Asianet Suvarna News Asianet Suvarna News

ಬಿಎಂಟಿಸಿ ಬಳಿ ನೌಕರರ ಪಿಎಫ್‌ಗೂ ಹಣವಿಲ್ಲ!

ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಕಳೆದೊಂದು ವರ್ಷದಿಂದ 310 ಕೋಟಿ ರು. ಭವಿಷ್ಯ ನಿಧಿ (ಪಿಎಫ್‌) ಹಣ ಬಾಕಿ ಉಳಿಸಿಕೊಂಡಿರುವುದಿಂದ ನಿವೃತ್ತ ನೌಕರರು ಸಕಾಲಕ್ಕೆ ಪಿಎಫ್‌ ಹಣ ಸಿಗದೆ ಪರದಾಡುವ ಸ್ಥಿತಿ ಎದುರಾಗಿದೆ. 

BMTC Employees Face problem For PF Amount
Author
Bengaluru, First Published Sep 11, 2019, 7:31 AM IST

ಮೋಹನ ಹಂಡ್ರಂಗಿ

ಬೆಂಗಳೂರು [ಸೆ.11]:  ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಕಳೆದೊಂದು ವರ್ಷದಿಂದ 310 ಕೋಟಿ ರು. ಭವಿಷ್ಯ ನಿಧಿ (ಪಿಎಫ್‌) ಹಣ ಬಾಕಿ ಉಳಿಸಿಕೊಂಡಿರುವುದಿಂದ ನಿವೃತ್ತ ನೌಕರರು ಸಕಾಲಕ್ಕೆ ಪಿಎಫ್‌ ಹಣ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಿಎಂಟಿಸಿಯು ನೌಕರರ ವೇತನದಲ್ಲಿ ಮಾಸಿಕ ಶೇ.12ರಷ್ಟುಹಣವನ್ನು ಪಿಎಫ್‌ ವಂತಿಗೆಗೆ ಕಡಿತ ಮಾಡುತ್ತದೆ. ನಿಗಮದಿಂದ ಅಷ್ಟೇ ಪ್ರಮಾಣದ ಹಣವನ್ನು ಸೇರಿಸಿ ಪಿಎಫ್‌ ನಿಧಿಗೆ ಪಾವತಿಸುತ್ತದೆ. ನೌಕರರು ನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಬಳಿಕ ಈ ಹಣವನ್ನು ಪಡೆದುಕೊಳ್ಳುತ್ತಾರೆ. ಕರ್ತವ್ಯ ನಿರ್ವಹಣೆ ವೇಳೆ ನೌಕರ ಮೃತಪಟ್ಟಾಗ ಆತನ ಕುಟುಂಬಕ್ಕೆ ಈ ಹಣ ಸಿಗುತ್ತದೆ. ಆದರೆ, ಬಿಎಂಟಿಸಿ 2018ರ ಜುಲೈನಿಂದ 2019ರ ಆಗಸ್ಟ್‌ವರೆಗೂ 310 ಕೋಟಿ ರು. ಹಣವನ್ನು ಪಿಎಫ್‌ ನಿಧಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದರಿಂದ ದಶಕಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನೌಕರರು ಸಕಾಲಕ್ಕೆ ಪಿಎಫ್‌ ಹಣ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತುರ್ತು ಕಾರ್ಯಕ್ಕೆ ಬಳಕೆ:

