ಕೋಲಾರ(ಜು.30): ನೀರಿಗೆ ಬರ ಎದುರಿಸುತ್ತಿರುವ ಕೋಲಾರ ಜಿಲ್ಲೆಯಲ್ಲಿ ರಕ್ತ ಸಂಗ್ರಹಣೆಗೂ ಬರ, ಇಲ್ಲಿ ವರ್ಷಪೂರ್ತಿ ಜನ ಕುಡಿಯುವ ಹನಿ ಹನಿ ನೀರಿಗೂ ಪರದಾಡುತ್ತಾರೆ. ಅದರಂತೆ ತುರ್ತು ರೋಗಿಗಳು, ಅಪಘಾವಾಗಿ ತೀವ್ರ ಗಾಯಗೊಂಡ ರೋಗಿಗಳು ಆಸ್ಪತ್ರೆಗಳಲ್ಲಿ ದಾಖಲಾದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರಿಗೆ ಬೇಕಾದ ಅತ್ಯಮೂಲ್ಯವಾದ ರಕ್ತಕ್ಕೂ ಬರ ಬಂದಿದೆ.

ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ:

ಕೋಲಾರವನ್ನು ಹಾದು ಹೋಗುವ ಎನ್‌ಎಚ್‌ 85 ರಸ್ತೆಯಲ್ಲಿ ಮೊದಲಿನಿಂದಲೂ ಅಪಘಾತಗಳು ನಿತ್ಯ ಸಂಭವಿಸುತ್ತಲೇ ಇರುತ್ತವೆ. ವಾರಕ್ಕೆ ಏನೂ ಇಲ್ಲವೆಂದರೂ ನಾಲ್ಕೈದು ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಕೋಲಾರ ಗಡಿ ರಾಮಸಂದ್ರದಿಂದ ಹಿಡಿದು ಮುಳಬಾಗಿಲು ತಾಲೂಕು ಗಡಿ ನಂಗಲಿವರೆಗೂ ಒಂದಿಲ್ಲೊಂದು ಅಪಘಾತಗಳು ಇದ್ದೇ ಇರುತ್ತವೆ.

ಇಂತಹ ಅಪಘಾತಕ್ಕೆ ಒಳಗಾಗಿ ಜೀವನ್ಮರಣ ಹೋರಾಟದಲ್ಲಿರುವವರಿಗೆ ಕೋಲಾರದಲ್ಲೇ ತುರ್ತು ಚಿಕಿತ್ಸೆ ಮಾಡಬೇಕಾಗುತ್ತದೆ. ಕೋಲಾರದಿಂದ 60 ಕಿ.ಲೋ ಮೀಟರ್‌ ದೂರದ ಬೆಂಗಳೂರಿಗೆ ಹೋಗಲು 2 ತಾಸು ಬೇಕಾಗುತ್ತದೆ. ಇಷ್ಟುದೂರಕ್ಕೆ ಸಾಗಿಸುವಾಗ ಅಪಘಾತಕ್ಕೆ ಈಡಾದವರು ಬದುಕುಳಿಯುವುದು ಕಷ್ಟ.

ಆಸ್ಪತ್ರೆಯಲ್ಲಿ ರಕ್ತದ ಕೊರತೆ:

ಈ ಅಪಘಾತಕ್ಕೆ ಒಳಗಾದವರಿಗೆ ಕೋಲಾರದ ಎಸ್‌ಎನ್‌ಆರ್‌ ಸರ್ಕಾರಿ ಆಸ್ಪತ್ರೆ ಬಿಟ್ಟರೆ ಬೇರೆ ಆಸ್ಪತ್ರೆಗಳು ಇಲ್ಲ, ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಇದ್ದರೂ ಅಲ್ಲಿ ಬಡವರು ಚಿಕಿತ್ಸೆ ಪಡೆಯುವುದು ಅಷ್ಟು ಸಲೀಸಲ್ಲ. ಅಲ್ಲದೆ ಪ್ರತಿದಿನ ಆಸ್ಪತ್ರೆಯಲ್ಲಿ ನಡೆಯುವ ಶಸ್ತ್ರ ಚಿಕಿತ್ಸೆಗಳಿಗೂ ರಕ್ತದ ಬೇಡಿಕೆ ಇದೆ. ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣೆ ಪ್ರಮಾಣ ಕಡಿಮೆ ಇದೆ. ಇದರಿಂದಾಗಿ ಶಸ್ತ್ರ ಚಿಕಿತ್ಸೆ ಮುಂತಾದ ಗಂಭೀರ ರೋಗಿಗಳ ಚಿಕಿತ್ಸೆಗೆ ರಕ್ತದ ಕೊರತೆ ಉಂಟಾಗಿದೆ.

