ಮಂಗಳೂರು: ಶಿಷ್ಟಾಚಾರ ಉಲ್ಲಂಘನೆಗೆ ಬಿಜೆಪಿ ಶಾಸಕರು ಗರಂ, ಸಚಿವ ಗುಂಡೂರಾವ್ ಎದುರಲ್ಲೇ ಆಕ್ರೋಶ..!
ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎದುರಲ್ಲೇ ಆಕ್ರೋಶ ಹೊರ ಹಾಕಿದ ಘಟನೆ ದ.ಕ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆದಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಜೂ.23): ದ.ಕ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗ್ತಿದೆ ಎಂದು ಜಿಲ್ಲೆಯ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎದುರಲ್ಲೇ ಆಕ್ರೋಶ ಹೊರ ಹಾಕಿದ ಘಟನೆ ದ.ಕ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆದಿದೆ.
ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರ್ಯಾರೋ ಬಂದು ವೇದಿಕೆಯಲ್ಲಿ ಕೂರ್ತಾರೆ. ಮಾಜಿ ಶಾಸಕರುಗಳು ವೇದಿಕೆಗೆ ಬಂದು ಕಾರ್ಯಕ್ರಮ ಉದ್ಘಾಟಿಸ್ತಾರೆ. ಶಾಸಕರು ಇರುವಾಗ ಯಾರ್ಯಾರೋ ಬಂದು ಕೂರುವುದು ಎಷ್ಟು ಸರಿ, ಕೆಲ ಮಾಜಿ ಶಾಸಕರು ಅಧಿಕಾರಿಗಳಿಗೆ ಮುಜುಗರ ಆಗೋ ರೀತಿ ಮಾಡ್ತಾರೆ ಎಂದು ಶಿಷ್ಟಾಚಾರ ಉಲ್ಲಂಘನೆ ವಿರುದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಿಡಿ ಕಾರಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೂಡ ಅಸಮಾಧಾನ ವ್ಯಕ್ತಪಡಿಸಿ, ಸಭೆಗಳಿಗೆ ನಮ್ಮನ್ನ ಕರೆಯದೇ ಯಾರನ್ನೋ ಕರೀತಾರೆ. ನಾಳೆ ಹೀಗೇ ಆದ್ರೆ ನಾನು ಕೂಡ 25 ಜನರನ್ನ ತಂದು ಕೂರಿಸ್ತೇನೆ ಎಂದು ಎಚ್ಚರಿಕೆ ನೀಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್ ರಿಂದಲೂ ಆಕ್ರೋಶ ವ್ಯಕ್ತವಾಯ್ತು. ಈ ವೇಳೆ ಕಾಂಗ್ರೆಸ್ ಎಂಎಲ್ ಸಿ ಹರೀಶ್ ಕುಮಾರ್ ಆಕ್ಷೇಪ ಪಡಿಸಿದರೂ ಶಾಸಕರು ಬಿಡಲಿಲ್ಲ. ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ವಿರುದ್ದ ಹರೀಶ್ ಪೂಂಜಾ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿ, ಮಾಜಿ ಶಾಸಕರು ಅಧಿಕಾರಿಗಳಿಗೆ ಬಾಯಿಗೆ ಬಂದ ಹಾಗೆ ಬೈತಾರೆ. ನಾನು ಶಾಸಕ ಇದ್ರೂ ಮಾಜಿ ಶಾಸಕರು ಅವಾಚ್ಯವಾಗಿ ನಿಂದಿಸ್ತಾರೆ. ಇದರಿಂದ ಅಧಿಕಾರಿಗಳಿಗೆ ಕೆಲಸ ಮಾಡಲು ಆಗದ ಸ್ಥಿತಿ ಇದೆ. ಉಸ್ತುವಾರಿ ಸಚಿವರು ಇಂಥದ್ದನ್ನ ಕೂಡಲೇ ನಿಲ್ಲಿಸಬೇಕು ಎಂದ ಹರೀಶ್ ಪೂಂಜಾ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗುಂಡೂರಾವ್, ಕಾರ್ಯಕ್ರಮಕ್ಕೆ ಕರೆದಾಗ ಶಾಸಕರು ಬನ್ನಿ. ಶಿಷ್ಟಾಚಾರ ಪ್ರಕಾರ ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎಂದ ಗುಂಡೂರಾವ್, ಶಾಸಕರನ್ನ ಅಗತ್ಯವಾಗಿ ಆಹ್ವಾನಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆರಿಗೆ ವೇಳೆ ರಕ್ತಸ್ರಾವದಿಂದ ಮೃತಪಟ್ಟಿದ್ದ ಮಹಿಳೆಯ ಮಗು ಸಾವು
ಪಶುಪಾಲನಾ ಅಧಿಕಾರಿಗೆ ಸ್ಪೀಕರ್ ಖಾದರ್ ತರಾಟೆ!
