Asianet Suvarna News Asianet Suvarna News

BIG 3 BIG Impact: 60 ವರ್ಷ ಮೀರಿದ ದೈವನರ್ತಕರಿಗೆ ₹2000 ಮಾಸಾಶನ!

Minister Sunil Kumar announces Pention to Daiva Nartakas: ಬಿಗ್‌ 3ಯಲ್ಲಿ ಸುದ್ದಿ ಪ್ರಸಾರವಾದ ಒಂದು ಗಂಟೆಯಲ್ಲಿ ಬಿಗ್‌ ಇಂಪ್ಯಾಕ್ಟ್‌ ಆಗಿದ್ದು, ದೈವ ನರ್ತಕರಿಗೆ 2000 ಮಾಸಾಶನ ನೀಡಲು ತೀರ್ಮಾನಿಸಲಾಗಿದೆ 

BIG 3 Impact two thousand pension announced for daiva nartakas Sunil Kumar mnj
Author
First Published Oct 20, 2022, 5:00 PM IST

ದಕ್ಷಿಣ ಕನ್ನಡ (ಅ. 20):  ಕೋಲದ ಕಣದಲ್ಲಿ ದೈವತ್ವಕ್ಕೇರಿದರೂ ಈ ಸಮುದಾಯದ ಸಂಕಷ್ಟಗಳು ಇನ್ನೂ ಬಗೆಹರಿದಿಲ್ಲ. ಅತ್ತ ಕಲಾವಿದರೂ ಅಲ್ಲದ ಇತ್ತ ಅರ್ಚಕನಾಗಿಯೂ ಸಲ್ಲದ ಈ ಬಡ ಸಮುದಾಯದ ಹಳೆಯ ತಲೆಮಾರಿನ ದೈವ ನರ್ತಕರು, ಈಗಲೂ ಮಾಸಾಶನಕ್ಕಾಗಿ ಕಾಯುತ್ತಿದ್ದಾರೆ. ನಿತ್ಯ ಜಿಲ್ಲಾಡಳಿತದ ಕಚೇರಿಗೆ ಅಲೆದು ಅಲೆದು ಬೇಸತ್ತಿದ್ದಾರೆ. ಕಾಂತಾರವೆಂಬ ಕೌತುಕ ಪ್ರೇಕ್ಷಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಕನ್ನಡ ಚಲನಚಿತ್ರ ವಿಶ್ವದಾದ್ಯಂತ ಸಖತ್ ಸೌಂಡ್ ಮಾಡ್ತಾ ಇದೆ. ಕರಾವಳಿಗೆ ಸೀಮಿತವಾಗಿದ್ದ ದೈವದ ಆರಾಧನೆ ಈಗ ಪ್ರಪಂಚದಾದ್ಯಂತ ತನ್ನ ಕಾರಣಿಕವನ್ನು ವಿಸ್ತರಿಸಿಕೊಂಡಿದೆ. ಚಿತ್ರದಲ್ಲಿನ ರಿಷಬ್ ಶೆಟ್ಟಿ ಅವರ ದೈವ ನರ್ತಕನ ಪಾತ್ರವಂತೂ ನೋಡುಗರನ್ನ ಕುಳಿತಲ್ಲಿ ಎದ್ದು ಕೈ ಮುಗಿಯುವಂತೆ ಮಾಡಿದೆ.

