ಬೆಂಗಳೂರು(ಅ.15): ಕೇಂದ್ರ ಸರ್ಕಾರದ ಫೇಮ್‌ 2ನೇ ಹಂತದ ಅನುದಾನದಡಿ ಗುತ್ತಿಗೆ ಆಧಾರದಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಯೋಜನೆ ರೂಪಿಸಿರುವ ಬಿಎಂಟಿಸಿ, ಇದೀಗ ಹೈದರಾಬಾದ್‌ ಮೂಲದ ಕಂಪನಿಯ ಎಲೆಕ್ಟ್ರಿಕ್‌ ಬಸ್‌ವೊಂದನ್ನು ಪರೀಕ್ಷಾರ್ಥ ನಗರದಲ್ಲಿ ಪ್ರಾಯೋಗಿಕ ಸಂಚಾರಕ್ಕೆ ರಸ್ತೆಗೆ ಇಳಿಸಲು ಸಿದ್ಧತೆಯಲ್ಲಿ ತೊಡಗಿದೆ.

ಗುತ್ತಿಗೆ ಮಾದರಿಯಡಿ ಮುನ್ನೂರು ಎಲೆಕ್ಟ್ರಿಕ್‌ ಬಸ್‌ ಪಡೆಯಲು ಬಿಎಂಟಿಸಿ ಅಲ್ಪಾವಧಿ ಟೆಂಡರ್‌ ಆಹ್ವಾನಿಸಿದ್ದು, ಹಲವು ಕಂಪನಿಗಳು ಬಿಡ್‌ ಸಲ್ಲಿಸಿವೆ. ಈ ಪೈಕಿ ಹೈದರಾಬಾದ್‌ ಮೂಲದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಕಂಪನಿಯು ಪ್ರಾಯೋಗಿಕ ಸಂಚಾರಕ್ಕೆ ಬಿಎಂಟಿಸಿಗೆ 12 ಮೀಟರ್‌ ಉದ್ದದ ಎಲೆಕ್ಟ್ರಿಕ್‌ ಬಸ್‌ವೊಂದನ್ನು ನೀಡಿದೆ. ಪ್ರಸ್ತುತ ಈ ಬಸ್‌ ಡಿಪೋ 7ರಲ್ಲಿ ನಿಲುಗಡೆ ಮಾಡಲಾಗಿದೆ. ಬಿಎಂಟಿಸಿಯು ನಗರದ ಮೆಜೆಸ್ಟಿಕ್‌, ಕೆ.ಆರ್‌.ಮಾರ್ಕೆಟ್‌, ಹೊರವರ್ತುಲ ರಸ್ತೆ, ಏರ್‌ಪೋರ್ಟ್‌ ರಸ್ತೆ ಸೇರಿದಂತೆ ಆಯ್ದ ಎಂಟು ಮಾರ್ಗಗಳಲ್ಲಿ ಒಂದು ತಿಂಗಳ ಕಾಲ ಈ ಬಸ್‌ ಪ್ರಾಯೋಗಿಕ ಸಂಚಾರಕ್ಕೆ ಯೋಜನೆ ರೂಪಿಸಿದೆ.

ಮೆಟ್ರೋ ಫೀಡರ್‌ ಸೇವೆಗೆ ಎಲೆಕ್ಟ್ರಿಕ್‌ ಬಸ್‌ ಶೀಘ್ರ ಲಭ್ಯ

ಪ್ರಾಯೋಗಿಕ ಸಂಚಾರದ ವೇಳೆ ಮರುಳು ತುಂಬಿದ ಚೀಲಗಳನ್ನು ಇರಿಸಿಕೊಳ್ಳಲಾಗುವುದು. ಅಂತೆಯೆ ಬಸ್‌ನ ವೇಗ, ಆಸನ ವ್ಯವಸ್ಥೆ, ಬ್ಯಾಟರಿ ಕ್ಷಮತೆ, ತೂಕವಿದ್ದಾಗ ಎತ್ತರದ ರಸ್ತೆಗಳಲ್ಲಿ ಬಸ್‌ ಸಂಚಾರದ ವೇಗ, ಸೇರಿದಂತೆ ಬಸ್‌ನ ಪ್ರತಿಯೊಂದು ತಾಂತ್ರಿಕ ಅಂಶವನ್ನು ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಿದೆ. ಈ ಬಸ್‌ ಪ್ರಾಯೋಗಿಕ ಸಂಚಾರಕ್ಕೆ ಸಾರಿಗೆ ಇಲಾಖೆ, ಪರಿಸರ ಮಾಲಿನ್ಯ ಮಂಡಳಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯುವಲ್ಲಿ ನಿರತವಾಗಿದ್ದು, ಶೀಘ್ರದಲ್ಲೇ ಈ ಎಲೆಕ್ಟ್ರಿಕ್‌ ಬಸ್‌ ಪ್ರಾಯೋಗಿಕ ಸಂಚಾರಕ್ಕೆ ನಗರದ ರಸ್ತೆಗೆ ಇಳಿಯಲಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.