ಮಂಡ್ಯ: ಆಯತಪ್ಪಿ ಬಿದ್ದ ಸ್ಕೂಟರ್‌ಗೆ ಬೆಂಕಿ, ಬೈಕ್ ಸವಾರ ಸಾವು
* ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ
* ದಹನಗೊಂಡ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವು
* ಗೃಹ ಪ್ರವೇಶಕ್ಕೆ ತೆರಳುತ್ತಿದ್ದ ವೇಳೆ ನಡೆದ ದುರ್ಘಟನೆ
ಮಂಡ್ಯ(ಜೂ.25): ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಸ್ಕೂಟರ್ ಬೆಂಕಿಹೊತ್ತಿಕೊಂಡ ಪರಿಣಾಮ ಸವಾರ ದಹನಗೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ಇಂದು(ಶನಿವಾರ) ನಡೆದಿದೆ.
ಆಯತಪ್ಪಿ ಕೆಳಗೆ ಬಿದ್ದ ಸ್ಕೂಟರ್‌ನಿಂದ ಪೆಟ್ರೋಲ್ ಸುರಿದ ಪರಿಣಾಮ ಕ್ಷಣಾರ್ಧದಲ್ಲೇ ಸ್ಕೂಟರ್ ಹೊತ್ತಿ ಉರಿದಿದೆ. ಇಬ್ಬರು ಸವಾರರ ಪೈಕಿ ಓರ್ವ ಅದೃಷ್ಟವಶಾತ್ ಪಾರಾಗಿದ್ದು, ಬೆಂಕಿಗೆ ಸಿಲುಕಿದ್ದ ಮತ್ತೋರ್ವನನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ವಿಜಯಪುರ: ಬೈಕ್-ಬುಲೆರೋ ಮಧ್ಯೆ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು
ಗೃಹ ಪ್ರವೇಶಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ
ಮೈಸೂರು ಮೂಲದ ಶಿವರಾಮು ಹಾಗೂ ಅನಂತರಾಮು ಎಂಬುವರು ಅಪಘಾತಕ್ಕೀಡಾದ ವ್ಯಕ್ತಿಗಳು. ಇಬ್ಬರು ನಿನ್ನೆ ತಮ್ಮ ಸಂಬಂಧಿಕರ ಗೃಹ ಪ್ರವೇಶ ನಿಮಿತ್ತ ಮೈಸೂರಿನಿಂದ ಪಾಂಡವಪುರದ ಕೆ.ಬೆಟ್ಟಹಳ್ಳಿ ಗ್ರಾಮಕ್ಕೆ ಸ್ಕೂಟರ್‌ನಲ್ಲಿ ಹೊರಟಿದ್ದರು.
ಮಾರ್ಗಮಧ್ಯೆ ದಸರಗುಪ್ಪೆ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು. ಬಿದ್ದ ರಭಸಕ್ಕೆ ಸ್ಕೂಟರ್‌ನಿಂದ ಪೆಟ್ರೋಲ್ ಸುರಿದು ಏಕಾಏಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿದೆ. ಸ್ಕೂಟರ್‌ನಿಂದ ಹೊರಬರಲಾಗದ ಶಿವರಾಮಯ್ಯ ಬೆಂಕಿಗೆ ಸಿಲುಕಿದ್ದಾರೆ. ಸಾರ್ವಜನಿಕರು ಶಿವರಾಮಯ್ಯ ಅವರನ್ನ ಬೆಂಕಿ ಜ್ವಾಲೆಯಿಂದ ಹೊರಗೆಳೆದು ಬಟ್ಟೆಯಿಂದ ಬೆಂಕಿ ಆರಿಸಿ ತಕ್ಷಣ ಮೈಸೂರು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶಿವರಾಮಯ್ಯ ದೇಹ ಭಾಗಶಃ ಸುಟ್ಟಿದ್ದು ಲಿವರ್, ಕಿಡ್ನಿ ಹಾನಿಯಾಗಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.