Udupi; ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ, ಗಾಳಕ್ಕೆ ಸಿಕ್ಕ ಭಾರಿ ಗಾತ್ರದ ಮೀನು!
ಉಡುಪಿಯ ಮಲ್ಪೆಯಲ್ಲಿ ಗಾಳ ಹಾಕಿದ ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರ ಅವರಿಗೆ ಸುಮಾರು 25 ಕೆ.ಜಿ ತೂಕದ ಮುರು ಮೀನು, ಹಾಗೂ 15 ಕೆ.ಜಿ ತೂಕದ ಕೊಕ್ಕರ್ ಮೀನು ಗಾಳಕ್ಕೆ ಸಿಕ್ಕಿ ಹಾಕಿಕೊಂಡು ಬಂಬರ್ ಸಿಕ್ಕಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಜು.25): ಮಳೆಗಾಲದಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧ ಮಾಡಲಾಗಿದೆ. ನಾಡ ದೋಣಿಗಳು ಮಾತ್ರ ಈಗ ಮೀನುಗಾರಿಕೆ ನಡೆಸಬಹುದಾಗಿದೆ. ಮೀನುಗಾರಿಕೆ ಸೀಮಿತ ಗೊಂಡಿರುವುದರಿಂದ ತಾಜಾ ಮೀನಿಗೆ ಬೇಡಿಕೆ ಹೆಚ್ಚಿದೆ. ಮಳೆಗಾಲದಲ್ಲಿ ಜನರು ತಾಜಾ ಮೀನಿಗಾಗಿ ತಾವೇ ಗಾಳ ಹಾಕುವ ಹವ್ಯಾಸ ಹೆಚ್ಚು ರೂಡಿಸಿಕೊಳ್ಳುತ್ತಾರೆ. ಗಾಳ ಹಾಕಿ ಮೀನು ಹಿಡಿಯುವುದು ಅಂದ್ರೆ ಅದೊಂದು ಅದೃಷ್ಟದ ಆಟ. ಬೆಳಗಿನಿಂದ ರಾತ್ರಿವರೆಗೆ ಕುಳಿತು ಸಿಂಗಲ್ ಮೀನು ಸಿಗದೆ ವಾಪಸಾಗೋದು ಕೂಡ ಇದೆ. ಆದರೆ ಅದೃಷ್ಟ ಕೈ ಹಿಡಿದರೆ ಬಂಪರ್ ಮೀನು ಸಿಗೋದು ಇದೆ. ಹಾಗಾಗಿ ಪ್ರತಿದಿನ ಸಮುದ್ರದ ತಟ ಪ್ರದೇಶದಲ್ಲಿ ನೂರಾರು ಮಂದಿ ಗಾಳ ಹಾಕುವವರನ್ನು ನೋಡಬಹುದು ಉಡುಪಿಯ ಮಲ್ಪೆಯಲ್ಲಿ ಗಾಳ ಹಾಕಿದ ವ್ಯಕ್ತಿಯೊಬ್ವರಿಗೆ ಡಬ್ಬಲ್ ಧಮಾಕವಾಗಿದೆ. ಸತತ ಎರಡು ದಿನ ಬಂಪರ್ ಮೀನುಗಾರಿಕೆಯಾಗಿದೆ. ಚಿಕ್ಕಗಾಳ ಹಾಕಿ ಭಾರಿ ಗಾತ್ರದ ಮೀನನ್ನೇ ಕ್ಯಾಚ್ ಮಾಡಿದ್ದಾರೆ. ಇವರು ಹಾಕಿದ ಗಾಳಕ್ಕೆ ಬೃಹತ್ ಗಾತ್ರದ ಎರಡು ಮೀನುಗಳು ಉಡುಪಿಯ ಮಲ್ಪೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರ ಅವರು, ದೋಣಿಯಲ್ಲಿ ಹೋಗಿ ಹವ್ಯಾಸವಾಗಿ ಮೀನಿಗೆ ಗಾಳ ಹಾಕುತ್ತಿರುತ್ತಾರೆ. ಅದರಂತೆ ಇಂದು ಮತ್ತು ಮೊನ್ನೆ ಮೀನಿಗೆ ಗಾಳ ಹಾಕಿದಾಗ ಬೃಹತ್ ಗಾತ್ರದ ಎರಡು ಮೀನುಗಳು ಅವರು ಹಾಕಿದ ಗಾಳಕ್ಕೆ ಬಿದ್ದಿವೆ.
