ಬಿಜೆಪಿ ಸಂಸದ ಜಿ.ಎಸ್‌. ಬಸವರಾಜು ಅವರ ಕಟ್ಟಾಬೆಂಬಲಿಗರಾಗಿದ್ದ ಹಾಲನೂರು ಲೇಪಾಕ್ಷ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ. ಆಂಜಿನಪ್ಪ ತಿಳಿಸಿದರು.

 ತುಮಕೂರು (ಕ.08): ಬಿಜೆಪಿ ಸಂಸದ ಜಿ.ಎಸ್‌. ಬಸವರಾಜು ಅವರ ಕಟ್ಟಾಬೆಂಬಲಿಗರಾಗಿದ್ದ ಹಾಲನೂರು ಲೇಪಾಕ್ಷ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ. ಆಂಜಿನಪ್ಪ ತಿಳಿಸಿದರು.

ತುಮಕೂರಿನ ಜೆಡಿಎಸ್‌ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದು, ಎರಡು ಬಾರಿ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿರುವ ಶಿಕ್ಷಣ ತಜ್ಞ ಹಾಲೆನೂರು ಲೇಪಾಕ್ಷ ಅವರು ಬಿಜೆಪಿಯ ನಡವಳಿಕೆಗೆ ಬೇಸತ್ತು ಜೆಡಿಎಸ್‌ ಪಕ್ಷ ಸೇರುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ತುಂಬಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿರುವ ಲೇಪಾಕ್ಷ ಅವರು, ಲಿಂಗಾಯಿತ ಸಮುದಾಯದ ಪ್ರಮುಖ ಮುಖಂಡರಾಗಿದ್ದು, ಆಗ್ನೇಯ ಶಿಕ್ಷಕರ ಮತ್ತು ಪದವಿಧರರ ಕ್ಷೇತ್ರಗಳಿರುವ ಮಧ್ಯ ಕರ್ನಾಟಕದ ಐದು ಜಿಲ್ಲೆಗಳಲ್ಲಿಯೂ ತನ್ನದೆ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಇವರ ಸೇರ್ಪಡೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ. ಹಾಗಾಗಿ ಅವರನ್ನು ಇಂದು ಸಂತೋಷದಿಂದ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ ಎಂದರು.

ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಮುಖಂಡ ಹಾಲೇನೂರು ಲೇಪಾಕ್ಷ ಮಾತನಾಡಿ, ಸಂಸದ ಜಿ.ಎಸ್‌.ಬಸವರಾಜು ಅವರ ಕಟ್ಟಾಅಭಿಮಾನಿಯಾಗಿ, ಅವರ ಎಲ್ಲಾ ಚುನಾವಣೆಗಳಲ್ಲಿ ಹಗಲಿರುಳು ಶ್ರಮವಹಿಸಿ, ಪಕ್ಷ ಸಂಘಟಿಸಿ, ಅವರ ಗೆಲುವಿಗೆ ಕೆಲಸ ಮಾಡಿದ್ದೇನೆ. ಆದರೆ ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಟಿಕೇಟ್‌ ನೀಡಿ, ಎ ಮತ್ತು ಬಿ ಫಾರಂ ನೀಡಿದ್ದರೂ, ಸಂಸದ ಜಿ.ಎಸ್‌.ಬಸವರಾಜು, ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶಗೌಡ,ತಿಪ್ಪಾರೆಡ್ಡಿ, ಮಾಜಿ ಸಿ.ಎಂ.ಸದಾನಂದ ಗೌಡ, ಶೋಭ ಕರಂದ್ಲಾಜೆ ಅವರುಗಳು ಷಡ್ಯಂತ್ರ ರೂಪಿಸಿ ನನಗೆ ನೀಡಿದ್ದ ಟಿಕೇಟ್‌ನ್ನು ವೈ.ಎ.ನಾರಾಯಣ ಸ್ವಾಮಿಗೆ ನೀಡಿ ನನಗೆ ಮೋಸ ಮಾಡಿದರು. ಸುಮಾರು 2 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿ ಕಳೆದ ನಾಲ್ಕುವರೆ ವರ್ಷಗಳ ಕಾಲ ಐದು ಜಿಲ್ಲೆಗಳ ಸುತ್ತಾಡಿ,ಸಂಘಟಿಸಿ,ಇನ್ನೇನು ಫಲ ಪಡೆಯಬೇಕು ಎನ್ನುವಾಗ ಮಹಾದ್ರೋಹ ಮಾಡಿದರು ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾಗಿರುವ ಸುರೇಶಗೌಡ ಲಿಂಗಾಯಿತ ವಿರೋಧಿಯಾಗಿದ್ದು, ನಮ್ಮ ಸಮುದಾಯದ ಅಧಿಕಾರಿಗಳಿಗೆ ತೀವ್ರ ರೀತಿಯ ತೊಂದರೆ ನೀಡಿದ್ದಾರೆ. ಅಲ್ಲದೆ ರಾಜಕೀಯವಾಗಿ ಯಾರನ್ನು ಬೆಳೆಯಲು ಬಿಟ್ಟಿಲ್ಲ. ಲಿಂಗಾಯಿತ ಮತದಾರರೇ ಹೆಚ್ಚಾಗಿರುವ ಊರುಕೆರೆ ಮತ್ತು ಬೆಳ್ಳಾವಿ ಕ್ಷೇತ್ರವನ್ನು ಅವರ 10 ವರ್ಷಗಳ ಶಾಸಕ ಅವಧಿಯಲ್ಲಿ ಅನುದಾನ ನೀಡದೆ ಮೋಸ ಮಾಡಿದ್ದರು. ಇದು ಅವರು ಲಿಂಗಾಯಿತ ವಿರೋಧಿ ಎನ್ನುವುದಕ್ಕೆ ಇರುವ ಸ್ಪಷ್ಟನಿರ್ದೇಶನ ಎಂದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದ ನನಗೆ ಟಿಕೇಟ್‌ ನೀಡದೆ ಹಣದ ಆಸೆಗೆ ಬೇರೆಯವರಿಗೆ ನೀಡಿದ್ದು, ನನಗೆ ಬಿಜೆಪಿ ಪಕ್ಷ ಮತ್ತು ಅದರ ಮುಖಂಡರ ವಿರುದ್ದ ಬೇಸರ ತರಿಸಿತ್ತು. ಹಾಗಾಗಿ ಬಂಡಾಯವಾಗಿ ಸ್ಪರ್ಧಿಸಿದ್ದೆ.ಅಂದಿನಿಂದ ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಮಾಡಿದ್ದೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಹಾಗೂ ಇತರೆ ಜೆಡಿಎಸ್‌ ಮುಖಂಡರು ನನಗೆ ಅಹ್ವಾನ ನೀಡಿದ್ದರು. ಅದನ್ನು ಒಪ್ಪಿಕೊಂಡು, ಯಾವುದೇ ಷರತ್ತು ಇಲ್ಲದೆ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಲೇಪಾಕ್ಷ ನುಡಿದರು.