ಬಿಎಂಟಿಸಿಯು ಪ್ರತಿ ತಿಂಗಳು ನೌಕರರ ವೇತನ ಆಧರಿಸಿ ಪಿಎಫ್‌ ಮೊತ್ತ ಕಡಿತಗೊಳಿಸುತ್ತದೆ. ಈ ಹಣವನ್ನು ನಿಗಮದ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದಿಂದ ಪಿಎಫ್‌ ನಿಧಿಗೆ ಪಾವತಿಸುವಲ್ಲಿ ವಿಳಂಬವಾಗಿದೆ. ನಿಗಮವು ಕಳೆದ ನಾಲ್ಕೈದು ವರ್ಷಗಳಿಂದ ಸತತ ನಷ್ಟಅನುಭವಿಸುತ್ತಿರುವುದರಿಂದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಕೇವಲ ನೌಕರರ ಪಿಎಫ್‌ ಹಣ ಮಾತ್ರವಲ್ಲದೆ, ರಜೆ ನಗದೀಕರಣ, ನೌಕರರ ವೇತನದಲ್ಲಿ ಕಡಿತ ಮಾಡುವ ಸಹಕಾರ ಸಂಘದ ಸಾಲದ ಕಂತಿನ ಮೊತ್ತವನ್ನು ಅನಿವಾರ್ಯವಾಗಿ ನಿಗಮದ ತುರ್ತು ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಬಿಎಂಟಿಸಿಯ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರಿ ನೌಕರ ಅಥವಾ ಖಾಸಗಿ ನೌಕರ ಯಾರೇ ಆದರೂ ನಿವೃತ್ತಿ ನಂತರ ಬದುಕು ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ. ನೌಕರರು ನಿವೃತ್ತಿ ಬಳಿಕ ಪಿಎಫ್‌ ರೂಪದಲ್ಲಿ ದೊಡ್ಡ ಮೊತ್ತ ಕೈಸೇರುವ ವಿಶ್ವಾಸದಲ್ಲಿ ಕುಟುಂಬ, ಮದುವೆ, ಮನೆ, ಮಕ್ಕಳ ಭವಿಷ್ಯ ಸೇರಿದಂತೆ ಹಲವು ಕಾರಣಗಳಿಗೆ ಕಮಿಟ್‌ಮೆಂಟ್‌ ಮಾಡಿಕೊಂಡಿರುತ್ತಾರೆ. ನಿವೃತ್ತಿ ನಂತರವೂ ಸಕಾಲಕ್ಕೆ ಪಿಎಫ್‌ ಹಣ ಸಿಗದಿದ್ದರೆ ಆ ನೌಕರರು ಏನು ಮಾಡಬೇಕು? ಬಿಎಂಟಿಸಿ ಒಂದು ವರ್ಷದಿಂದ ಭವಿಷ್ಯ ನಿಧಿಗೆ ಹಣ ಪಾವತಿಸದೆ ವಿಳಂಬ ಮಾಡುತ್ತಿರುವುದರಿಂದ ನಿವೃತ್ತ ನೌಕರರು ಪಿಎಫ್‌ ಹಣಕ್ಕಾಗಿ ಪ್ರತಿ ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರಿಗೆ ನೌಕರರ ಮುಖಂಡ ಯೋಗೇಶ್‌ ಗೌಡ ಹೇಳಿದ್ದಾರೆ.

ಸರ್ಕಾರದ ನೆರವು ಅತ್ಯಗತ್ಯ:  ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸಾಕಷ್ಟುಸಮಸ್ಯೆಗಳಿವೆ. ಬಿಎಂಟಿಸಿಯಲ್ಲಿ ಕಳೆದೊಂದು ವರ್ಷದಿಂದ ಪಿಎಫ್‌ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ನಿವೃತ್ತ ನೌಕರರಿಗೆ ಸಮಸ್ಯೆಯಾಗಿದೆ. ಸತತ ನಷ್ಟದಿಂದ ನಿಗಮದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯ ಸರ್ಕಾರ ನಿಗಮದ ನೆರವಿಗೆ ಧಾವಿಸದಿದ್ದರೆ ಮತ್ತಷ್ಟುಅಧೋಗತಿ ತಲುಪುವುದರಲ್ಲಿ ಅನುಮಾನವಿಲ್ಲ. ಹಿಂದಿನ ಮೈತ್ರಿ ಸರ್ಕಾರ ಬಿಎಂಟಿಸಿ ನಿಗಮಕ್ಕೆ ನೂರು ಕೋಟಿ ರು. ವಿಶೇಷ ಅನುದಾನ ನೀಡಿತ್ತು. ಅದೇ ರೀತಿ ಇಂದಿನ ಸರ್ಕಾರವೂ ನಾಲ್ಕು ನಿಗಮಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಮೋಟಾರು ವಾಹನ ತೆರಿಗೆ, ಟೋಲ್‌ ಶುಲ್ಕ ಪಾವತಿಯಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕು. ಇದರಿಂದ ರಸ್ತೆ ಸಾರಿಗೆ ನಿಗಮಗಳು ಕೊಂಚ ಚೇತರಿಸಿಕೊಳ್ಳಲಿವೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕ​ರ್‍ಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್‌ ಹೇಳಿದ್ದಾರೆ.

Follow Us:
Download App:
  • android
  • ios