ಸಂಪತ್‌ ತರೀಕೆರೆ, ಕನ್ನಡಪ್ರಭ

ಬೆಂಗಳೂರು[ಜೂ.22]: ನಮ್ಮ ಮೆಟ್ರೋದ ಹಸಿರು ಮಾರ್ಗ(ಯಲಚೇನಹಳ್ಳಿ-ನಾಗಸಂದ್ರ ಮಾರ್ಗ)ದಲ್ಲಿ ಎರಡನೇ ಆರು ಬೋಗಿಯ ಮೆಟ್ರೋ ರೈಲು ಅಕ್ಟೋಬರ್‌ನಲ್ಲಿ ಸೇರ್ಪಡೆಯಾಗಲಿದ್ದು, ಇದಕ್ಕೆ ಪೂರಕ ಸಿದ್ಧತೆ ಆರಂಭಗೊಂಡಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಟ್ಟಣೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಬಿಎಂಆರ್‌ಸಿಎಲ್‌ ಹಸಿರು ಮಾರ್ಗ ದಲ್ಲಿ ಕಳೆದ ಜನವರಿ 28ರಂದು ಮೊದಲ ಆರು ಬೋಗಿಯ ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭಿಸಿತ್ತು. ಈ ರೈಲು ಪ್ರತಿ ದಿನ ದಟ್ಟಣೆ ಅವಧಿ (ಪೀಕ್‌ ಅವರ್‌)ಯಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ತಲಾ ಎರಡು ಟ್ರಿಪ್‌ಗಳನ್ನು ಮಾಡುತ್ತಿದೆ. ಬೆಳಗ್ಗೆ 9 ಗಂಟೆಯಿಂದ 11ರ ವರೆಗಿನ ದಟ್ಟಣೆ ಅವಧಿಯಲ್ಲಿ ಸುಮಾರು 9ರಿಂದ 10 ಸಾವಿರ ಮಂದಿ ಮೆಟ್ರೋ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಮೂರು ಬೋಗಿಯ ಮೆಟ್ರೋ ರೈಲುಗಳಲ್ಲಿ ಸ್ಥಳಾವಕಾಶ ಇಲ್ಲದಂತಹ ಪರಿಸ್ಥಿತಿ ಇದೆ.

ಆರು ಬೋಗಿಯ ಮೆಟ್ರೋ ರೈಲು ಕೇವಲ ಎರಡು ಟ್ರಿಪ್‌ ಬಂದು ಹೋಗುವುದರಿಂದ ಪ್ರಯಾಣಿಕರಿಗೆ ಸಮರ್ಪಕ ಸೇವೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಮತ್ತೊಂದು ಆರು ಬೋಗಿಯ ಮೆಟ್ರೋ ರೈಲು ಓಡಿಸುವಂತೆ ಮೆಟ್ರೋ ಪ್ರಯಾಣಿಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಎರಡನೇ ಆರು ಬೋಗಿಯ ಮೆಟ್ರೋ ರೈಲು ಓಡಿಸಲು ಸಿದ್ಧತೆ ನಡೆಸಿದೆ. ಅಕ್ಟೋಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಹಸಿರು ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ರೈಲು ಕಾರ್ಯಾಚರಣೆಗೆ ಇಳಿಯಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

5ನೇ ರೈಲು:

ಈಗಾಗಲೇ ಆರು ಬೋಗಿಗಳ ಮೂರು ರೈಲುಗಳು ಪೂರ್ವ ಮತ್ತು ಪಶ್ಚಿಮದ ನೇರಳೆ ಮಾರ್ಗದಲ್ಲಿ(ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗ) ಸಂಚರಿಸುತ್ತಿವೆ. ನಾಲ್ಕನೇ ರೈಲು ಹಸಿರು ಮಾರ್ಗದಲ್ಲಿ ಸಂಚರಿಸುತ್ತಿದ್ದು, ಐದನೇ ರೈಲನ್ನು ಅಕ್ಟೋಬರ್‌ನಲ್ಲಿ ಸಂಚಾರ ಮುಕ್ತ ಮಾಡಲಾಗುತ್ತದೆ. ನೇರಳೆ ಮಾರ್ಗದಲ್ಲಿ ಐಟಿ-ಬಿಟಿ ಕಂಪನಿಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ವಾಣಿಜ್ಯ ಚಟುವಟಿಕೆ ಕೇಂದ್ರಗಳು ಅಧಿಕವಾಗಿವೆ. ಈ ಭಾಗದಲ್ಲಿ ಬೆಳಗ್ಗೆ ಮತ್ತು ಸಂಜೆಯ ದಟ್ಟಣೆ ಅವಧಿಯಲ್ಲಿ ಸುಮಾರು 19 ಸಾವಿರಕ್ಕೂ ಅಧಿಕ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಆರು ಬೋಗಿಗಳ ರೈಲು ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿತ್ತು.

