ಬೆಂಗಳೂರು [ಸೆ.30]:  ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ವಶಕ್ಕೆ ಪಡೆದ ಸಂಚಾರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಬೊಮ್ಮನಹಳ್ಳಿ ಸಂಚಾರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಟಿ.ಡಿ.ಜಯರಾಮ್‌ (59) ಹಲ್ಲೆಗೆ ಒಳಗಾದವರು. ಈ ಸಂಬಂಧ ಗುರುಮೂರ್ತಿ ಹಾಗೂ ಆತನ ಸಚರರ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೆ.27ರಂದು ಸಂಜೆ 6.35ರಲ್ಲಿ ಕಾನ್‌ಸ್ಟೇಬಲ್‌ಗಳಾದ ಕಾಂತರಾಜ್‌, ನಟರಾಜ್‌ ಜತೆ ಜಯರಾಮ್‌ ಬೊಮ್ಮನಹಳ್ಳಿ ಜಂಕ್ಷನ್‌ ಬಳಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೊಮ್ಮನಹಳ್ಳಿ ಜಂಕ್ಷನ್‌ ಕಡೆಯಿಂದ ಬೇಗೂರು ರಸ್ತೆಯ ಮಾರ್ಗವಾಗಿ ಸವಾರ ಹೆಲ್ಮೆಟ್‌ ಧರಿಸದೇ ಬೈಕ್‌ ಚಲಾಯಿಸಿಕೊಂಡು ಬಂದಿದ್ದಾನೆ. ಬೈಕನ್ನು ಸಬ್‌ ಇನ್‌ಸ್ಪೆಕ್ಟರ್‌ ಜಯರಾಮ್‌ ಅಡ್ಡಗಟ್ಟಿ, ದಾಖಲೆ ತೋರಿಸುವಂತೆ ಸೂಚಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಬೈಕ್‌ ಸವಾರ ಗುರುಮೂರ್ತಿ ಏರು ದ್ವನಿಯಲ್ಲಿ ಮಾತನಾಡಿದ್ದ. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ವಶಕ್ಕೆ ಪಡೆದಿದ್ದರು. ಆರೋಪಿ ಸ್ಥಳದಿಂದ ತೆರಳಿದ್ದ, ಸ್ವಲ್ಪ ಹೊತ್ತಿನ ಬಳಿಕ ಆರೋಪಿ ನಾಲ್ಕೈದು ಸಹಚರರ ಜತೆ ಬಂದು ಎಸ್‌ಐ ಜಯರಾಮ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಬೊಮ್ಮನಹಳ್ಳಿ ಪೊಲೀಸರು ತಿಳಿಸಿದ್ದಾರೆ.