ಹೊನ್ನಾಳಿ [ಮಾ.01] :  ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿಯವರ ಈಚಿನ ಹೇಳಿಕೆಗಳು ತೀರಾ ಅಸಂಬದ್ಧವಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಪರ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿರುವುದು ಸರಿಯಾಗಿಯೇ ಇದೆ ಎಂದರು.

ಯತ್ನಾಳ್‌ ಹೇಳಿಕೆ ಹಿಂಪಡೆಯದಿದ್ದರೆ ಸದನದ ಕಲಾಪ ನಡೆಯಲು ಬಿಡುವುದಿಲ್ಲವೆಂದು ಕಾಂಗ್ರೆಸ್ಸಿನವರು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ಸಿನ ಬಹುತೇಕ ಮುಖಂಡರು ದೊರೆಸ್ವಾಮಿ ಕಡೆ ವಕಾಲತ್ತು ವಹಿಸುತ್ತಿದ್ದಾರೆ ಎಂದು ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಗತಿಪರರ ಹೆಸರಿನಲ್ಲಿ ದೊರೆಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಮನೆಯಿಂದ ಏನು ಹುಕುಂ ಬರುತ್ತದೋ ಅದನ್ನೇ ದೊರೆಸ್ವಾಮಿ ತುತ್ತೂರಿ ಊದುತ್ತಾರೆ. ಹಿರಿಯರಾಗಿ ದೇಶದ ಬಗ್ಗೆ ಚಿಂತನೆ ಮಾಡಬೇಕೇ ಹೊರತು, ದೇವೇಗೌಡರ ಮನೆಯ ತುತ್ತೂರಿ ಊದುವುದನ್ನಲ್ಲ ಎಂದು ಅವರು ತಿಳಿಸಿದರು.

ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಸರ್ವ ಧರ್ಮೀಯರೂ ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ. ಆದರೆ, ವಿಪಕ್ಷದವರು ಇಲ್ಲಸಲ್ಲದ ಆರೋಪ ಮಾಡಿ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯು.ಟಿ.ಖಾದರ್‌ ಒಬ್ಬ ಮತಾಂಧನಾಗಿದ್ದು, ಪಾಕಿಸ್ತಾನಕ್ಕೆ ಮೋದಿ ಬಿರಿಯಾನಿ ತಿನ್ನಲು ಹೋಗಿದ್ದರು ಎಂದ ಮೂರ್ಖ ಎಂದು ಅವರು ಹರಿಹಾಯ್ದರು.