ಬೆಂಗಳೂರು (ಜ.19):  ಓನ್‌ ವೇಯಲ್ಲಿ ಹೋಗದಂತೆ ಸೂಚಿಸಿದ್ದಕ್ಕೆ ಆಕ್ರೋಶಗೊಂಡ ಬೈಕ್‌ ಸವಾರನೊಬ್ಬ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ (ಎಎಸ್‌ಐ) ಮೇಲೆ ಹಲ್ಲೆ ನಡೆಸಿದ ಘಟನೆ ಸಂಭವಿಸಿದ್ದು, ಈ ಸಂಬಂಧ ಬೈಕ್‌ ಸವಾರರನ್ನು ಬಂಧಿಸಲಾಗಿದೆ.

ಸಿಟಿ ಮಾರ್ಕೆಟ್‌ ಸಂಚಾರ ಠಾಣೆ ಎಎಸ್‌ಐ ಸಿದ್ದಯ್ಯ ಅವರೇ ಗಾಯಗೊಂಡಿದ್ದು, ಪ್ರಕರಣ ಸಂಬಂಧ ಜೆ.ಜೆ.ನಗರದ ನೌಷಾದ್‌ ಮತ್ತು ಪಾದರಾಯನಪುರದ ತನ್‌ ಜೀಮ್‌ ಪಾಷಾ ಬಂಧಿತರಾಗಿದ್ದಾರೆ. ಬಳೆಪೇಟೆ ಏಕ ಮುಖ ಸಂಚಾರ ರಸ್ತೆಯಲ್ಲಿ ಆರೋಪಿಗಳು ಶುಕ್ರವಾರ ಹೋಗುವಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂಲಿಬೆಲೆ-ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್: 'ಪೊಲೀಸ್ ಕಮಿಷನರ್ ಆರೋಪ ಸುಳ್ಳು.

ಜ.17ರ ಮಧ್ಯಾಹ್ನ 1ರ ಸಮಯದಲ್ಲಿ ಚಿಕ್ಕಪೇಟೆ ಸರ್ಕಲ್‌ನಲ್ಲಿ ಸಿಟಿ ಮಾರ್ಕೆಟ್‌ ಸಂಚಾರ ಠಾಣೆ ಮುಖ್ಯಪೇದೆ ಸಿದ್ದಯ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳೆಪೇಟೆ ಕಡೆಯಿಂದ ಓನ್‌ವೇನಲ್ಲಿ ಬೈಕ್‌ನಲ್ಲಿ ನೌಷದ್‌ ಮತ್ತು ಪಾಷಾ ಬಂದಿದ್ದಾರೆ. ಆಗ ಅವರನ್ನು ಅಡ್ಡಗಟ್ಟಿದ್ದ ಎಎಸ್‌ಐ, ಓನ್‌ವೇನಲ್ಲಿ ಬರಬಾರದು ಎಂದಿದ್ದಾರೆ. ಈ ಹಂತದಲ್ಲಿ ವೇಗವಾಗಿ ಮುಂದೆ ಹೋಗಿದ್ದ ಬೈಕ್‌ ಸವಾರರು, ವಾಪಸ್‌ ಎಎಸ್‌ಐ ಬಳಿಗೆ ಬಂದು ಪ್ರಕರಣ ದಾಖಲಿಸದಂತೆ ಬೆದರಿಕೆ ಒಡ್ಡಿದ್ದಾರೆ.

ಇದನ್ನು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರವನ್ನು ಹರಿದು ಹಾಕಿದ್ದಾರೆ. ಸ್ಥಳೀಯರು ರಕ್ಷಣೆಗೆ ಬಂದು ಬಿಡಿಸಿದ್ದಾರೆ. ಜತೆಗೆ ಸವಾರರನ್ನು ವಶಕ್ಕೆ ಪಡೆದು ಹೊಯ್ಸಳ ಸಿಬ್ಬಂದಿಗೆ ವಹಿಸಿದ್ದರು. ಕರ್ತವ್ಯಕ್ಕೆ ಅಡ್ಡಿ ಮತ್ತು ಎಎಸ್‌ಐ ಮೇಲೆ ಹಲ್ಲೆ ಆರೋಪದ ಮೇಲೆ ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.