* ಕಾಂಗ್ರೆ​ಸ್‌​ನಿಂದ ಇಲ್ಲ​ಸ​ಲ್ಲದ ಆರೋಪ* ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ನಾಯಕ ಅಸ​ಮಾ​ಧಾ​ನ* ಸಚಿವ ಹೆಬ್ಬಾರ ಇರುವ ಅಲ್ಪ ಅವಧಿಯಲ್ಲೇ ಕೋವಿಡ್‌ ಸೋಂಕಿಗೆ ಬೇಕಾದ ಚಿಕಿತ್ಸಾ ವ್ಯವಸ್ಥೆ ಮಾಡಿಸಿದ್ದಾರೆ

ಕಾರವಾರ(ಮೇ.26): ಬಿಜೆಪಿ ಶಾಸಕರ, ಸಚಿವರ ಬಗ್ಗೆ ಕಾಂಗ್ರೆಸ್‌ ಮುಖಂಡರು ಇಲ್ಲಸಲ್ಲದ ಆರೋಪ ಮಾಡಿರುವುದು ಖಂಡನೀಯ. ಕಾಂಗ್ರೆಸ್‌ನ ಆರ್‌.ವಿ. ದೇಶಪಾಂಡೆ ದೀರ್ಘಾವದಿಯಲ್ಲಿ ಉಸ್ತುವಾರಿ ಸಚಿವರಾಗಿದ್ದು ಏನು ಸಾಧನೆ ಮಾಡಿದ್ದಾರೆ? ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ನಾಯಕ ಪ್ರಶ್ನಿಸಿದ್ದಾರೆ. 

ಮಂಗವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಕ ದೊಡ್ಡೂರು, ಬಿಜೆಪಿ ಶಾಸಕರು, ಸಚಿವರು ವೈಯಕ್ತಿಕ ಸಹಾಯ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಆರ್‌.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ ಹಾಗೂ ಇತರೆ ಕಾಂಗ್ರೆಸ್‌ ನಾಯಕರ ರೀತಿ ದುಡ್ಡು ಮಾಡಿಲ್ಲ. ಮಾಡಿದ ಸಣ್ಣಪುಟ್ಟ ಕೆಲಸಕ್ಕೆ ಪ್ರಚಾರ ತೆಗೆದುಕೊಳ್ಳುವುದಿಲ್ಲ. ಜನರಿಗೆ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡು ಪ್ರಚಾರ ಪಡೆಯುವುದು ಮುಖ್ಯವಲ್ಲ ಎಂದರು.

ಕೆ. ಶಂಭು ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕೆಲಸ ಮಾಡದೆ ಇರುವುದಕ್ಕೆ ಸೋಂಕು ಹೆಚ್ಚಾಗಿದೆ ಎಂದು ದೂರಿದ್ದಾರೆ. ಹಾಲಿ ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ಮಾಡಿದಷ್ಟು ದೇಶಪಾಂಡೆ ಮಾಡಿದ್ದಾರಾ? ಸುದೀರ್ಘ ಅವಧಿಯಲ್ಲಿ ಆರ್‌.ವಿ. ದೇಶಪಾಂಡೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಗೆ ಒಂದಾದರೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಯತ್ನ ಮಾಡಿದ್ದಾರೆಯೇ? ಸಚಿವ ಶಿವರಾಮ ಹೆಬ್ಬಾರ ಇರುವ ಅಲ್ಪ ಅವಧಿಯಲ್ಲೇ ಕೋವಿಡ್‌ ಸೋಂಕಿಗೆ ಬೇಕಾದ ಚಿಕಿತ್ಸಾ ವ್ಯವಸ್ಥೆ ಮಾಡಿಸಿದ್ದಾರೆ. ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ ಹಗಲಿರುಳು ಕೋವಿಡ್‌ ತಡೆಯಲು ಹೋರಾಟ ನಡೆಸುತ್ತಿದ್ದಾರೆ ಎಂದರು.

