ಬೆಂಗಳೂರು [ನ.29]:  ನಗರದ ಎಲೆಕ್ಟ್ರಾನಿಕ್‌ ಸಿಟಿ ವಿಪ್ರೋ ಗೇಟ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶಾಂತಿನಗರದ ಘಟಕ 2ರ (ಕೆ.ಎ.57, ಎಫ್‌ 117) ಬಸ್‌ ಶಾಂತಿನಗರ- ಶಿವಾಜಿನಗರ- ಎಲೆಕ್ಟ್ರಾನಿಕ್‌ ಸಿಟಿ (ಮಾರ್ಗ ಸಂಖ್ಯೆ ಜಿ 3/33) ಮಾರ್ಗದಲ್ಲಿ ಸಂಚರಿಸುತ್ತದೆ. ಚಾಲನಾ ಸಿಬ್ಬಂದಿ ನಿಗದಿತ ಟ್ರಿಪ್‌ ಮುಗಿಸಿ ನಿಲ್ದಾಣದಲ್ಲಿ ಬಸ್‌ ನಿಲುಗಡೆ ಮಾಡಿದ್ದರು. ಮಧ್ಯಾಹ್ನ 1.20ರ ಸುಮಾರಿಗೆ ಬಸ್‌ ಮುಂಭಾಗದಲ್ಲಿ ದಟ್ಟಹೊಗೆ ಕಾಣಿಸಿಕೊಂಡು ಕ್ಷಣಮಾತ್ರದಲ್ಲೇ ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ ಚಾಲನಾ ಸಿಬ್ಬಂದಿ ಅಗ್ನಿಶಾಮಕ ಉಪಕರಣದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾಗಿ ಬಸ್‌ ಮುಂಭಾಗ ಪೂರ್ಣ ಆವರಿಸಿದೆ. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆ ವೇಳೆ ಬಸ್‌ನಲ್ಲಿ ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಇರಲಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಘಟನೆಯಲ್ಲಿ ಬಸ್‌ನ ಮುಂಭಾಗ ಬಹುತೇಕ ಬೆಂಕಿಯಿಂದ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣೆ ಪೊಲೀಸರು ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಸ್‌ ಎಂಜಿನ್‌ ಭಾಗದಲ್ಲಿ ಶಾರ್ಟ್‌ ಸಕ್ರ್ಯೂಟ್‌ ಆಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ತನಿಖೆ ಬಳಿಕ ನಿಖರ ಕಾರಣ ತಿಳಿದು ಬರಲಿದೆ ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ತಿಳಿಸಿದರು.