ದ.ಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಶುಪಾಲನಾ ಇಲಾಖೆ ಅಧಿಕಾರಿಗೆ ಸ್ಪೀಕರ್ ಖಾದರ್ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಗೋ ಶಾಲೆ ವಿಚಾರದಲ್ಲಿ ಪಶುಪಾಲನ ಇಲಾಖೆ ಉಪನಿರ್ದೇಶಕರಿಗೆ ತರಾಟೆಗೆ ತೆಗೆದುಕೊಂಡರು. ಪಶು ಸಂಜೀವಿನಿ ಅಂಬ್ಯುಲೆನ್ಸ್ ಇದ್ದರೂ ಚಾಲಕ ಇಲ್ಲ. ಚಾಲಕನ ಯಾಕೆ ನೇಮಿಸಿಲ್ಲ ಅಂತ ಯು.ಟಿ.ಖಾದರ್ ತರಾಟೆಗೆತ್ತಿಕೊಂಡರು. ಪ್ರತೀ ಗೋವಿಗೆ ಸರ್ಕಾರದಿಂದ ಎಷ್ಟು ಹಣ ಬರುತ್ತೆ ಅಂತ ಲೆಕ್ಕ ಕೇಳಿದ ಖಾದರ್, ಎಷ್ಟು ಹಣ ಬರಲು ಬಾಕಿಯಿದೆ ಅಂತ ಲೆಕ್ಕ ಕೇಳಿದರು. ಆದರೆ ಲೆಕ್ಕ ಕೊಡಲು ತಡವರಿಸಿದ ಅಧಿಕಾರಿಗೆ ಖಾದರ್ ತರಾಟೆಗೆ ಎತ್ತಿಕೊಂಡು, ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಬಳಿ ಲೆಕ್ಕ ಇಲ್ವಾ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಕೊಟ್ಟ ಹಣವನ್ನ ಲೂಟಿ ಮಾಡ್ತೀರ? ಅದಕ್ಕೆ ಲೆಕ್ಕ ಇಲ್ವಾ ಅಂತ ಆಕ್ರೋಶ ಹೊರಹಾಕಿದ್ರು. ಇಲ್ಲಿ ನಿಮ್ಮನ್ನ ಕೇಳೋಕೆ ಜನ ಇಲ್ವಾ? ಎಲ್ಲವೂ ಸರಿಯಿದ್ಯಾ? ಅಂಬ್ಯುಲೆನ್ಸ್ ಏಜೆನ್ಸಿಯವನು ಅದನ್ನ ಓಡಿಸ್ತಾನಾ ಅಂತ ನೀವು ನೋಡಲ್ವಾ? ಅವನಿಗೆ ಸುಮ್ಮನೆ ಬಿಲ್ ಮಾಡಿ ಕೊಡ್ತೀರಾ? ಇಲ್ಲಿ ಕೇಳೋರೇ ಇಲ್ವಾ? ಎಲ್ಲದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಗ್ರ ವರದಿ ಕೊಡಿ. ಆ ವರದಿ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುವುದು. ಮನುಷ್ಯನಿಗೆ ಎಷ್ಟು ಬದುಕಲು ಹಕ್ಕಿದ್ಯೋ ಅಷ್ಟೇ ಪ್ರಾಣಿಗಳಿಗೂ ಇದೆ ಅಂತ ಖಾದರ್ ನುಡಿದರು.
ಬಡವರಿಗೆ ನಿಯಮ ಸಡಿಲಿಸಿ; ಗುಂಡೂರಾವ್
ಬಡವರಿಗೋಸ್ಕರ ಡೀಮ್ಡ್ ಫಾರೆಸ್ಟ್ ನಿಯಮ ಸಡಿಲಿಕೆ ಮಾಡಿ ಎಂದು ದ.ಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ತಹಶಿಲ್ದಾರ್ ಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, 94 ಸಿ ಅರ್ಜಿ ವಿಲೇವಾರಿ ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಿ. ಅಧಿಕಾರಿಗಳು ಮನಸ್ಸು ಮಾಡಿದ್ರೆ ನಿಯಮ ಸಡಿಲಿಕೆ ಮಾಡಬಹುದು. ಅರಣ್ಯ ಮತ್ತು ಕಂದಾಯ ಅಧಿಕಾರಿಗಳು ಬಡವರತ್ತ ನೋಡಿ. ಆದಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲು ಗಮನ ಕೊಡಿ. ಅಧಿಕಾರಿಗಳು ನಿಯಮ ಸಡಿಲಿಸಿದ್ರೆ ಸುಪ್ರೀಂ ಕೋರ್ಟ್ ಕೂಡ ಒಪ್ಪುತ್ತದೆ ಎಂದು ದ.ಕ ಜಿಲ್ಲಾ ಕೆಡಿಪಿ ಸಭೆಯಲ್ಲಿ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.