ಮಂಗಳೂರು(ಅ.04): ನಿತ್ಯವೂ ಕಾರ್ಯದ ಒತ್ತಡಕ್ಕೆ ಒಳಗಾಗುವ ಪತ್ರಕರ್ತರಿಗೆ ಕೆಲಸ ಮಾಡುತ್ತಿರುವ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆ ನಡೆಸುವ ಬಿ.ಪಿ.ತಪಾಸಣೆ ಕಿಟ್‌ನ್ನು ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ಗೆ ಉಚಿತವಾಗಿ ಹಸ್ತಾಂತರಿಸಿದ್ದಾರೆ. ಇನ್ನು ಮುಂದೆ ಪತ್ರಕರ್ತರು ಪ್ರೆಸ್‌ಕ್ಲಬ್‌ಗೆ ಬಂದು ತಾವೇ ಸ್ವತಃ ಬಿ.ಪಿ. ತಪಾಸಣೆಯನ್ನು ನಡೆಸಬಹುದು.

ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅವರು ತಮ್ಮ ಸಹೋದ್ಯೋಗಿಗಳ ಸಹಿತ ಸಮಾನ ಮನಸ್ಕರ ತಂಡ ರಚಿಸಿದ್ದು, ಆ ಮೂಲಕ ಆರೋಗ್ಯವೇ ಭಾಗ್ಯ ಎಂಬ ವಾಟ್ಸ…ಆಪ್‌ ಗ್ರೂಪ್‌ ರೂಪಿಸಿ, ಇಂಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದರ ಅಂಗವಾಗಿ ಎಲ್ಲ ಶಾಲೆಗಳಿಗೆ ಬಿಪಿ ತಪಾಸಣೆ ಕಿಟ್‌ನ್ನು ನೀಡುತ್ತಿದ್ದು, ಅದೇ ರೀತಿ ಪತ್ರಕರ್ತರ ಸಂಘಕ್ಕೂ ಇದನ್ನು ಗುರುವಾರ ಕೊಡುಗೆಯಾಗಿ ನೀಡಿದ್ದಾರೆ.

ವೈದ್ಯರು, ವಕೀಲರು, ಪತ್ರಕರ್ತರು, ಶಿಕ್ಷಕರು, ಬ್ಯಾಂಕ್‌ ಸಿಬ್ಬಂದಿ, ಶೋರೂಮ್‌ ಸಿಬ್ಬಂದಿ ಸೇರಿದಂತೆ ವಿವಿಧ ವೃತ್ತಿನಿರತರಿಗೆ ಅವರ ಕೆಲಸದ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆ ಮಾಡುತ್ತಿರಬೇಕು. ಅದಕ್ಕಾಗಿ ಬಿಪಿ ಚೆಕ್‌ ಮೆಶಿನ್‌ ಇರುವುದು ಅಗತ್ಯ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್‌.

ಸ್ವಯಂ ತಪಾಸಣೆ ವಿಧಾನ

ಸುಮಾರು 2,300 ರು. ಬೆಲೆಯ ಈ ಕಿಟ್‌ನಲ್ಲಿ ಸುಲಭವಾಗಿ ಸ್ವತಃ ತಪಾಸಣೆ ನಡೆಸಬಹುದು. ನಾವೇ ತೋಳಿಗೆ ಕಿಟ್‌ನಲ್ಲಿರುವ ಬೆಲ್ಟನ್ನು ಸುತ್ತಿದ ಬಳಿಕ ಯಂತ್ರದ ಗುಂಡಿಯನ್ನು ಆನ್‌ ಮಾಡಬೇಕು. ಸ್ವಲ್ಪ ಹೊತ್ತಿನಲ್ಲಿ ಸ್ವಯಂ ಆಗಿ ರಕ್ತದೊತ್ತಡದ ಪರೀಕ್ಷೆ ನಡೆಯುತ್ತದೆ. ಕೊನೆಗೆ ಮೆಶಿನ್‌ನಲ್ಲೇ ಬಿ.ಪಿ. ಪ್ರಮಾಣದ ಡಿಸ್‌ಪ್ಲೇ ಕಾಣುತ್ತದೆ. ಒಂದೆರಡು ನಿಮಿಷದಲ್ಲಿ ಬಿ.ಪಿ. ತಪಾಸಣೆ ಮುಗಿದುಹೋಗುತ್ತದೆ.

