Asianet Suvarna News Asianet Suvarna News

ಬೆಂಗಳೂರಿಗರಿಗೆ ಸಂತಸದ ಸುದ್ದಿ, ಡಿಸೆಂಬರ್‌ಗೆ ಹಳದಿ ಮೆಟ್ರೋ ಸೇವೆ ಬಹುತೇಕ ನಿಶ್ಚಿತ

ಬಹುನಿರೀಕ್ಷಿತ ಆರ್‌.ವಿ.ರಸ್ತೆ - ಬೊಮ್ಮಸಂದ್ರ (19.15 ಕಿ.ಮೀ.) ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಡಿಸೆಂಬರ್‌ನಿಂದ ಮೆಟ್ರೋ ರೈಲಿನ ಸಂಚಾರ ಆರಂಭವಾಗುವುದು ಬಹುತೇಕ ನಿಶ್ಚಿತ.

BMRCL planning to Bengaluru Yellow Line metro will open in December  gow
Author
First Published Jul 24, 2024, 12:15 PM IST | Last Updated Jul 24, 2024, 12:15 PM IST

ಮಯೂರ್‌ ಹೆಗಡೆ 

ಬೆಂಗಳೂರು (ಜು.24): ಬಹುನಿರೀಕ್ಷಿತ ಆರ್‌.ವಿ.ರಸ್ತೆ - ಬೊಮ್ಮಸಂದ್ರ (19.15 ಕಿ.ಮೀ.) ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಡಿಸೆಂಬರ್‌ನಿಂದ ಮೆಟ್ರೋ ರೈಲಿನ ಸಂಚಾರ ಆರಂಭವಾಗುವುದು ಬಹುತೇಕ ನಿಶ್ಚಿತ. ಈ ಮಾರ್ಗಕ್ಕಾಗಿ ಸದ್ಯ ಒಂದು ರೈಲಿದ್ದು, ಇನ್ನೆರಡು ತಿಂಗಳಲ್ಲಿ ಎರಡು ಸೆಟ್‌ ರೈಲುಗಳು ಸೇರ್ಪಡೆ ಆಗುವ ನಿರೀಕ್ಷೆಯಿದೆ.

ಇನ್ಫೋಸಿಸ್‌, ಬಯೋಕಾನ್‌ನಂತಹ ಕಂಪನಿಗಳಿರುವ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ಈಚೆಗಷ್ಟೇ ಡಬಲ್‌ ಡೆಕ್ಕರ್ ಫ್ಲೈಓವರ್‌ನಲ್ಲಿ ವಾಹನಗಳ ಓಡಾಟಕ್ಕೆ ಚಾಲನೆ ಸಿಕ್ಕಿದೆ. ಇದೇ ವೇಳೆ ವರ್ಷಾಂತ್ಯಕ್ಕೆ ಈ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.

ಒಟ್ಟಾರೆ ಎಂಟು ರೈಲುಗಳಿಂದ ಹಳದಿ ಮಾರ್ಗ ಪ್ರಾರಂಭಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ. ಪ್ರಸ್ತುತ ಕಳೆದ ಫೆಬ್ರವರಿಯಲ್ಲಿ ಚೀನಾದ ಸಿಆರ್‌ಆರ್‌ಸಿ ಪೂರೈಸಿರುವ ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್ ಟ್ರೈನ್‌ ಕಂಟ್ರೋಲ್‌) ತಂತ್ರಜ್ಞಾನ ಆಧಾರಿತ ಚಾಲಕ ರಹಿತ ರೈಲು ಪ್ರತಿದಿನ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ. ಸಿಗ್ನಲಿಂಗ್‌, ವಿದ್ಯುತ್‌ ಪೂರೈಕೆ, ರೈಲಿನ ಸಾಮಾನ್ಯ ವೇಗ, ತಿರುವಿನ ವೇಗ, ಬ್ರೇಕ್‌ ವ್ಯವಸ್ಥೆ, ನಿಲುಗಡೆ ಸೇರಿ ಹಲವು ವಿಧಾನಗಳ ತಪಾಸಣೆಯನ್ನು ನಡೆಸಲಾಗುತ್ತಿದೆ.