ತಾನೇ ದೈವವಾಗಿ ಹಗಲು ರಾತ್ರಿಗಳನ್ನು ಒಂದು ಮಾಡಿ, ನೊಂದು ಬಂದವರಿಗೆ ಅಭಯ ನೀಡುವ, ದೈವ ಪಾತ್ರಿಗಳ ನಿಜ ಬದುಕು ನಿಜಕ್ಕೂ ಹೇಗಿದೆ ಗೊತ್ತಾ? ಸರ್ಕಾರದ ನೆರವಿನ ನಿರೀಕ್ಷೆಯಲ್ಲಿರುವ ಹಳೆಯ ತಲೆಮಾರಿನ ದೈವ ನರ್ತಕರ ಬಗೆಹರಿಯದ ಬೇಡಿಕೆಯೊಂದಕ್ಕೆ ಇದೀಗ ಮತ್ತೆ ಜೀವ ಬಂದಿದೆ. ಅವರ ಅದೊಂದು ಸಮಸ್ಯೆ ಬಗೆ ಹರಿಸಲು ಸುವರ್ಣ ನ್ಯೂಸ್ BIG-3 ಅವರ ಬೆನ್ನಿಗೆ ನಿಂತಿದೆ.

Big 3 Big Impact: ಬಿಗ್‌ 3ಯಲ್ಲಿ ಸುದ್ದಿ ಪ್ರಸಾರವಾದ ಒಂದು ಗಂಟೆಯಲ್ಲಿ ಬಿಗ್‌ ಇಂಪ್ಯಾಕ್ಟ್‌ ಆಗಿದ್ದು, ದೈವ ನರ್ತಕರಿಗೆ 2000 ಮಾಸಾಶನ ನೀಡಲು ತೀರ್ಮಾನಿಸಲಾಗಿದೆ.  ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಜಾನಪದ ಅಕಾಡೆಮಿಯಿಂದ ಮಾಸಾಶನ ನೀಡಲು ನಿರ್ಧರಿಸಲಾಗಿದೆ.  ಅರವತ್ತು ವರ್ಷ ಮೇಲ್ಪಟ್ಟವರು ಅರ್ಜಿ ಹಾಕಬೇಕು, ಅರ್ಜಿ ಸಲ್ಲಿಸಿದವರಿಗೆ ಮಾಸಾಶನ ನೀಡಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. 

ತುತ್ತು ಅನ್ನಕ್ಕೂ ಕಷ್ಟ: ಆವೇಶದ ಅಬ್ಬರ ಮತ್ತು ಸಾಂತ್ವನ ಹೇಳುವ ಮಾತೃ ಹೃದಯ, ಈ ಎರಡು ವಿಭಿನ್ನ ಭಾವಗಳ ಏಕರೂಪವೇ ದೈವ ನರ್ತನ. ಕರಾವಳಿಯ ಜನರು ದೇವರನ್ನು ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ದೈವಗಳಿಗೆ ಶರಣಾಗದವರಿಲ್ಲ. ದೈವಗಳ ಕಾರಣಿಕವೇ ಹಾಗೆ, ನ್ಯಾಯಾಲಯಗಳಿಂದಲೂ ಬಗೆಹರಿಯದ ಸಮಸ್ಯೆಗಳ ತೀರ್ಮಾನ ದೈವದ ಕಣದಲ್ಲಿ ಕ್ಷಣಮಾತ್ರದಲ್ಲಿ ಪರಿಹಾರವಾಗುವ ಪವಾಡ ಕರಾವಳಿಯಲ್ಲಿ ಮಾಮೂಲು. ಸನ್ನಿಧಾನದಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ದೈವವಾಗಿ ಮಾರ್ಪಟ್ಟು, ತಲೆಮಾರುಗಳಿಂದ ನಂಬಿದ ಕುಟುಂಬವನ್ನು ಸಲಹುತ್ತ ಬಂದಿರುವುದೇ ದೈವಾರಾಧನೆಯ ನಿತ್ಯ ಸತ್ಯವಾಗಿದೆ. 

