ಶಿರಸಿ(ನ.12): ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನಿಂದಾಗಿ ಕನಕಪುರದ ಬಂಡೆ ಎಂದು ಹೇಳಿಕೊಳ್ಳುತ್ತಿದ್ದ ಡಿ.ಕೆ. ಶಿವಕುಮಾರ ಬಂಡೆ ಬದಲಾಗಿ ಜಲ್ಲಿಯಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯ್ಕ ಲೇವಡಿ ಮಾಡಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಉಪಚುನಾವಣೆಯಲ್ಲಿ ಸುಲಭವಾಗಿ ಗೆದ್ದು ಬಿಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದ ಡಿಕೆಶಿ ಅವರಿಗೆ ಬಿಜೆಪಿಯ ಗೆಲುವು ಪೆಟ್ಟು ನೀಡಿದೆ ಎಂದರು. ಕಾಂಗ್ರೆಸ್‌ ಪಕ್ಷ ಹಳೆಯದಾ​ಗಿದ್ದರೂ ಅದೀಗ ಎಲ್ಲ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಸಾಗುತ್ತಿರುವುದರಿಂದ ತುಕ್ಕು ಹಿಡಿಯುವ ಸ್ಥಿತಿಗೆ ಬಂದು ತಲುಪಿದೆ. ಕೆಲವೊಂದು ರಾಜ್ಯದಲ್ಲಿ ನಡೆದ ಉಪಚುನಾವಣೆ ಹಾಗೂ ಬಿಹಾರದಲ್ಲಿ ನಡೆದ ಚುನಾವಣೆಯ ಸೋಲಿನಿಂದ ಕಾಂಗ್ರೆಸ್‌ ಸ್ಪಷ್ಟವಾಗಿ ಅವನತಿ ಹೊಂದುತ್ತಿರುವುದನ್ನು ತೋರಿಸುತ್ತದೆ. ಮುಂದೆ ನಡೆಯುವ ಎಲ್ಲ ಚುನಾವಣೆಯು ಬಿಜೆಪಿ ಗೆಲ್ಲುವ ಸ್ಪಷ್ಟ ಮುನ್ಸೂಚನೆ ನೀಡಿದೆ ಎಂದರು.

ಉಗ್ರ ಸಂಘಟನೆ ಜೊತೆ ನಂಟು; ಶಿರಸಿಯಲ್ಲಿ ಶಂಕಿತ ಉಗ್ರ ಇದ್ರೀಸ್ ಸೆರೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಉತ್ತಮವಾದ ಆಡಳಿತದಿಂದಾಗಿ ನಾವು ಚುನಾವಣೆಯಲ್ಲಿ ಯಶಸ್ಸು ಗಳಿಸುತ್ತಿದ್ದೇವೆ. ಮುಂದೆಯೂ ಕೂಡ ಅವರದ್ದೇ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿ​ಸಿ​ದ​ರು.

ಸುದ್ದಿಗೋಷ್ಠಿಯಲ್ಲಿ ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಘಟಕ ಅಧ್ಯಕ್ಷ ರಾಜು ಶೆಟ್ಟಿ, ಪ್ರಮುಖರಾದ ಮಾಂತೇಶ ಹಾದಿಮನೆ, ಶ್ರೀಕಾಂತ್‌ ನಾಯ್ಕ, ಕೆ. ರಿತೇಶ, ರಾಕೇಶ ತಿರುಮಲೆ, ವಿನಾಯಕ ಹೆಗಡೆ, ಜಗದೀಶ್‌ ನಾಯ್ಕ ಉಪಸ್ಥಿತರಿದ್ದರು.