ಮೂರು ವರ್ಷದೊಳಗೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿ ಪೂರ್ಣ

ಕಲ್ಕತ್ತಾದ ತೀತಾಘರ್‌ ರೈಲ್‌ ಸಿಸ್ಟಮ್ಸ್‌ ಲಿ. ನಿಂದ (ಟಿಆರ್‌ಎಸ್ಎಲ್‌) ಆಗಸ್ಟ್‌ಗೆ ಮೊದಲ ರೈಲು ಸೆಟ್‌ ನಮ್ಮ ಮೆಟ್ರೋಗೆ ಸೇರ್ಪಡೆ ಆಗಲಿದೆ. ಬಳಿಕ ಇನ್ನೊಂದು ಸೆಟ್‌ ರೈಲು ಕೂಡ ಬರಲಿದೆ. ಒಟ್ಟು ಮೂರು ರೈಲುಗಳಿಂದ ಮುಂದಿನ ತಪಾಸಣೆಗಳನ್ನು ಮಾಡಿಕೊಳ್ಳಲಿದ್ದೇವೆ. ಆರು ಸೆಟ್‌ ರೈಲುಗಳು ಬಂದಲ್ಲಿ ಒಂದನ್ನು ನಿರ್ವಹಣೆ, ತುರ್ತು ಪರಿಸ್ಥಿತಿಗೆ ಮೀಸಲು ಇಟ್ಟುಕೊಂಡು ಉಳಿದ ರೈಲುಗಳನ್ನು ಪ್ರಯಾಣಿಕರ ಸೇವೆಗೆ ಬಳಸಲಾಗುವುದು. ಸುಮಾರು 15 ನಿಮಿಷಕ್ಕೆ ಎಂಟು ಆವರ್ತನದಂತೆ ರೈಲುಗಳ ಸಂಚಾರ ಮಾಡಬಹುದು ಎಂದು ಮೆಟ್ರೋ ಅಧಿಕಾರಿಗಳು ವಿವರಿಸಿದರು.

ಬಹುಮಾದರಿ ಸಾರಿಗೆಗಾಗಿ ರಾಜ್ಯ ಸರ್ಕಾರಕ್ಕೆ 45 ಎಕರೆ ಭೂಮಿ ಕೊಡಿ ಎಂದು ಕೇಳಿದ ಮೆಟ್ರೋ!

ಒಟ್ಟಾರೆ ಹಳದಿ ಮಾರ್ಗವು 14 ರೈಲುಗಳಿಂದ ಕಾರ್ಯಾಚರಣೆ ಆಗಲಿದೆ. ಟಿಆರ್‌ಎಸ್‌ಎಲ್‌ ಸೆಪ್ಟೆಂಬರ್‌ ಬಳಿಕ ಪ್ರತಿ ತಿಂಗಳು ಒಂದು-ಎರಡು ರೈಲುಗಳಂತೆ ಹಂತ ಹಂತವಾಗಿ 2025ರ ಫೆಬ್ರವರಿ ಎಲ್ಲವನ್ನೂ ಪೂರೈಸುವುದಾಗಿ ತಿಳಿಸಿದೆ. ಇದಲ್ಲದೆ ಈಗಿನ ಚಲ್ಲಘಟ್ಟ-ವೈಟ್‌ಫೀಲ್ಡ್‌ ನೇರಳೆ ಮಾರ್ಗ, ಸಿಲ್ಕ್‌ ಇನ್‌ಸ್ಟಿಟ್ಯೂಟ್‌-ನಾಗಸಂದ್ರ ಹಸಿರು ಮಾರ್ಗಕ್ಕಾಗಿ ತೀತಾಘರ್‌ ರೈಲ್‌ ಸಿಸ್ಟಮ್ಸ್‌ ಕಂಪನಿ 20 ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ತಂತ್ರಜ್ಞಾನದ ರೈಲುಗಳನ್ನು ನಮ್ಮ ಮೆಟ್ರೋಗೆ ಒದಗಿಸಬೇಕಿದೆ. ಹೀಗೆ ಒಟ್ಟು 34 ರೈಲುಗಳು ಸೇರ್ಪಡೆ ಆಗಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದರು.