BIG 3 Impact: 1 ವರ್ಷದಿಂದ ತುಕ್ಕು ಹಿಡಿದಿದ್ದ ತುಮಕೂರಿನ ಹೈಟೆಕ್‌ ಜಿಮ್‌ ಒಂದೇ ದಿನದಲ್ಲಿ ಉದ್ಘಾಟನೆ

ದೈವರಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುವವರೇ ದೈವ ನರ್ತಕರು. ಸಮಾಜದ ಕಟ್ಟ ಕಡೆಯ, ಅತ್ಯಂತ ಬಡ-ಹಿಂದುಳಿದ ಸಮುದಾಯಕ್ಕೆ ಸೇರಿದ ಈ ನರ್ತಕರು ದೈವತ್ವಕ್ಕೇರಿ ಇಡೀ ಸಮಾಜವನ್ನೇ ತನ್ನ ಅಭಯದೊಳಗೆ ಸಲಹುವುದು ತುಳುನಾಡಿನ ವಿಶೇಷ. ಪಾಣಾರ, ಪರವ, ಪಂಬದರೆಂಬ ಸಮುದಾಯದ ಜನರು ದೈವ ನರ್ತಕರಾಗಿ ಆರಾಧನೆ ನಡೆಸುತ್ತಾ ಬಂದಿದ್ದಾರೆ. ಕೋಲವಿದ್ದಾಗ ದೈವವಾಗಿ ಮೆರೆದಾಡಿದವರು, ಕೋಲದ ಕಾಲ ಮುಗಿದ ನಂತರ ತುತ್ತು ಅನ್ನಕ್ಕೂ ಕಷ್ಟಪಡುವ ಕಾಲವೊಂದಿತ್ತು. ಹಳೆಯ ತಲೆಮಾರಿನ ದೈವ ನರ್ತಕರ ಬದುಕು ಇನ್ನೂ ಬದಲಾಗಿಲ್ಲ. ಇಳಿ ವಯಸ್ಸಿನಲ್ಲಿ ದೈವ ದರ್ಶನ ಮಾಡಲಾಗದೆ, ಯೌವ್ವನ ಕಾಲದಲ್ಲಿ ದೇಹದ ಶಕ್ತಿಯನ್ನೆಲ್ಲ ದೈವಗಳಿಗೆ ದಾರೆ ಎರೆದು ಬಾಳ ಮುಸ್ಸಂಜೆಯಲ್ಲಿ ಕಷ್ಟಪಡುವ ಅನೇಕ ದೈವ ಪಾತ್ರಿಗಳ ಕುಟುಂಬ ಈಗಲೂ ಇದೆ.

ಕೋವಿಡ್ ಕಾಲದಲ್ಲಿ ಬದುಕು ಅಕ್ಷರಶಃ ನರಕ: ಕಳೆದ ಒಂದೆರಡು ದಶಕದಿಂದ ದೈವ ನರ್ತಕರ ಜೀವನ ಶೈಲಿ ಸಾಕಷ್ಟು ಸುಧಾರಿಸಿದೆ. ದೈವಾರಧನೆಯಲ್ಲಿ ಒಂದಿಷ್ಟು ಸಂಪಾದನೆ ಹೊಸ ತಲೆಮಾರಿನ ಯುವಕರಿಗೆ ಸಿಗುತ್ತಿದೆ. ಆದರೆ ಸದ್ಯ ವಿಶ್ರಾಂತಿಯಲ್ಲಿರುವ ಹಳೆ ತಲೆಮಾರಿನ ದೈವ ನರ್ತಕರು ಬಿಡಿಗಾಸಿನ ಸಂಪಾದನೆಗೆ ಜೀವ ಪುಡಿಮಾಡಿಕೊಂಡು, ವೃದ್ಧಾಪ್ಯದ ಅಂಚಿನಲ್ಲಿ ಅಸಹಾಯಕರಾಗಿದ್ದಾರೆ. ಸ್ವಂತ ಸೂರಿಲ್ಲದೆ ಕಷ್ಟಪಡುವವರೂ ಇದ್ದಾರೆ. ಕೋವಿಡ್ ಸಂದರ್ಭದಲ್ಲಿ ಈ ತಲೆಮಾರಿನ ವೃದ್ಧ ದೈವನರ್ತಕರ ಬದುಕು ಅಕ್ಷರಶಃ ನರಕವಾಗಿತ್ತು. ಅಂದು ಅದೇ ಸಮುದಾಯದ ಯುವ ದೈವ ನರ್ತಕರು ಹೆಗಲುಕೊಟ್ಟು ತಮ್ಮ ಹಳೆಯ ತಲೆಮಾರನ್ನು ರಕ್ಷಿಸಿಕೊಂಡಿದ್ದಾರೆ. ದೈವ ನರ್ತಕರಿಗೆ ಮಾಸಾಶನ ನೀಡಬೇಕೆಂದು, ಪಾಣಾರ ,ಪರವ,  ಪಂಬದ ಸಮುದಾಯದ ಸಂಘಟನೆಗಳು ಪ್ರಯತ್ನಿಸುತ್ತಾ ಬಂದಿವೆ. ಮಾಸಾಶನ ನೀಡುವ ಬಗ್ಗೆ ರಾಜ್ಯ ಸರ್ಕಾರ ಈಗ ಒಲವು ಪ್ರಕಟಿಸಿದೆ. ದೈವ ನರ್ತಕರಿಗೆ ಮಾಸಾಶನ ನೀಡುವುದಾಗಿ ಸರ್ಕಾರ ತಿಳಿಸಿದೆ. 

