೋಟಿ ರು. ಬಿಲ್‌ ಪಾವತಿ ಬಾಕಿ ಇದೆ. ಬಜೆಟ್‌ ಅನುದಾನಕ್ಕೆ ಅನುಗುಣವಾಗಿ ಪ್ರತಿ ವರ್ಷ ಜಾಬ್‌ ಕೋಡ್‌ ಪಡೆದು ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಬಾಕಿ ಮೊತ್ತ ಹೆಚ್ಚಾಗುತ್ತಿದೆ. ಗುತ್ತಿಗೆದಾರರಿಗೆ ಸದ್ಯ ಎರಡು ವರ್ಷಗಳ ಅಂತರದಲ್ಲಿ ಬಿಲ್‌ ಪಾವತಿ ಮಾಡಲಾಗುತ್ತಿದೆ. ಇನ್ನು ಹಣಕಾಸು ಸಂಸ್ಥೆಗಳ ಮೂಲಕ ಬಿಬಿಎಂಪಿ ಒಟ್ಟು 286 ಕೋಟಿ ರು. ಸಾಲ ಪಡೆದಿದೆ.