ಗಬ್ಬೆದ್ದು ನಾರುತ್ತಿದ್ದ ಕೊಟ್ಟಾರ ಮೇಲ್ಸೇತುವೆ ಅಡಿಭಾಗಕ್ಕೆ ಹೊಸಲುಕ್..! 100 ಕ್ಕೂ ಹೆಚ್ಚು ಆಸನ

ಪತ್ರಕರ್ತರು ಪ್ರೆಸ್‌ ಕ್ಲಬ್‌ಗೆ ಆಗಮಿಸಿ ಸ್ವಯಂ ತಪಾಸಣೆ ನಡೆಸಬಹುದು. ಪತ್ರಕರ್ತರು ಇದರ ಪ್ರಯೋಜನ ಪಡೆಯಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಮತ್ತು ಪ್ರೆಸ್‌ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು ವಿನಂತಿಸಿದ್ದಾರೆ. ಅಲ್ಲದೆ ಈ ಕೊಡುಗೆ ನೀಡಿದ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಶಾಲೆಗಳಿಗೂ ಬಿಪಿ ಚೆಕ್‌ ಮಿಶಿನ್‌

ಈಗಾಗಲೇ ಶ್ವಾಸಕೋಶದ ಸಮಸ್ಯೆ ಇರುವ ಶಾಲಾ ಮಕ್ಕಳಿಗೆ ನೆಬ್ಯೂಲೈಸನ್‌ ಮೆಶಿನ್‌ ಕೊಡಲು 250 ಮಂದಿ ಶಿಕ್ಷಕರ ಆರೋಗ್ಯವೇ ಭಾಗ್ಯ ಗ್ರೂಪ್‌ ರಚಿಸಿದ್ದು, 20 ಶಾಲೆಗಳಿಗೆ ಕೊಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಬಿಪಿ ಚೆಕ್‌ ಮೆಶಿನ್‌ ಕೊಡಲಾಗುತ್ತಿದೆ.

ಬಳ್ಳಾರಿಯಲ್ಲಿ ಕೆಐಒಸಿಎಲ್‌ ಗಣಿಗಾರಿಕೆ ಶೀಘ್ರ ಆರಂಭ

ಶಾಲೆಗೆ ಬಿಪಿ ಚೆಕ್‌ ಮೆಶಿನ್‌ ಕೊಡುವುದು ಮಕ್ಕಳ ತಪಾಸಣೆಗಲ್ಲ, ಶಿಕ್ಷಕರಿಗಾಗಿ. ಸೆ.29ರ ವಿಶ್ವ ಹೃದಯ ದಿನದಂದು ಮಂಗಳೂರು ಜ್ಯೋತಿ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸರಳ ಆಟೊಮ್ಯಾಟಿಕ್‌ ಯಂತ್ರವನ್ನು ದಾನಿಗಳ ನೆರವು ಮತ್ತು ಫಾರ್ಮಾ ಕಂಪನಿ ಸಹಾಯದಿಂದ ಸದ್ಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 50 ಶಾಲೆಗಳಿಗೆ ಯಂತ್ರ ನೀಡಲಾಗುತ್ತಿದೆ. ಇದರ ಸ್ಪಂದನ ಗಮನಿಸಿ, ರಾಜ್ಯದ ಶಾಲೆಗಳಿಗೆ ವಿಸ್ತರಿಸುವ ಯೋಜನೆ ಇದೆ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್‌.

ದಸರಾ ವೇಷ ಧರಿಸಿ ಕೊರಗರ ಅವಹೇಳನ ಮಾಡಿದ್ರೆ ಶಿಕ್ಷೆ

ಈಗಂತೂ ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರು ಕೂಡಾ ಕೆಲಸದ ಒತ್ತಡದಿಂದ ರಕ್ತದೊತ್ತಡಕ್ಕೆ ಒಳಗಾಗುವುದನ್ನು ಗಮನಿಸಿದ್ದೇವೆ. ಅವರಿಗೆ ಕೆಲಸದ ಜಾಗದಲ್ಲಿ ತಪಾಸಣೆ ಮಾಡುವ ಯಾವ ಸೌಲಭ್ಯವೂ ಇರುವುದಿಲ್ಲ. ರಕ್ತದೊತ್ತಡವನ್ನು ಶೀಘ್ರ ಪತ್ತೆಹಚ್ಚಿ, ಜಾಗ್ರತೆ ವಹಿಸುವ ಮತ್ತು ಅಗತ್ಯ ಬಿದ್ದರೆ ಚಿಕಿತ್ಸೆ ನೀಡುವ ಉದ್ದೇಶದಿಂದ ಶಿಕ್ಷಕರಿಗೆ ಹಾಗೂ ಪತ್ರಕರ್ತರ ಸಂಘಕ್ಕೆ ಈ ಮೆಶಿನ್‌ ನೀಡಲು ನಿರ್ಧರಿಸಲಾಗಿದೆ ಎಂದು ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಹೇಳಿದ್ದಾರೆ.