ಇದೀಗ ಹಸಿರು ಮಾರ್ಗದಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಜನವರಿಯಲ್ಲಿ ಮೊದಲ ಆರು ಬೋಗಿಯ ರೈಲು ಸಂಚಾರ ಆರಂಭಿಸಿದೆ. ಈ ಭಾಗದಲ್ಲಿ ಹೆಚ್ಚು ವಸತಿ ಪ್ರದೇಶಗಳನ್ನು ಹೊಂದಿದ್ದು, ವಾಣಿಜ್ಯ ಚಟುವಟಿಕೆಗಳು ಕಡಿಮೆ. ಆದ್ದರಿಂದ ಈ ಹಿಂದೆ ಹಸಿರು ಮಾರ್ಗದಲ್ಲಿ ಆರು ಬೋಗಿಗಳ ರೈಲಿಗೆ ಹೆಚ್ಚಿನ ಒತ್ತು ನೀಡಿರಲಿಲ್ಲ ಎಂದು ಮೆಟ್ರೋ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.15 ವಿದ್ಯುತ್‌ ಉಳಿತಾಯ

ಇದೀಗ ಸಂಚಾರ ಮಾಡುತ್ತಿರುವ ಮೂರು ಬೋಗಿಗಳ ರೈಲಿನಲ್ಲಿ ಒಂದು ಬಾರಿಗೆ ಅಂದಾಜು 750 ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು. ಆದರೆ ಆರು ಬೋಗಿಗಳ ರೈಲಿನಲ್ಲಿ ದುಪ್ಪಟ್ಟು ಪ್ರಯಾಣಿಕರನ್ನು ಕೊಂಡೊಯ್ಯಲಿದೆ. ಹೊಂದಾಣಿಕೆ ಮಾಡಿಕೊಂಡು ಪ್ರಯಾಣಿಸಿದರೆ ಒಂದು ಬಾರಿಗೆ ಗರಿಷ್ಠ 1900ರಿಂದ 2000 ಮಂದಿ ಪ್ರಯಾಣಿಸಬಹುದಾದಷ್ಟುಸಾಮರ್ಥ್ಯ ಹೊಂದಿದೆ. ಏಕಕಾಲದಲ್ಲಿ ಹೆಚ್ಚು ಜನರನ್ನು ಕೊಂಡೊಯ್ಯುವುದರಿಂದ ಶೇ.15ರಷ್ಟುವಿದ್ಯುತ್‌ ಉಳಿತಾಯ ಆಗಲಿದೆ. ಪ್ರಸ್ತುತ ಪ್ರತಿ ದಿನ ಹಸಿರು ಮತ್ತು ನೇರಳೆ ಮಾರ್ಗದಲ್ಲಿ 3.70ರಿಂದ 4 ಲಕ್ಷ ಜನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3 ಬೋಗಿಗಳ ಪ್ರತ್ಯೇಕಗೊಳಿಸಬಹುದು

ತುರ್ತು ಸಂದರ್ಭಗಳಲ್ಲಿ ಹೊಸದಾಗಿ ಜೋಡಣೆ ಮಾಡಿದ ಹೆಚ್ಚುವರಿ ಬೋಗಿಗಳ (ಮೂರು) ಬೋಗಿಗಳನ್ನು ಪ್ರತ್ಯೇಕಗೊಳಿಸಿ ಚಾಲನೆ ಮಾಡುವ ಸೌಲಭ್ಯವೂ ಇದರಲ್ಲಿದ್ದು, ಇದಕ್ಕಾಗಿ ಸ್ವಯಂಚಾಲಿತ ಪೆಂಡಂಟ್‌ ಕಂಟ್ರೋಲ್‌ ಆಪರೇಷನ್‌ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.