ಕೋಲದ ಕಣದಲ್ಲಿ ಅದೆಷ್ಟು ಆವೇಶ ಭರಿತರಾಗಿ ಕುಣಿದರೂ, ಈ ಮುಗ್ಧ ಸಮುದಾಯ ಸಾತ್ವಿಕತೆಯ ಪ್ರತಿರೂಪಗಳಂತೆ ಬದುಕುವವರು. ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಹಠ, ಛಲ ಇವರಿಗೆ ಗೊತ್ತಿಲ್ಲ. ಕಾಂತಾರದ ಬೆಳಕಿನ ಅಬ್ಬರದ ಅಡಿಯ ಕತ್ತಲಲ್ಲಿ, ವೃದ್ಧಾಪ್ಯ ಕಳೆಯುತ್ತಿರುವ 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಶನ ನೀಡುವ ಮೂಲಕ ಸರ್ಕಾರ ನೆರವಾಗಬೇಕಿದೆ.

ಒಟ್ಟಾರೆ ಮಾಸಾಶನದ ಬೇಡಿಕೆಯೊಂದು ಈಡೇರಿದರೆ, ಹಳೆ ತಲೆಮಾರಿನ ದೈವ ನರ್ತಕರು ಎರಡು ಹೊತ್ತು ಹಂಗಿಲ್ಲದ ಊಟ ಮಾಡಬಹುದು. ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆ ಗಮನಹರಿಸಬೇಕಿದೆ. ಅದೇ ರೀತಿ ದೈವದ ಚಾಕರಿ ಮಾಡುವ, ಸಾವಿರಾರು ಮಂದಿ ಇದ್ದು, ಎರಡನೇ ಹಂತದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮೂಲಕ ದೈವದ ಚಾಕರಿ ಮಾಡುವವರಿಗೂ ವೃದ್ಧಾಪ್ಯದ ಭದ್ರತೆ ನೀಡಬೇಕೆಂಬ ಬೇಡಿಕೆ ಬಹುಕಾಲದಿಂದ ಬಾಕಿ ಉಳಿದಿದೆ. ದೈವದ ನುಡಿಗಾಗಿ ಜನ ಕಾಯುತ್ತಾರೆ. ಸರ್ಕಾರದ ನುಡಿಗಾಗಿ ಈ ದೈವನರ್ತಕರು ಕಾಯುತ್ತಿದ್ದಾರೆ. ನಾವು ಅದಕ್ಕೆ ಹೇಳಿದ್ದು ಇದು ರಿಯಲ್ ಕಾಂತಾರ.

Follow Us:
Download App:
  • android
  • ios