ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರು ಜೀವನ ನಡೆಸಲಾಗದ ಸ್ಥಿತಿಯನ್ನು ದೇಶದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

 ಬೆಟ್ಟದಪುರ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರು ಜೀವನ ನಡೆಸಲಾಗದ ಸ್ಥಿತಿಯನ್ನು ದೇಶದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಪಿರಿಯಾಪಟ್ಟಣದ ತಾಲೂಕಿನ ಬೆಟ್ಟದತುಂಗದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾದ ಸಂದರ್ಭದಲ್ಲಿ ಬಡವರಿಗೆ, ದೀನದಲಿತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿಕೊಟ್ಟಿದ್ದರು, ಅಲ್ಲದೆ 28 ಸಾವಿರ ಕೋಟಿ ಸಾಲ ಮನ್ನಾ ಮಾಡಿ ದೇಶಕ್ಕೆ ಉತ್ತಮ ಪ್ರಧಾನಿ ಎಂದೆನಿಸಿಕೊಂಡಿದ್ದರು ಎಂದರು.

ಮಾಜಿ ಶಾಸಕ ಕೆ. ವೆಂಕಟೇಶ್‌ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್‌ ಹೊಂದಾಣಿಕೆಯಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ, ತಾಲೂಕಿನ ಜನರು ಇದನ್ನು ಅರ್ಥ ಮಾಡಿಕೊಂಡು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ನೀಡುವ ಮೂಲಕ ಜಯಶೀಲನ್ನಾಗಿ ಮಾಡಬೇಕು. ಮೈಸೂರು ಜಿಲ್ಲೆಯಲ್ಲಿ 11 ಕ್ಷೇತ್ರಗಳಿದ್ದು ಅದರಲ್ಲಿ 8 ಕ್ಷೇತ್ರಗಳು ಕಾಂಗ್ರೆಸ್‌ಗೆ ಗೆಲುವಾಗಲಿದೆ ಎಂದು ಈಗಾಗಲೇ ಸಮೀಕ್ಷೆಗಳು ತಿಳಿಸಿವೆ, ಬೇರೆ ಪಕ್ಷದವರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್‌ಗೆ ಹೆಚ್ಚು ಬೆಂಬಲ ಸೂಚಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಕದುರೇಗೌಡನ ಕೊಪ್ಪಲು ಸುನಿಲ… ಕುಮಾರ್‌ ಅವರನ್ನು ಯತೀಂದ್ರ ಸಿದ್ದರಾಮಯ್ಯ ಅಭಿನಂದಿಸಿದರು.

ಕೆಪಿಸಿಸಿ ಸದಸ್ಯ ನಿತಿನ್‌ ವೆಂಕಟೇಶ್‌, ಅನಿಲ… ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಬಿ.ಜೆ. ವಿಜಯ…ಕುಮಾರ್‌, ಕುರುಬ ಸಂಘದ ಅಧ್ಯಕ್ಷ ಗಣೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಹಮದ್‌ ಜಾನ್‌ ಬಾಬು , ಡಿ.ಟಿ. ಸ್ವಾಮಿ ಬೆಟ್ಟದ ತುಂಗಾ ವಿಜಯ… ದೇವರಾಜ… ಅರಸ್‌, ಬೆಟ್ಟದಪುರ ಕುಮಾರ್‌, ಚಿಕ್ಕೇಗೌಡ, ಕೃಷ್ಣೆಗೌಡ ಇದ್ದರು.

ಬಿಜೆಪಿಯಿಂದ ಬದುಕು ಮೂರಾಬಟ್ಟೆ

ನಂಜನಗೂಡು (ಮಾ.17): ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಮೂಲಕ ರೈತರ ಬದುಕನ್ನು ಮೂರಾಬಟ್ಟೆಮಾಡುತ್ತಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಚಿಕ್ಕಯ್ಯಛತ್ರ ಗ್ರಾಮದಲ್ಲಿ 50 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಾಲಮನ್ನಾ, ಕೃಷಿ ಭಾಗ್ಯ, ಹಾಲಿನ ಸಬ್ಸಿಡಿ ಹೆಚ್ಚಳ, ಹೈನುಗಾರಿಕೆಗೆ ಉತ್ತೇಜನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ಸುಧಾರಣೆ ಮಾಡಲಾಗಿತ್ತು. ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. 

ಆದರೆ ರಸಗೊಬ್ಬರ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮೂಲಕ ರೈತರ ಬದುಕನ್ನು ಮೂರಾಬಟ್ಟೆಮಾಡಿದೆ ಎಂದು ದೂರಿದರು. ತಾಲೂಕಿನ ಚಿಕ್ಕಯ್ಯನ ಛತ್ರದ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಹಲವಾರು ವರ್ಷಗಳಿಂದ ಜಾಗದ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿತ್ತು. ಈಗ ಸ್ಥಳೀಯ ಮುಖಂಡರ ಸಹಾಯದಿಂದ ಸಮಸ್ಯೆಯನ್ನು ಬಗೆಹರಿಸಿ 50 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಕ್ತಾಯವಾಗಿ ಕಟ್ಟಡ ಉದ್ಘಾಟನೆಗೊಂಡಿದೆ. ಇದರಿಂದ ಈ ಭಾಗದ ರೈತರಿಗೆ ಸಕಾಲದಲ್ಲಿ ನೆರವು ದೊರಕುವ ಮೂಲಕ ಸಹಾಯವಾಗಲಿದೆ ಎಂದರು. ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ 1.4 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ, ತಾಂಡವಪುರ, ಕುಪ್ಪರವಳ್ಳಿ, ಬಿಳಿಗೆರೆ ಸರ್ಕಾರಿ ಶಾಲೆಯಲ್ಲಿ ವಿವೇಕ ಯೋಜನೆಯಲ್ಲಿ ತಲಾ 15 ಲಕ್ಷ ರು. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.