ಸಂಸದ ಪ್ರತಾಪ್‌ ಸಿಂಹ ಅವರು ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರಾ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷರ ಹೇಳಿಕೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಧೀರಜ್‌ ಪ್ರಸಾದ್‌ ಕಿಡಿ

 ಮೈಸೂರು (ಸೆ.20): ಸಂಸದ ಪ್ರತಾಪ್‌ ಸಿಂಹ ಅವರು ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರಾ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಪ್ರಶ್ನೆಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಧೀರಜ್‌ ಪ್ರಸಾದ್‌ ಕಿಡಿಕಾರಿದ್ದಾರೆ.

ಹುಚ್ಚಗಣಿ ಗ್ರಾಮದಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿದ ತಕ್ಷಣ ಕಾಂಗ್ರೆಸ್‌ ನಾಯಕರು ಎದ್ದು ಬಂದು ಪ್ರತಾಪ್‌ ಸಿಂಹ ಅವರನ್ನು ಹಾಗೂ ಬಿಜೆಪಿ ದೂರಲು ಆರಂಭಿಸಿದ್ದಾರೆ.

ಪಕ್ಷ ಅಧಿಕಾರಕ್ಕೆ ತರಲು ಒಗ್ಗಟ್ಟಿನ ಶ್ರಮ ಅಗತ್ಯ : ಕೆಪಿಸಿಸಿ ಮುಖಂಡ

ಇತಿಹಾಸ ಹೊಂದಿರುವ ದೇವಾಲಯವನ್ನು ಧ್ವಂಸಗೊಳಿಸಿದ್ದು ಒಂದು ಅಪರಾಧ. ಆ ಆದೇಶ ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಇಂತಹಾ ಘಟನೆ ಇನ್ನು ಮುಂದೆ ನಡೆಯಬಾರದು ಎಂದು ಆಗ್ರಹಿಸಲು ಪ್ರತಿಯೊಬ್ಬಶ್ರದ್ಧಾವಂತ ಹಿಂದೂವಿಗೂ ಹಕ್ಕಿದೆ. ಹಾಗಿದ್ದರೆ ದೇವಾಲಯ ಧ್ವಂಸ ವಿರೋಧಿಸಿದವರು ಎಲ್ಲರೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡವರಾ ಎಂದು ಅವರು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರು ದೇವಾಲಯ ಒಡೆದದ್ದು ತಪ್ಪು ಎಂದಾಕ್ಷಣ ಅವರೊಬ್ಬ ಶ್ರದ್ಧಾವಂತರು, ಅಧಿಕಾರಿಗಳ ವಿರುದ್ಧ

ಕ್ರಮಕ್ಕೆ ಆಗ್ರಹಿಸಿದ ಪ್ರತಾಪ್‌ ಸಿಂಹ ಅವರು ಧರ್ಮವನ್ನು ಗುತ್ತಿಗೆಗೆ ಪಡೆದವರು ಎಂದು ಹೇಗೆ ಕರೆಯುತ್ತೀರಿ? ಸಿದ್ದರಾಮಯ್ಯನವರು

ಮುಖ್ಯಮಂತ್ರಿ ಆಗಿದ್ದಾಗ ದೇವಾಲಯ ಧ್ವಂಸ ಮಾಡದೆ ಇದ್ದದ್ದೇ ಸಾಧನೆಯೇ ಎಂದು ಅವರು ಕೇಳಿದ್ದಾರೆ.

ಹುಚ್ಚಗಣಿಯಲ್ಲಿ ಧ್ವಂಸವಾದ ದೇವಸ್ಥಾನವನ್ನು ಸರ್ಕಾರವೇ ನಿಂತು ಮರಳಿ ನಿರ್ಮಾಣ ಮಾಡುವಂತೆ ನಾವು ಆಗ್ರಹಿಸುತ್ತೇವೆ, ಅದಕ್ಕಾಗಿ ಹೋರಾಡುತ್ತೇವೆ. ಹುಚ್ಚಗಣಿಯ ದೇವಸ್ಥಾನ ಮತ್ತೆ ತಲೆ ಎತ್ತಿ ನಿಲ್ಲುವಂತೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.