ಬೀದರ್(ಸೆ.27) ಪ್ರಧಾನಮಂತ್ರಿ ಅವರ ಆಶಯದಂತೆ ನಾವು ಸ್ವಚ್ಛ ಭಾರತ ಯೋಜನೆ ಅನುಷ್ಠಾನಕ್ಕೆ ಶ್ರಮಿಸೋಣ, ಬರುವ ಅ. 2 ರ ಗಾಂಧಿ ಜಯಂತಿ ಆಚರಣೆ ವೇಳೆಗೆ ಇಡೀ ಜಿಲ್ಲೆ ಕ್ಲೀನ್ ಸಿಟಿ ಆಗಬೇಕು. ಪ್ಲಾಸ್ಟಿಕ್ ಮುಕ್ತ ಬೀದರ್ ಜಿಲ್ಲೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೂಚಿಸಿದರು.

ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈ ಸಂದೇಶವು ಜಿಲ್ಲೆಯ ಎಲ್ಲಾ ಗ್ರಾಪಂ, ತಾಪಂಗೆ ಹೋಗಬೇಕು. ಎಲ್ಲಾ ಶಾಲೆಗಳಿಗೆ ಈ ಸಂದೇಶ ಕಳುಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಸ್ವಚ್ಚಭಾರತ ಮಿಷನ್ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಕಚೇರಿಗಳಿಗೆ ನಿಯಮಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆತ್ಮಹತ್ಯೆ ಪ್ರಕರಣಗಳಿಗೆ ಕೂಡಲೇ ಪರಿಹಾರ ಕೊಡಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಕೃಷಿ ಇಲಾಖೆಯ ಎಲ್ಲ ಯೋಜನೆಗಳ ಪ್ರಚಾರಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದು ಸೂಚಿಸಿದಾಗ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಜಿಲ್ಲೆಗೆ 31 ಕೋಟಿ ರು. ಬಿಡುಗಡೆಯಾಗಿದೆ. 10  ಆತ್ಮಹತ್ಯೆ ಪ್ರಕರಣಗಳ ಪೈಕಿ 7  ಪ್ರಕರಣಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೃಷಿ ಅಧಿಕಾರಿ ಪ್ರತಿಕ್ರಿಯಿಸಿದರು.

ಖರೀದಿ ಕೇಂದ್ರ ಶೀಘ್ರ ಆರಂಭಿಸಿ: 

ಹೆಸರು ಮತ್ತು ಉದ್ದು ಖರೀದಿ ಕೇಂದ್ರ ತೆರೆಯಲು ಸರ್ಕಾರ ಆದೇಶಮ ಮಾಡಿದೆ. ಈಗಾಗಲೇ ಹೋಬಳಿಗೊಂದರಂತೆ 30 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕೃಷಿ ಮಾರುಕಟ್ಟೆ ಅಧಿಕಾರಿ ಸಭೆಗೆ ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ತನಿಖೆ ನಡೆಸಿ: 

ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸದ್ಯ ಯಾವ ಸ್ಥಿತಿಯಲ್ಲಿವೆ? ಎಂಬುವುದರ ಬಗ್ಗೆ ವರದಿ ನೀಡಬೇಕು ಎಂದು ಸಚಿವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ಶಿವಾಜಿ ಅವರಿಗೆ 10 ದಿನಗಳ ಗಡುವು ವಿಧಿಸಿದರು. ನಗರಸಭೆಯಿುಂದ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ. ಇದು ಸರಿ ಹೋಗಬೇಕು. ನಾನು ಸದ್ಯದಲ್ಲೆ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವೆ ಎಂದು ಸಚಿವರು ತಿಳಿಸಿದರು.

ಹಾಸ್ಟೆಲ್ ಪರಿಶೀಲನಾ ವರದಿ ನೀಡಲು ಗಡುವು: 

ವಸತಿ ನಿಲಯದ ವಿದ್ಯಾರ್ಥಿಗಳ ಬಹುಮಾನ ಹಣ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರಂದಕುಮಾರ ಅರಳಿ ತಿಳಿಸಿದರು. ಈ ಬಗ್ಗೆ ಗಮನ ಹರಿಸಬೇಕು, ನಿಯಮಿತವಾಗಿ ಹಾಸ್ಟೆಲ್‌ಗಳಿಗೆ ಭೇಟಿ ಮಾಡಿ ಪರಿಶೀಲನಾ ವರದಿಯನ್ನು ನೀಡಲು ಸಚಿವರು, ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.