ಹೊಸ ಕೋಚ್‌ಗಳ ಆಸಿಲೇಷನ್ ಟ್ರಯಲ್ಸ್ ಮತ್ತು ಸುರಕ್ಷತಾ ಕ್ಲಿಯರೆನ್ಸ್ ಸೇರಿದಂತೆ ಎಲ್ಲಾ ಪ್ರಾಯೋಗಿಕ ಸಂಚಾರಗಳು ಮುಗಿಯಬೇಕು. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕನಿಷ್ಠ 6 ರೈಲುಗಳಿದ್ದರೆ ಡಿಸೆಂಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಬಹುದು. ಅಂತಿಮವಾಗಿ ಮೆಟ್ರೋ ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ಸಿಗಬೇಕು ನಿಗಮವು ತಿಳಿಸಿದೆ.

2021ರಲ್ಲೇ ಪೂರ್ಣ ಆಗಬೇಕಿದ್ದ ಮಾರ್ಗ: ಹಳದಿ ಮಾರ್ಗ 2021ರಲ್ಲಿಯೇ ಪೂರ್ಣಗೊಂಡು ಜನಸಂಚಾರದ ಕಾರ್ಯಾಚರಣೆ ಆರಂಭಿಸಬೇಕಿತ್ತು. ಆದರೆ, ಕಾಮಗಾರಿ ವಿಳಂಬ, ರೈಲುಗಳ ಪೂರೈಕೆಯಲ್ಲಿ ತಡವಾದ ಕಾರಣ ಮೂರು ವರ್ಷ ವಿಳಂಬವಾಗಿದೆ. ಇದೇ ವರ್ಷ ಮಾರ್ಚ್‌ಗೆ ಸಂಪೂರ್ಣ ಮಾರ್ಗ ಮುಕ್ತವಾಗಬೇಕಿತ್ತಾದರೂ ವರ್ಷಾಂತ್ಯಕ್ಕೆ ಮುಂದೂಡಿಕೆ ಆಗಿದೆ.

 ನಾಮಕರಣಕ್ಕೆ ಒತ್ತಾಯ: ಮೆಟ್ರೋ ನಿಲ್ದಾಣವೊಂದಕ್ಕೆ ಭಾರತದ ಮೊದಲ ಕಮಾಂಡರ್‌ ಇನ್‌ ಚೀಫ್‌ ಫೀಲ್ಡ್ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅವರ ನಾಮಕರಣ ಮಾಡುವಂತೆ ಕೊಡವ ಸಮಾಜ ಬಿಎಂಆರ್‌ಸಿಎಲ್‌ ಅನ್ನು ಒತ್ತಾಯಿಸಿದೆ. ಜೊತೆಗೆ ನಗರದಲ್ಲಿ ಮೆಟ್ರೋ ಮಾರ್ಗದ ಕನಸು ಕಂಡ ನಟ ಶಂಕರ್‌ನಾಗ್‌ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಹೆಚ್ಚಾಗಿದೆ. ಅದರಂತೆ ಈಚೆಗೆ ನಿಧನರಾದ ಮೆಟ್ರೋಗೆ ಧ್ವನಿ ನೀಡಿದ್ದ ಅಪರ್ಣಾ ವಸ್ತಾರೆ ಅವರ ಹೆಸರಿಡುವಂತೆಯೂ ಅಭಿಮಾನಿಗಳು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios