ತುಮಕೂರು(ಜು.10): ಬಿಜೆಪಿ, ಜೆಡಿಎಸ್‌ಗೆ ಪ್ರತಿಷ್ಠೆಯಾಗಿದ್ದ ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಅರಕೆರೆ ತಾಲೂಕು ಪಂಚಾಯ್ತಿ ಕ್ಷೇತ್ರದ ಸದಸ್ಯೆ ಕವಿತಾ ರಮೇಶ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾಪಂನಲ್ಲಿ ಬಹುಮತವನ್ನು ಹೊಂದಿದ್ದ ಬಿಜೆಪಿ ಅಭ್ಯರ್ಥಿ ಕವಿತಾ ರಮೇಶ್‌ ಅವಿರೋಧವಾಗಿ ಆಯ್ಕೆಯಾಗಲು ಇದ್ದ ಅವಕಾಶವನ್ನು ಜೆಡಿಎಸ್‌ ಸುಲಭವಾಗಲು ಬಿಡದೇ, ಹೆತ್ತೇನಹಳ್ಳಿ ತಾಪಂ ಸದಸ್ಯ ಶಿವಕುಮಾರ್‌ ಅವರನ್ನು ಕಣಕ್ಕಿಳಿಸುವ ಮೂಲಕ ಚುನಾವಣೆಗೆ ಅವಕಾಶ ಕಲ್ಪಿಸಿತ್ತು.

ಸದಸ್ಯರ ಹೈಜಾಕ್‌:

ತಾಪಂ ಅಧ್ಯಕ್ಷರ ಗಾದಿಗೇರುವ ಅಭಿಲಾಶೆಯನ್ನು ಹೊಂದಿದ್ದ ಜೆಡಿಎಸ್‌, ಬಿಜೆಪಿಯ ಕೋರಾ ತಾಪಂ ಸದಸ್ಯೆ ಕವಿತಾ ಹಾಗೂ ಕುರುವೇಲ್‌ ಸದಸ್ಯೆ ಸುಧಾ ಅವರನ್ನು ಸೆಳೆದುಕೊಂಡರೆ, ಬಿಜೆಪಿ ಜೆಡಿಎಸ್‌ನ ಇಬ್ಬರು ಸದಸ್ಯರು ಸಭೆಗೆ ಗೈರಾಗುವಂತೆ ನೋಡಿಕೊಂಡಿದ್ದರಿಂದ ಬಿಜೆಪಿ ಗೆಲುವು ಸಾಧಿಸುವಂತಾಯಿತು. ಜೆಡಿಎಸ್‌ನ ಇಬ್ಬರು ಸದಸ್ಯರು ಹಾಗೂ ಬಿಜೆಪಿಯ ಇಬ್ಬರು ಸದಸ್ಯರು ಪಕ್ಷ ಬದಲಿಸಿದ್ದ ಉಂಟಾದ ಗೊಂದಲ ಲಾಭ ಪಡೆಯಲು ಯತ್ನಿಸಿದ್ದ ಜೆಡಿಎಸ್‌ಗೆ ಬಿಜೆಪಿ ತಿರುಗೇಟು ನೀಡಿದೆ.

ತೆರವು ಕಾರ್ಯಾಚರಣೆ ಮಾಡ್ತಿದ್ದ ಜೆಸಿಬಿ ಡ್ರೈವರ್ ಮೇಲೆ ಮಾಜಿ ಶಾಸಕ ಹಲ್ಲೆ

ಬಿಜೆಪಿ ಸದಸ್ಯರನ್ನು ಹೈಜಾಕ್‌ ಮಾಡಿದ ಬೆನ್ನೆಲ್ಲೆ ಜಿಲ್ಲಾಧ್ಯಕ್ಷ ಸುರೇಶ್‌ಗೌಡ ಅವರು ರೂಪಿಸಿದ ತಂತ್ರಕ್ಕೆ ಜೆಡಿಎಸ್‌ ಶರಣಾಗಿದೆ ಎನ್ನುತ್ತಾರೆ. ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಕಚೇರಿ ಆವರಣದಿಂದ ಹೊರಬರಲು ಸದಸ್ಯರು ಹಿಂದೇಟು ಹಾಕಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡ ಹಾಗೂ ಬಿಜೆಪಿ ಬೆಂಬಲಿಗರು, ಜೆಡಿಎಸ್‌ಗೆ ಬೆಂಬಲ ನೀಡಿದ್ದ ಸದಸ್ಯರನ್ನು ಪ್ರಶ್ನಿಸಲು ಕಾಯುತ್ತ ನಿಂತಿದ್ದರಿಂದ, ಜೆಡಿಎಸ್‌ ಸದಸ್ಯರು ಸಹ ಕಚೇರಿಯಿಂದ ಹೊರಬರಲು ಹಿಂದೇಟು ಹಾಕುವಂತಾಯಿತು.

ಬೆಂಬಲಿಗರ ನಡುವೆ ವಾಕ್ಸಾಮರ:

ಬಿಜೆಪಿ ಗೆಲುವು ಸಾಧಿಸದ ನಂತರ ಕಾಯುತ್ತ ನಿಂತಿದ್ದ ಜೆಡಿಎಸ್‌-ಬಿಜೆಪಿ ಸದಸ್ಯರ ವಾಕ್ಸಾಮರ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡ ಹಾಗೂ ಜೆಡಿಎಸ್‌ ಮುಖಂಡರ ನಡುವೆ ವಾಗ್ವಾದ ನಡೆಯುತ್ತಿದ್ದರಿಂದ ಉಪವಿಭಾಗಾಧಿಕಾರಿ ಅಜಯ್‌ ಅವರು, ಬೆಂಬಲಿಗರನ್ನು ಕಳುಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

ಗೆಲುವು ಸಾಧಿಸಿದ ಕವಿತಾ ರಮೇಶ್‌ ಅವರನ್ನು ಸ್ವಾಗತಿಸುವುದಕ್ಕಾಗಿ ಸುರೇಶ್‌ಗೌಡ ಹಾಗೂ ಬೆಂಬಲಿಗರು, ಕಚೇರಿ ಆವರಣಕ್ಕೆ ಬರುವವರೆಗೆ ಸುರೇಶ್‌ಗೌಡ ಹಾಗೂ ಗೌರಿಶಂಕರ್‌ ಪರ ಬೆಂಬಲಿಗರ ಘೋಷಣೆಗಳನ್ನು ಕೂಗಿದರು.

‘ಹೌಸ್‌ ಇಸ್‌ ದ ಜೋಶ್‌’; ನಿಂಬಾಳ್ಕರ್‌ ಟ್ವೀಟ್‌ ವೈರಲ್‌

ಈ ವೇಳೆ ಜಿಪಂ ಸದಸ್ಯರ ವೈ.ಎಚ್‌.ಹುಚ್ಚಯ್ಯ, ತಾಪಂ ಉಪಾಧ್ಯಕ್ಷ ಶಿವಕುಮಾರ್‌, ತಾಪಂ ಮಾಜಿ ಅಧ್ಯಕ್ಷ ಗಂಗಾಂಜನೇಯ, ಮುಖಂಡರಾದ ಡಾ.ನಾಗರಾಜ್‌, ರಮೇಶ್‌, ಗೂಳೂರು ಸಿದ್ದರಾಜು, ಮಾಸ್ತಿಗೌಡ, ತಾಪಂ ಸದಸ್ಯರಾದ ಮಧು ಸೇರಿದಂತೆ ಬಿಜೆಪಿಯ ಸದಸ್ಯರು ಉಪಸ್ಥಿತರಿದ್ದರು.