ತಿಪಟೂರು (ಡಿ.20):  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನಾದ್ಯಂತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಗೆಲುವು ಸಾಧಿಸಲಿದ್ದಾರೆಂದು ಬಿಜೆಪಿ ಮುಖಂಡ ಲೋಕೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಿಜೆಪಿ ಸದೃಢವಾಗಿದ್ದು, ಅದರಂತೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ 26 ಗ್ರಾಪಂಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಗಳಿಸಲಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು ಬಿಜೆಪಿ ಕಾರ್ಯಕರ್ತರು, ಮುಖಂಡರು ಅಭ್ಯರ್ಥಿಗಳ ಪರವಾಗಿ ಮತಪ್ರಚಾರ ತೊಡಗಿದ್ದಾರೆಂದು ತಿಳಿಸಿದರು.

ಚುನಾವಣೆ ಬಹಿಷ್ಕಾರ ಸರಿಯಲ್ಲ:  ತಾಲೂಕಿನ ಹೊನ್ನವಳ್ಳಿ ಗ್ರಾಮದ ಜನರು ಚುನಾವಣೆ ಬಹಿಷ್ಕರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರ ಉಳಿದಿರುವುದು ಸರಿಯಲ್ಲ. ಮುಂದೆ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇರಬಹುದು. ಈ ಭಾಗದಲ್ಲಿ ನೀರಿಗೆ ತೀವ್ರ ಹಾಹಾಕಾರ ಇರುವುದು ನಿಜ. ಆದರೆ ಚುನಾವಣೆಯನ್ನು ಬಹಿಷ್ಕರಿಸಿ ಸರ್ಕಾರ ಯೋಜನೆಗಳು ಸಿಗದಂತಾಗಲಿವೆ. ಹೊನ್ನವಳ್ಳಿ ಭಾಗದಲ್ಲಿ 70 ವರ್ಷಗಳಿಂದಲೂ ನೀರು ಹರಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಹೊನ್ನವಳ್ಳಿ ಭಾಗಕ್ಕೆ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು .116 ಕೋಟಿ ನೀಡಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ನೀರು ಹೊನ್ನವಳ್ಳಿ ಭಾಗಕ್ಕೆ ಹರಿಯಲಿಲ್ಲ. ಇದಕ್ಕಾಗಿ ರೈತರು ಚುನಾವಣೆ ಬಹಿಷ್ಕರಿಸುವುದು ಸರಿಯಲ್ಲ ಎಂದರು.

ದೇವೇಗೌಡರ ಬಾಯಿ ಮುಚ್ಚಿಸಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ! ...

ಈಗಾಗಲೇ ಪುನಃ ರಾಜ್ಯ ಸರ್ಕಾರ .36 ಕೋಟಿ ವೆಚ್ಚದಲ್ಲಿ 200 ಎಂಸಿಟಿಎಫ್‌ ನೀರು ಹೊನ್ನವಳ್ಳಿ ಭಾಗಕ್ಕೆ ಮತ್ತೆ ನೀರು ಹರಿಸಲು ಯೋಜನೆ ಚಾಲನೆ ನೀಡಲು ಮುಂದಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು, ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಬೇಕು. ಹೊನ್ನವಳ್ಳಿ ಭಾಗದ ಕೆರೆ ತುಂಬಿಸುವ ಯೋಜನೆ ಹೋರಾಟಕ್ಕೆ ನನ್ನ ಬೆಂಬಲವಿದ್ದು, ಇದಕ್ಕೆ ಸಂಬಂಧಿಸಿದಂತೆ ನೀರಿಗಾಗಿ ಎಂಟು ವರ್ಷಗಳ ಹಿಂದೆ ನಾನು 17 ಕಿ.ಮೀ ಪಾದಯಾತ್ರೆ ಮಾಡಿ ನೀರಿಗಾಗಿ ಹೋರಾಟ ಮಾಡಿದ್ದೇನು. ಈಗಲೂ ನಾನು ಹೊನ್ನವಳ್ಳಿ ಭಾಗದ ಜನರೊಂದಿಗೆ ನೀರಿಗಾಗಿ ಹೋರಾಟ ಮಾಡುತ್ತೇನೆ. ಈ ಬಗ್ಗೆ ಸರ್ಕಾರ ಸೇರಿದಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದು ನೀರು ಬಿಡುವ ಬಗ್ಗೆ ಚರ್ಚಿಸಲಾಗುವುದು. ಚುನಾವಣೆ ಬಹಿಷ್ಕಾರದ ಬಗ್ಗೆ ಕೆಲವರು ಕೈವಾಡ, ಪಿತೂರಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಯಾರ ಕೈವಾಡವೂ ಇಲ್ಲ. ಸುಖಾಸುಮ್ಮನೆ ಕಾಲು ಎಳೆಯುವ ಕೆಲಸ ಮಾಡಬೇಡಿ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್‌, ಸದಸ್ಯರಾದ ಭಾರತಿಮಂಜುನಾಥ್‌, ನದೀಮ್‌ ಪಾಷ, ಕೋಟೆಪ್ರಭು, ಆಶಿಫಾಬಾನು, ಅಕ್ರಂಪಾಷ, ಜಯರಾಂ, ಮುನ್ನಾ, ಮುಖಂಡರಾದ ರಾಜಶೇಖರ್‌, ಧರಣೀಶ್‌, ಶಿವಕುಮಾರ್‌, ವನಿತಾ ಪ್ರಸನ್ನಕುಮಾರ್‌ ಮತ್ತಿತರರಿದ್ದರು.