ಜೆಸ್ಕಾಂ ಸ್ಪಂದಿಸುತ್ತಿಲ್ಲ, ಸಚಿವ ಪ್ರಭು ಕಿಡಿಕಿಡಿ: 

10  ಬಾರಿ ಕರೆ ಮಾಡಿ ತಿಳಿಸಿದರೂ ತಾವು ಸ್ಪಂದಿಸುತ್ತಿಲ್ಲ. ನಿರಂತರ ಜ್ಯೋತಿ ಕೆಲಸ ಸರಿ ಇಲ್ಲ. ಔರಾದ್ ತಾಲೂಕಿನಲ್ಲಿ ೪೦೦ ವಿದ್ಯುತ್ ಕಂಬ ಬಿದ್ದ ಬಗ್ಗೆ ಹೇಳಿದ್ದರೂ ಏನೂ ಮಾಡಿಲ್ಲ ಎಂದು ಜನರು ದೂರುತ್ತಿದ್ದಾರೆ. ತಾವು ಸರಿಯಾಗಿ ಕೆಲಸ ಮಾಡಬೇಕು ಎಂದು ಸಚಿವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ನನಗೆ ಜಿಲ್ಲೆಯು ಅಭಿವೃದ್ಧಿಯಾಗಬೇಕು, ವಿಕಾಸವೂ ಆಗಬೇಕು

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ಮಹೋನ್ನತ ಉದ್ದೇಶವಾಗಿದೆ. ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕರಿಸಬೇಕು ಎಂದು ಹೇಳಿದ್ದಾರೆ. ಜನರ ಕೆಲಯವಾಗಬೇಕು. ಜನರಿಗೆ ಒಳ್ಳೆಯದಾಗಬೇಕು ಎಂಬುವುದು ತಮ್ಮ ಉದ್ದೇಶವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಿದಲ್ಲಿ ಯೋಜನೆಗಳ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ತಾವು ಈಗಾಗಲೇ ಹಲವಾರು ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿದಾಗ ಕೆಲ ಅಧಿಕಾರಿಗಳು ಅನಧಿಕೃತ ರಜೆ ಇರುವುದು, ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗದಿರುವುದು ಕಂಡು ಬಂದಿದೆ. ಅಂಥವರ ಮೇಲೆ ಕ್ರಮ ಜರುಗಿಸಲು ತಿಳಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವೈಖರಿ ಸರಿ' ಇರಬೇಕು. ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು ಎಂದರು. 

ಕೇಂದ್ರ ಕಚೇರಿಯಲ್ಲಿದ್ದೇ ಕೆಲಸ ಮಾಡಿ:

ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯ ಕೇಂದ್ರ ಸ್ಥಾನದಲ್ಲಿ ಇದ್ದೇ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಖಾಲಿ ಹುದ್ದೆಗಳ ಭರ್ತಿಗೆ ಮಾಹಿತಿ ಸಲ್ಲಿಸಿ: 

ಆಯಾ ಇಲಾಖೆಗಳಲ್ಲಿ ಇರುವ ಹುದ್ದೆಗಳೆಷ್ಟು? ಖಾಲಿ ಇರುವ ಹುದ್ದೆಗಳೆಷ್ಟು ಎಂಬುವುದರ ಬಗ್ಗೆ ಸಚಿವರು ಮಾಹಿತಿ ಪಡೆದರು. ಖಾಲಿ ಇರುವ ಹುದ್ದೆಗಳ ಭರ್ತಿ ಬೇಡಿಕೆಯ ವಿವರ ಸಲ್ಲಿಸಲು ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಗೈರಾದವರಿಗೆ ನೊಟೀಸ್: 

ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಚಿವ ಪ್ರಭು ಚವ್ಹಾಣ್ ಸೂಚಿಸಿದರು.