ಕೋವಿಡ್‌ ನಿಯಂತ್ರ​ಣಕ್ಕೆ 15ನೇ ಹಣ​ಕಾಸು ಯೋಜನೆ ಹಣ ಬಳ​ಸಿ: ಈಶ್ವರಪ್ಪ

ಸಚಿವರ, ಶಾಸಕರ ಮುಂಜಾಗೃತೆಯಿಂದ ಜಿಲ್ಲೆಯಲ್ಲಿ ಕೋವಿಡ್‌ ಸಮಯದಲ್ಲಿ ಅನಾಹುತ ಆಗಿಲ್ಲ. ಬೇರೆ ಜಿಲ್ಲೆಗಳಲ್ಲಿ ಬೆಡ್‌ ಇಲ್ಲದೇ, ಆಕ್ಸಿಜನ್‌ ಸಿಗದೆ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಆ ರೀತಿ ಘಟನೆ ಆಗಿದೆಯೇ? ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿಕೋವಿಡ್‌ಗೆ ಬಳಲಿದ್ದರೂ ಸತತ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಜನರಿಗೆ ಬೇಕಾಗುವ, ಚಿಕಿತ್ಸೆಗೆ ಅಗತ್ಯವಿರುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಸಂಸದ ಅನಂತಕುಮಾರ ಹೆಗಡೆ ಬಗ್ಗೆ ಪ್ರಶ್ನಿಸಿದಾಗ, ಸಂಸದರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈಗ ದೇಶದಲ್ಲಿ ಆರೋಗ್ಯ ತುರ್ತು ಸಂದರ್ಭವಾಗಿದ್ದು, ಸಂಸದರಾಗಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ದೂರವಾಣಿ ಮೂಲಕ ನೀಡುತ್ತಿದ್ದಾರೆ ಎಂದರು.

ಸಂಸದರು ಜನರ ಸಹಾಯಕ್ಕೆ ಬಂದಿಲ್ಲ ಎನ್ನುವ ಆರೋಪವಿದೆ ಎನ್ನುವ ಪ್ರಶ್ನೆಗೆ, ಕಾಂಗ್ರೆಸ್‌ ಅವಧಿಯಲ್ಲೇ ಇಲ್ಲಿನ ಕದಂಬ ನೌಕಾನೆಲೆ ನಿರಾಶ್ರಿತರಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದ್ದರೂ ಅಂದಿನ ಕಾಂಗ್ರೆಸ್‌ ಸರ್ಕಾರ ವಿಳಂಬ ಮಾಡಿತ್ತು. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನಂತಕುಮಾರ ಸರ್ಕಾರದ ಗಮನ ಸೆಳೆದು ಪರಿಹಾರ ಕೊಡಿಸಿದ್ದಾರೆ. ಸಂಸದರಾಗಿ ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿರೋಧಿಗಳಿಗೆ ಅದು ಕಾಣುವುದಿಲ್ಲ ಎಂದರು.

ವೈದ್ಯಕೀಯ ಕಾಲೇಜಿನ ಕೋವಿಡ್‌ ವಾರ್ಡ್‌ ಅವ್ಯವಸ್ಥೆ ಆಗರವಾಗಿದೆ. ಇದು ಸಚಿವರ ಗಮನಕ್ಕೆ ಬಂದಿದೆಯೇ ಎಂದು ಕೇಳಿದಾಗ, ಸಚಿವರಿಗೆ ಹಾಗೂ ಸ್ಥಳೀಯ ಶಾಸಕರಿಗೆ ಈ ಬಗ್ಗೆ ತಿಳಿಸುತ್ತೇನೆ. ಏನು ವ್ಯವಸ್ಥೆ ಆಗಬೇಕು? ಯಾವ ರೀತಿ ವ್ಯವಸ್ಥೆ ಮಾಡಬೇಕು. ತಪ್ಪುಗಳನ್ನು ಹೇಗೆ ತಿದ್ದಬೇಕು ಎನ್ನುವ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ರವಿರಾಜ ಅಂಕೋಲೆಕರ, ಉದಯ ಬಶೆಟ್ಟಿ, ಮನೋಜ ಭಟ್‌ ಇದ್ದರು.