ನಗರ ವಿಧಾನಪರಿಷತ್‌ ಜೆಡಿಎಸ್‌ ಆಭ್ಯರ್ಥಿ ಎನ್‌.ಗೋವಿಂದರಾಜು ಮಾತನಾಡಿ, ಪಕ್ಷಕ್ಕೆ ಹಾಲೇನೂರು ಲೇಪಾಕ್ಷ ಸೇರ್ಪಡೆಯಿಂದ ಆನೆ ಬಲ ಬಂದಂತಾಯಿತು. 20 ವರ್ಷಗಳಿಗೂ ಹೆಚ್ಚು ಕಾಲ ಬಿಜೆಪಿ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದರೂ ಅವರಿಗೆ ಎಂ.ಎಲ್‌.ಸಿ ಆಗುವ ಅವಕಾಶದಿಂದ ವಂಚಿಸಲಾಯಿತು. ಹಾಗಾಗಿ ಬಿಜೆಪಿ ನಾಯಕರ ನಡವಳಿಕೆಗೆ ಬೇಸತ್ತು ಜೆಡಿಎಸ್‌ ಸೇರಿದ್ದಾರೆ. ತುಮಕೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಇದು ಜೆಡಿಎಸ್‌ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷರಾದ ಟಿ.ಆರ್‌.ನಾಗರಾಜು, ಹಾಲೆನೂರು ಅನಂತು, ತುಮಕೂರು ನಗರ ಅಧ್ಯಕ್ಷ ವಿಜಯಕುಮಾರ್‌ಗೌಡ, ಜೆಡಿಎಸ್‌ ಮಹಾನಗರ ಪಾಲಿಕೆ ಸದಸ್ಯ ಮನು, ಜೆಡಿಎಸ್‌ ರಾಜ್ಯಕಾರ್ಯದರ್ಶಿ ಬೆಳ್ಳಿ ಲೋಕೇಶ್‌ ಇತರರಿದ್ದರು.

ಲೇಪಾಕ್ಷ ನನ್ನ ಗುರುಗಳು: ಶಾಸಕ

ಹಾಲೇನೂರು ಲೇಪಾಕ್ಷ ಅವರು ನನ್ನ ಗುರುಗಳು. ಹೆಗ್ಗೆರೆಯ ವಿಶ್ವಭಾರತಿ ಕಾಲೇಜಿನಲ್ಲಿ ನಾನು ಪಿ.ಯು.ಓದುವಾಗ ನನ್ನಗೆ ಶಿಕ್ಷಕರಾಗಿ ಒಂದು ವರ್ಷ ಪಾಠ ಮಾಡಿದ್ದಾರೆ. ಅವರ ರಾಜಕೀಯ ಜೀವನವನ್ನು ಗಮನಿಸಿದ್ದೇನೆ. ಬಿಜೆಪಿ ಪಕ್ಷ ಅವರನ್ನು ತೀರ ಹೀನಾಯವಾಗಿ ನಡೆಸಿಕೊಂಡಿದೆ. ಹಾಗಾಗಿ ನಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದೇವು. ಅವರು ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಅವರನ್ನು ಜೆಡಿಎಸ್‌ ಪಕ್ಷ ರಾಜ್ಯ ವಕ್ತಾರರನ್ನಾಗಿ ಮಾಡಬೇಕೆಂದು ಈಗಾಗಲೇ ಪಕ್ಷದ ಮುಖಂಡರಿಗೆ ಪತ್ರ ಬರೆದಿದ್ದೇನೆ. ಉತ್ತರ ಕರ್ನಾಟಕದ ಪಂಚರತ್ನಯಾತ್ರೆ ನಂತರ ಅವರ ನೇಮಕಾತಿ ಪತ್ರ ತಲುಪುವ ನಿರೀಕ್ಷೆ ಇದೆ. ಹಾಲನೂರು ಲೇಪಾಕ್ಷ ಅವರು ಲಿಂಗಾಯಿತ ಸಮುದಾಯದ ಮುಖಂಡರಷ್ಟೇ ಅಲ್ಲ. ಅವರು ಎಲ್ಲಾ ಸಮಾಜದ ಮುಖಂಡರು, ಶೀಘ್ರದಲ್ಲಿಯೇ ಸರ್ವ ಜನಾಂಗದ ಸಮಾವೇಶ ನಡೆಸಿ, ತಮ್ಮ ಇನ್ನಷ್ಟುಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಹೇಳಿದರು.