ಬಳ್ಳಾರಿ(ಮೇ.27): ವಿಧಾನ ಪರಿಷತ್‌ ಚುನಾವಣೆಗೆ ‌ಸ್ಪರ್ಧಿಸಲು ಮಾಜಿ ಸಚಿವ ಹಾಗೂ ಗಣಿಧಣಿ ಜನಾರ್ದನ ರೆಡ್ಡಿ ಅವರು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇವರ ಮನವಿಗೆ ಯಾವ ರಾಜಕೀಯ ನಾಯಕರೂ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. 

ಹಿಂದೆ ಈ ನಾಯಕನ ಹಿಂದೆ ಬರುತ್ತಿದ್ದ ರಾಜಕೀಯದ ಮಂದಿ ಈಗ ಇವರನ್ನು ಕಂಡರೇ ಭಯ ಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ‌ ಮೊಟ್ಟ ಮೊದಲ ಬಾರಿಗೆ ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಕಾರ್ಯಕರ್ತರಾಗಿದ್ದರು ಎಂದೇ ಹೇಳಲಾಗುತ್ತದೆ. ಅಂದು ಆಪರೇಷನ್‌ ಬಿಜೆಪಿ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಈ ನಾಯಕರ ಪರಿಶ್ರಮ ಬಹಳಷ್ಟೇ ಇತ್ತು ಎಂದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. 

'ಜನಾರ್ದನ ರೆಡ್ಡಿ ಇದ್ದಿದ್ರೆ ಶ್ರೀರಾಮುಲು ಇನ್ನೂ ಬೇಗ ಡಿಸಿಎಂ ಆಗ್ತಿದ್ರು'

ಆದರೆ, ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ಮತ್ತೊಮ್ಮೆ ರಾಜಕೀಯ ಮರು ಜನ್ಮ ಪಡೆಯಲು ಭಾರಿ ಪ್ಲಾನ್ ನಡೆಸುತ್ತಿರುವ  ಜನಾರ್ದನ ರೆಡ್ಡಿ ಈಗ ಮೂಲೆ ಗುಂಪಾಗಿದ್ದಾರೆ ಎನ್ನಲಾಗುತ್ತಿದೆ.

ರೆಡ್ಡಿ, ರಾಮುಲು ವಿರುದ್ಧ ಐಟಿಯಿಂದಲೇ ದೂರು!

ವಿಧಾನ ಪರಿಷತ್‌ ಚುನಾವಣೆಗೆ ‌ಸ್ಪರ್ಧಿಸಲು ಜನಾರ್ದನ ರೆಡ್ಡಿ ಹಲವು ಬಿಜೆಪಿ ನಾಯಕರ ಬಳಿ ಮರಳಿ ರಾಜಕೀಯಕ್ಕೆ ಬರುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದರೆ, ಯಾವೊಬ್ಬ ನಾಯಕರು ಇವರ ಬಗ್ಗೆ ಹೈಕಮೆಂಡ್ ಅಥವಾ ರಾಜ್ಯದ ಪ್ರಮುಖರ ಮುಂದೆ ಮಾತನಾಡಲು ಮುಂದೆ ಬರುತ್ತಿಲ್ವಂತೆ. ಈ ಹಿಂದೆ ರಾಜ್ಯ ರಾಜಕೀಯವನ್ನೆ ನಡುಗಿಸಿದ್ದ ನಾಯಕ ಇದೀಗ ರಾಜಕೀಯ ಮರುಜೀವ ಪಡೆಯಲು ಕಂಡ ಕಂಡವರ ಬಳಿ ಮಾತನಾಡುತ್ತಿದ್ದಾರೆ. ರಾಜಕೀಯ ಚದುರಂಗದಲ್ಲಿ‌ ಉನ್ನತ ಸ್ಥಾನದಲ್ಲಿದ್ದು ಇದೀಗ ಪಾತಳಕ್ಕಿಳಿದಿರುವ ರೆಡ್ಡಿ ಮತ್ತೊಮ್ಮೆ ರಾಜಕೀಯಕ್ಕೆ ಬರುತ್ತಾರಾ? ಇಲ್ಲ ಎಂಬುದನ್ನ ಕಾಲವೇ ನಿರ್ಧರಿಸಬೇಕಿದೆ.