ಕಾರವಾರ(ಏ.03):  ಕಾಂಗ್ರೆಸ್‌ ಹಿರಿಯ ಮುಖಂಡ ಸಿದ್ದರಾಮಯ್ಯನವರೇ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್‌ ಪಾಳಯದಲ್ಲಿದ್ದ ದಲಿತ ಮುಖಂಡರನ್ನು ಅವರೇ ತುಳಿದಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಪ್ರಸಾದ, ಮಲ್ಲಿಕಾರ್ಜುನ ಖರ್ಗೆ, ಮೋಟ್ಟಮ್ಮನಂತಹ ಹಲವಾರು ಮುಖಂಡರನ್ನು ಸಿದ್ದರಾಮಯ್ಯನವರೇ ಮೂಲೆಗುಂಪು ಮಾಡಿದ್ದಾರೆ. ದಲಿತರ ಪರವಾಗಿ ಧ್ವನಿಯಾಗಬೇಕು ಎನ್ನುವ ಉದ್ದೇಶದಿಂದಲೇ ರಾಜಕೀಯ ಪ್ರವೇಶ ಮಾಡಿದ್ದು, ಕಾಂಗ್ರೆಸ್‌ನಲ್ಲಿ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದರು. ಹೀಗಾಗಿ ತಾವು ಕೂಡಾ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ. 

ಈ ಹಿಂದೆ ಇದ್ದ ಬಿಜೆಪಿ ದಲಿತ ವಿರೋಧಿ, ದಲಿತರು ಬಿಜೆಪಿ ವಿರೋಧಿ ಎನ್ನುವ ಮನೊಭಾವ ಹೋಗಿದೆ. ಬಿಜೆಪಿಗರು ಡಾ. ಅಂಬೇಡ್ಕರ್‌ ವಿರೋಧಿ ಎಂದು ಹೇಳುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇದನ್ನು ದೂರವಾಗಿಸಿದ್ದಾರೆ. ಅಂಬೇಡ್ಕರ್‌ ಸಂವಿಧಾನ ರಚನೆ ಮಾಡಿರುವುದಕ್ಕೆ ತಾವು ಪ್ರಧಾನಿಯಾಗಲು ಅವಕಾಶವಾಗಿದೆ ಎಂದು ಹೇಳಿದ ಮೊದಲ ವ್ಯಕ್ತಿಯಾಗಿದ್ದಾರೆ. ದಲಿತರ ಪರ ಎಂದು ಹೆಜ್ಜೆ ಹೆಜ್ಜೆಗೂ ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್‌ ಮುಖಂಡರು ಯಾರೊಬ್ಬರು ಈ ರೀತಿ ಹೇಳಲಿಲ್ಲ ಎಂದರು.

ಮಲೆನಾಡಲ್ಲಿ ಭೂಕುಸಿತ; ಸರ್ಕಾರಕ್ಕೆ ಸಮಿತಿ ವರದಿ ಸಲ್ಲಿಕೆ, ಪರಿಹಾರ ಕ್ರಮ

ಡಾ. ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ರಾಜ್ಯದ ಪ್ರತಿ ತಾಲೂಕಿನಲ್ಲೂ ಸ್ಥಾಪನೆಯಾಗಬೇಕು. ಕೆಲವು ಕಡೆಗಳಲ್ಲಿದೆ. ಆದರೆ, ಉತ್ತರ ಕನ್ನಡದಲ್ಲಿ ಸಂವಿಧಾನ ಶಿಲ್ಪಿಯ ಪುತ್ಥಳಿ ಕಾಣುತ್ತಿಲ್ಲ. ಏಕೆ ಮೂರ್ತಿಯಿಲ್ಲ ಎಂದು ಜಿಲ್ಲಾಧಿಕಾರಿ ಬಳಿ ಕೇಳಿದ್ದೇನೆ. ಸೂಕ್ತ ಸ್ಥಳ ಗುರುತಿಸಿ ಪುತ್ಥಳಿ ನಿರ್ಮಾಣ ಮಾಡಲಾಗುತ್ತದೆ ಎಂದಿದ್ದಾರೆ ಎಂದು ಹೇಳಿದರು.

ಸಿಡಿ ವಿಚಾರದಲ್ಲಿ ದಲಿತ ಹೆಣ್ಣಿಗೆ ಅನ್ಯಾಯವಾಗಿದೆ. ತಾವು ಏಕೆ ಧ್ವನಿ ಎತ್ತಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಹೆಣ್ಣು ಮಗಳು ನ್ಯಾಯ ಸಿಗಬೇಕು ಎಂದಿದ್ದಾಳೆ. ಆದರೆ, ಏನು ಅನ್ಯಾಯ ಆಗಿದೆ ಎನ್ನುವುದುನ್ನು ಆಕೆ ಹೇಳಬೇಕು. ಇಲ್ಲಿ ಯಾರ ವಿರೋಧ ಅಥವಾ ಪರ ಪ್ರಶ್ನೆಯಲ್ಲ. ಕಾನೂನು ಮೂಲಕ ಸತ್ಯಾಸತ್ಯತೆ ತಿಳಿಯಬೇಕು. ಕೆಲವರು ಪ್ರಕರಣದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಬೇಡ. ನಿಷ್ಪಕ್ಷಪಾತವಾಗಿ ತನಿಖೆ ಆಗುತ್ತದೆ ಎನ್ನುವ ನಂಬಿಕೆಯಿದೆ. ಅನ್ಯಾಯವಾದವರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆಯಿದೆ ಎಂದು ಸ್ಪಷ್ಟಪಡಿಸಿದರು. ಸಹ ಪ್ರಭಾರಿ ಪ್ರವೀಣ ಪವಾರ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಉದಯ ಬಶೆಟ್ಟಿ, ಜಿಪಂ ಸದಸ್ಯ ಜಗದೀಶ ನಾಯಕ, ಸೂರ್ಯಪ್ರಕಾಶ ಬಶೆಟ್ಟಿ ಇದ್ದರು.

14ರಿಂದ ಒಂದು ವಾರ ಅಂಬೇಡ್ಕರ್‌ ಕಾರ್ಯಕ್ರಮ:

ಏ. 14 ರಂದು ಅಂಬೇಡ್ಕರ್‌ ಜನ್ಮದಿನ ಅಂಗವಾಗಿ ರಾಜ್ಯದ 310 ಮಂಡಳದ ವ್ಯಾಪ್ತಿಯಲ್ಲಿ 1 ವಾರ ಸತತ ಅಂಬೇಡ್ಕರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಏ. 13 ರಂದು ರಾತ್ರಿ 8 ಗಂಟೆಗೆ ಅವರವರ ಮನೆಯಲ್ಲಿ ಅಂಬೇಡ್ಕರ್‌ ಭಾವಚಿತ್ರ ಇರಿಸಿ ಮೊಂಬತ್ತಿ ಬೆಳಗಬೇಕು. 14 ರಂದು ಅಂಬೇಡ್ಕರ್‌ ಪುತ್ಥಳಿ ಇರುವ ಊರಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಅಲ್ಲಿಗೆ ತೆರಳಿ ಪುಷ್ಪಾರ್ಚನೆ ಮಾಡಿ ಗೌರವ ನೀಡಲಾಗುತ್ತದೆ ಎಂದು ವಿವರಿಸಿದರು.