ಕೆ.ಆರ್‌. ನಗರ (ಜ.21):  ಹಣ ಮತ್ತು ಅಧಿಕಾರ ದುರ್ಬಳಕೆಯಿಂದ ಉಪಚುನಾವಣೆಯಲ್ಲಿ ಜಯ ಗಳಿಸಿರುವ ಬಿಜೆಪಿಯವರ ಅಧಿಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ರಾಜ್ಯ ಯುವ ಜೆಡಿಎಸ್‌ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಮೂಲೆಪೆಟ್ಲು ಗ್ರಾಮದಲ್ಲಿ  ನಡೆದ ಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯ ಇತಿಹಾಸದಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದರು.

ಮೊದಲ ಬಾರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಇದ್ದ ವರ್ಚಸ್ಸು ಮತ್ತು ಜನಪ್ರಿಯತೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡ ನಂತರ ಮಸುಕಾಯಿತು. ಆದ್ದರಿಂದ ಮುಂದೆ ನಾವು ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ಅವರು ಘೋಷಿಸಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಮುಖಂಡರು ಕುಮಾರಸ್ವಾಮಿ ಅವರಿಗೆ ಸ್ವತಂತ್ರವಾಗಿ ಅಧಿಕಾರ ಮಾಡಲು ಬಿಡದೆ ಅವರ ಕೈಕಟ್ಟಿಹಾಕಿದ್ದರಿಂದ ರಾಜ್ಯದ ಅಭಿವೃದ್ಧಿ ಮತ್ತು ರೈತರ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಮತ್ತೆ ಅಂತಹ ತಪ್ಪು ಪುನರಾವರ್ತನೆಯಾಗದೆ ನಾಡಿನ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಜೆಡಿಎಸ್‌ನ್ನು ಪೂರ್ಣ ಬಹುಮತದೊಂದಿಗೆ ಜನತೆ ಅಧಿಕಾರಕ್ಕೆ ತರಬೇಕೆಂದು ಅವರು ಮನವಿ ಮಾಡಿದರು.

ಲೋಕಸಭೆ ಸೋಲು ನೆನೆದು ನಿಖಿಲ್ ಕುಮಾರಸ್ವಾಮಿ ಭಾವುಕ ...

ಜೆಡಿಎಸ್‌ ಅಧಿಕಾರದ ಅವಧಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಸರಿಯಾಗಿ ಗಮನಿಸದೆ ನಿರ್ಲಕ್ಷ್ಯ ಮಾಡಿತು ಎಂಬ ಆರೋಪವಿದ್ದು, ಇದಕ್ಕೆ ಅಲ್ಲಿನ ಪರಿಸ್ಥಿತಿ ಕಾರಣವಾಗಿದ್ದು, ಮುಂದೆ ಪಕ್ಷದ ರಾಷ್ಟಾ್ರಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ರಾಜ್ಯದ ಎಲ್ಲ ಮುಖಂಡರ ಮಾರ್ಗದರ್ಶನದಲ್ಲಿ ಸರ್ವರನ್ನೂ ಸಮನಾಗಿ ಕಾಣುವ ಕೆಲಸ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

ಗ್ರಾಮದ ಪರವಾಗಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ನೆನಪಿನ ಕಾಣಿಕೆ ನೀಡಲಾಯಿತು. ಶಾಸಕ ಸಾ.ರಾ. ಮಹೇಶ್‌ ಮತ್ತು ಇತರ ಮುಖಂಡರು ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್‌, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಬಿ. ಸಿದ್ದೇಗೌಡ, ನವನಗರ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ಬಸಂತ್‌, ಕೆ.ಆರ್‌. ನಗರ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ. ಕುಮಾರ್‌, ಕಾರ್ಯದರ್ಶಿ ಕೆ.ಟಿ. ತ್ಯಾಗರಾಜು, ಕೆ.ಆರ್‌. ನಗರ ಜೆಡಿಎಸ್‌ ಅಧ್ಯಕ್ಷ ಎಂ.ಕೆ. ಮಹದೇವ್‌, ಯುವ ಜೆಡಿಎಸ್‌ ಅಧ್ಯಕ್ಷ ಎಚ್‌.ಆರ್‌. ಮಧುಚಂದ್ರ, ಉಪಾಧ್ಯಕ್ಷ ಕಾಂತರಾಜು, ತಾಲೂಕು ವಕ್ತಾರ ಕೆ.ಎಲ್‌. ರಮೇಶ್‌, ಪುರಸಭೆ ಸದಸ್ಯ ಉಮೇಶ್‌, ತಾಲೂಕು ಯುವ ಜೆಡಿಎಸ್‌ ಮುಖಂಡ ಎಚ್‌.ಎಸ್‌. ಜಗದೀಶ್‌, ತಾಪಂ ಮಾಜಿ ಸದಸ್ಯ ನಾಗಣ್ಣ, ಗ್ರಾಪಂ ಸದಸ್ಯರಾದ ಮಹೇಶ್‌, ಜಯಂತಿ, ಮಾಜಿ ಸದಸ್ಯ ದಿವಾಕರ ಇದ್ದರು.