ಅಲೆಗಳೊಂದಿಗೆ ಗುದ್ದಾಡಿ ಮೀನು ಹಿಡಿಯುವ ಸಾಹಸ, ಹೊಸ ನಿರೀಕ್ಷೆಯೊಂದಿಗೆ ಕಡಲಿಗಿಳಿದ ಮೀನುಗಾರರು
ನೀರಿಗೆ ಗಾಳ ಇಳಿಸಿದವರನ್ನೇ ಎಳೆಯುವಷ್ಟು ದೊಡ್ಡ ಗಾತ್ರದ ಮೀನುಗಳು ಇವು. ಪುಟ್ಟಗಾಳಕ್ಕೆ ಸಿಕ್ಕಿಬಿದ್ದ ದೊಡ್ಡ ಗಾತ್ರದ ಮೀನುಗಳನ್ನು ಕಂಡು ನಾಗೇಶ್ ಗೆ ಖುಷಿಯಾಗಿದೆ. ಸುಮಾರು 25 ಕೆ.ಜಿ ತೂಕದ ಮುರು ಮೀನು, ಹಾಗೂ 15 ಕೆ.ಜಿ ತೂಕದ ಕೊಕ್ಕರ್ ಮೀನು ಗಾಳಕ್ಕೆ ತಗಲು ಹಾಕಿಕೊಂಡಿದೆ. ಮಾರುಕಟ್ಟೆಯಲ್ಲಿ ಸಾವಿರಾರು ರೂ ಬೆಳಬಾಳುವ ಮೀನು ಇದಾಗಿದ್ದು, ಮಳೆಗಾಲದಲ್ಲಿ ಈ ತಾಜಾ ಮೀನುಗಳು ಅನೇಕ ಗ್ರಾಹಕರ ಹೊಟ್ಟೆ ತಣಿಸಲಿದೆ. ಸಾಮಾನ್ಯ ಗಾಳಕ್ಕೆ ಈ ರೀತಿಯ ದೊಡ್ಡ ಮೀನು ಸಿಕ್ಕಿರೋದು ನಿಜಕ್ಕೂ ಬಂಪರ್ ಡ್ರಾ ಅಂತಾನೆ ಹೇಳಬಹುದು.
ವೇ ಅಲ್ಲ ಆಹಾ ಅನ್ನುವ ವಾಂತಿ ಇದು: ಕೇರಳದ ಮೀನುಗಾರನಿಗೆ ಸಿಕ್ತು 28 ಕೋಟಿ ಮೌಲ್ಯದ ತಿಮಿಂಗಿಲ 'ವಾಂತಿ'
ಮಳೆಗಾಲದಲ್ಲಿ ಸಮುದ್ರದ ಮೀನು ಅಷ್ಟಾಗಿ ಸಿಗೋದಿಲ್ಲ. ಯಾಕಂದ್ರೆ ದೊಡ್ಡ ಗಾತ್ರದ ಬೋಟುಗಳು ಮೀನುಗಾರಿಕೆಗೆ ಹೋಗುವುದಿಲ್ಲ. ಇನ್ನು ಅತಿಯಾದ ಮಳೆ ಬಂದರೆ ನಾಡುದೋಣಿಗಳು ಕೂಡ ಮೀನುಗಾರಿಕೆ ನಡೆಸುವುದಿಲ್ಲ. ಹಾಗಾಗಿ ಜನರು ಐಸ್ ಹಾಕಿದ ಮೀನನ್ನೇ ಬಳಸುವುದು ಅನಿವಾರ್ಯ. ತಾಜಾ ಗುಣಮಟ್ಟದ ಸಮುದ್ರ ಮೀನು ಸಿಕ್ಕರೆ ಮಳೆಗಾಲದಲ್ಲಿ ಸ್ವರ್ಗ ಸಿಕ್ಕಂತೆ.