ವರ್ಷಕ್ಕೆ ಬೇಕು 16 ಸಾವಿರ ಯುನಿಟ್‌ ರಕ್ತ:

ಒಂದು ಸರ್ವೆ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಹದಿನಾರು ಲಕ್ಷ ಜನಸಂಖ್ಯೆ ಇದೆ, ವರ್ಷಕ್ಕೆ 16 ಸಾವಿರ ಯುನಿಟ್‌ ರಕ್ತ ಬೇಕು. ಸದ್ಯ ಜಿಲ್ಲೆಯಲ್ಲಿ ಕೇವಲ ನಾಲ್ಕರಿಂದ ಐದು ಸಾವಿರ ಯುನಿಟ್‌ ನಷ್ಟುಮಾತ್ರ ರಕ್ತ ಸಂಗ್ರಹವಾಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಸರಾಸರಿ 8-9 ಸಾವಿರ ಯುನಿಟ್‌ನಷ್ಟುರಕ್ತದ ಕೊರತೆ ಕಂಡುಬಂದಿದ್ದು ರಕ್ತದ ಬೇಡಿಕೆ ಹೆಚ್ಚಾಗಿರುವುದರಿಂದ ಬೆಂಗಳೂರಿನ ರೆಡ್‌ ಕ್ರಾಸ್‌ ಸಂಸ್ಥೆ, ಟಿಟಿಕೆ ಸಂಸ್ಥೆಗಳನ್ನೇ ನಂಬಿಕೊಳ್ಳುವಂತಾಗಿದೆ.

ರಾಜ್ಯಾದ್ಯಂತ ಸಂಚರಿಸಲಿದೆ ರಕ್ತ ಸಂಗ್ರಹಣೆ ವಾಹನ

ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಉಚಿತವಾಗಿ ರಕ್ತ ನೀಡಲಾಗುತ್ತಿದೆ. ಅವರ ಕಡೆಯವರಿಂದ ಬದಲಿ ರಕ್ತ ನೀಡುವುದು, ಅಥವಾ ರೋಗಿಗಳ ಸಂಬಂಧಿಕರು ರಕ್ತದಾನ ಮಾಡುತ್ತಿಲ್ಲ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ ಎಂಬುದು ಆಸ್ಪತ್ರೆ ವೈದ್ಯರ ಅಭಿಪ್ರಾಯ.

ರಕ್ತದಾನಕ್ಕೆ ಅರಿವು ಮೂಡಿಸಬೇಕು:

ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ ಕೂಡಾ ಈ ವಿಚಾರದಲ್ಲಿ ವಿಫಲವಾಗಿದೆ, ಜನರಲ್ಲಿ ರಕ್ತದಾನ ಮಾಡಲು ಮುಂದೆ ಬರುವವರ ಸಂಖ್ಯೆಯೂ ಇಳಿಮುಖಗೊಂಡಿದೆ. ಜನರಲ್ಲಿ ಇದರ ಅರಿವು ಕಡಿಮೆ ಆಗುತ್ತಿದೆ, ಸಂಘ ಸಂಸ್ಥೆಗಳ ಜೊತೆಗೆ ಜನರೊಟ್ಟಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ರಕ್ತದಾನಕ್ಕೆ ಪ್ರೇರೇಪಣೆ ನೀಡುವ ಕೆಲಸ ಮಾಡುತ್ತಿಲ್ಲ, ಅದಕ್ಕೆ ತಕ್ಕಂತೆ ಜನರಲ್ಲೂ ರಕ್ತದಾನ ಮಾಡುವ ಕುರಿತು ಆಸಕ್ತಿ ಕಡಿಮೆಯಾಗುತ್ತಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಲ್ಲೆಯಲ್ಲಿ ಕೇವಲ ನೀರಿಗಷ್ಟೇಅಲ್ಲ ರಕ್ತದ ಕೊರತೆಯೂ ಹೆಚ್ಚಾಗಿದೆ. ಜನರ ಮನೆಯಲ್ಲಿ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಇದ್ದರೆ ಆಸ್ಪತ್ರೆಗಳಲ್ಲಿ ಸಮರ್ಪಕ ರಕ್ತದ ಕೊರತೆಯಿಂದ ಪ್ರಾಣ ಬಿಡುವ ಪರಿಸ್ಥಿತಿ ಬಂದೊದಗಿದೆ. ದಾನಿಗಳಿಂದ ರಕ್ತ ಪಡೆಯಲು ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ ಜನತೆ ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡಲು ಮುಂದೆ ಬರುವಂತೆ ಅರಿವು ಮೂಡಿಸುವ ಅಗತ್ಯವಿದೆ.