ಸಿಎಂ ಬೊಮ್ಮಾಯಿ ಬಿಜೆಪಿ ಪಂಜರದಲ್ಲಿದ್ದಾರಾ?: ಕಟೀಲ್ ಹೇಳಿದ್ದಿಷ್ಟು
* ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿ 60ಕ್ಕೂ ಹೆಚ್ಚು ಸೀಟು ಗೆಲ್ತೇವೆ
* ಮೂರು ಪಾಲಿಕೆಗಳೂ ಬಿಜೆಪಿ ವಶ ಗ್ಯಾರಂಟಿ: ಕಟೀಲ್
* ಇಬ್ಬರು ಮುಖಂಡರ ಒಳಜಗಳದಿಂದ ಪದಾಧಿಕಾರಿಗಳನ್ನು ಸಹ ನೇಮಿಸಿಲ್ಲ
ಧಾರವಾಡ/ಹುಬ್ಬಳ್ಳಿ(ಸೆ.01): ಪಾಲಿಕೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಪಾಲಿಕೆಯಲ್ಲೂ ಬಿಜೆಪಿಯೇ ಅಧಿಕಾರದ ಗದ್ದುಗೆ ಏರುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ 60ಕ್ಕೂ ಹೆಚ್ಚು ಸೀಟ್‌ಗಳನ್ನು ಗೆಲ್ಲಲಿದ್ದೇವೆ. ಕೇಂದ್ರ, ರಾಜ್ಯ ಮತ್ತು ಪಾಲಿಕೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಮುಂದಿನ 5 ವರ್ಷಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು. ಇನ್ನು ಪಕ್ಷದಿಂದ ಬಂಡಾಯ ಎದ್ದಿರುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಪಕ್ಷ ವಿರೋಧಿ ಕೆಲಸ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಕಟೀಲ್ ಎಚ್ಚರಿಕೆ ನೀಡಿದರು.
ಕಾಂಗ್ರೆಸಿಗರು ಡಿಕೆಶಿ, ಸಿದ್ದು ಪಂಜರದಲ್ಲಿ ಬಂಧಿ: ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯನವರ ಬಳಿ ಎರಡು ಪಂಜರಗಳಿದ್ದು ಪಕ್ಷದ ನಾಯಕರನ್ನು ಈ ಎರಡೂ ಪಂಜರಗಳಲ್ಲಿ ಬಂಧಿಸಿಡಲಾಗಿದೆ ಎಂದು ಕಟೀಲ್ ವ್ಯಂಗ್ಯವಾಡಿದ್ದಾರೆ.
ಬಂಡಾಯ ಎದ್ದ ಬಿಜೆಪಿ ಮುಖಂಡರ ಉಚ್ಛಾಟನೆ : 6 ವರ್ಷ ಔಟ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಪಂಜರದಲ್ಲಿದ್ದಾರೆ ಎಂಬ ಕೆಪಿಸಿಸಿ ವಕ್ತಾರ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೊಮ್ಮಾಯಿ ಈಗಲೂ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯಾವ ಪಂಜರದಲ್ಲಿಲ್ಲ ಎಂದರು. ಕಾಂಗ್ರೆಸ್ ಡಿಕೆಶಿ, ಸಿದ್ದರಾಮಯ್ಯ ಅವರ ಕೈಗೆ ಸಿಕ್ಕು ನಲುಗಿ ಹೋಗಿದೆ. ಧರ್ಮ ವಿರೋಧಿ ನೀತಿ ಹಾಗೂ ಭ್ರಷ್ಟಾಚಾರದಿಂದ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮುಖಂಡರು ಪ್ರಚಾರಕ್ಕೋಸ್ಕರ ಈ ರೀತಿ ಮಾತನಾಡುತ್ತಿದ್ದಾರೆ. ಇಬ್ಬರು ನಾಯಕರ ಒಳಜಗಳದಿಂದ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿಲ್ಲ. ಹೀಗಾಗಿ ಕಾರ್ಯಕರ್ತರು ನಿಧಾನವಾಗಿ ಕೈ ತಪ್ಪಿ ಹೋಗುತ್ತಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ನಶಿಸಿ ಹೋಗಲಿದ್ದು ಅದು ಇತಿಹಾಸದ ಪುಟ ಸೇರಲಿದೆ ಎಂದರು.
ಗಣೇಶೋತ್ಸವ ಬೇಕೇಂಬುದು ನನ್ನ ವೈಯಕ್ತಿಕ ಅಭಿಪ್ರಾಯ
ಕೋವಿಡ್ ನಿಯಮಗಳ ಆಧಾರದ ಮೇಲೆ ಯಾವ ರೀತಿ ಗಣೇಶೋತ್ಸ್ಸವ ಆಚರಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳು ಸೆ. 5ರಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದೇ ನಿಯಮಗಳ ಆಧಾರದ ಮೇಲೆ ಹಬ್ಬ ನಡೆಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸಾರ್ವಜನಿಕ ಗಣೇಶೋತ್ಸವ ಆಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ನಮ್ಮ ಪರಂಪರೆ ಜೊತೆ ಜನರ ಪ್ರಾಣವೂ ಅಷ್ಟೇ ಮುಖ್ಯ. ಸರ್ಕಾರ ಈಗ ತಜ್ಞರ ಅಭಿಪ್ರಾಯ ಪಡೆಯುತ್ತಿದೆ. ಅವರ ಅಭಿಪ್ರಾಯ ಪಡೆದು ಸಾರ್ವಜನಿಕ ಗಣೇಶೋತ್ಸವ ನಡೆಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ. ಈಗಾಗಲೇ ದೇವಾಲಯಗಳಲ್ಲಿ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಗಣೇಶೋತ್ಸವದ ವೇಳೆ ಬಹಳಷ್ಟು ಜನ ಸೇರುವ ಸಾಧ್ಯತೆಯೂ ಇದೆ. ಈ ಕಾರಣಕ್ಕಾಗಿ ನಡೆಸಬೇಕೋ ಬೇಡವೋ? ನಡೆದರೂ ಯಾವ್ಯಾವ ಮಾರ್ಗಸೂಚಿಗಳು ಇರಬೇಕು ಎಂಬುದರ ಬಗ್ಗೆ ಸರ್ಕಾರ ತಜ್ಞರ ಸಲಹೆ ಪಡೆಯುತ್ತಿದೆ. ತದನಂತರ ಸರ್ಕಾರ ನಿರ್ಧರಿಸುತ್ತದೆ ಎಂದರು.