ಗಂಗಾವತಿ: ಹನುಮಂತನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗಿಂದು ಶಂಕು
120 ಕೋಟಿ ವೆಚ್ಚದ ಕೆಲಸಕ್ಕೆ ಸಿಎಂ ಬೊಮ್ಮಾಯಿ ಚಾಲನೆ, ರೋಪ್‌ವೇ, ಯಾತ್ರಿ ನಿವಾಸ ನಿರ್ಮಾಣ, ಆಂಜನೇಯನ ಜನ್ಮಸ್ಥಳ ತಿರುಪತಿ ಎಂದು ಟಿಟಿಡಿ ಘೋಷಿಸಿತ್ತು, ಎಚ್ಚೆತ್ತ ರಾಜ್ಯ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ನಿರ್ಧರಿಸಿತ್ತು, ಆ ಕಾರ್ಯಗಳಿಗೆ ಬೊಮ್ಮಾಯಿ ಅವರಿಂದ ಇಂದು ಚಾಲನೆ.
ಗಂಗಾವತಿ(ಮಾ.14): ತಾಲೂಕಿನ ಪುರಾಣ ಪ್ರಸಿದ್ಧ ಅಂಜನಾದ್ರಿಯಲ್ಲಿರುವ ಆಂಜನೇಯ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಮಂಗಳವಾರ) ಭೂಮಿಪೂಜೆ ನೆರವೇರಿಸಲಿದ್ದಾರೆ.
ಅಂಜನಾದ್ರಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 120 ಕೋಟಿ ರು.ಅನುದಾನ ನೀಡಿದೆ. ಈ ಅನುದಾನದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ, ಕ್ಷೇತ್ರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಯವರು ಭೂಮಿಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಅಂಜನಾದ್ರಿ ಬೆಟ್ಟದ ಕೆಳಗೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ನಂತರ ಆನೆಗೊಂದಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಆನಂದಸಿಂಗ್, ಹಾಲಪ್ಪ ಆಚಾರ್ ಸೇರಿ ಪ್ರಮುಖರು ಉಪಸ್ಥಿತರಿರಲಿದ್ದಾರೆ.
ಅಂತೂ ಇಂತೂ ನಂದಿಬೆಟ್ಟ ರೋಪ್‌ವೇಗೆ ಕಾಲ ಕೂಡಿಬಂತು: ಅಂಜನಾದ್ರಿ ಬೆಟ್ಟಕ್ಕೂ ರೋಪ್ ವೇ
ತಿರುಪತಿಯೇ ಆಂಜನೇಯನ ಜನ್ಮಸ್ಥಳ ಎಂದು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ಇತ್ತೀಚೆಗೆ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ ಆಂಜನೇಯನ ಜನ್ಮಸ್ಥಳ ಎಂದೇ ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಅಭಿವೃದ್ಧಿಗೆ ಮುಂದಾಗಿದೆ. ಬೊಮ್ಮಾಯಿ ಅವರು ಇತ್ತೀಚೆಗೆ ಅಂಜನಾದ್ರಿಗೆ ಭೇಟಿ ನೀಡಿ, ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಸಮೀಕ್ಷೆ ನಡೆಸಿದ್ದರು. ಬಳಿಕ, ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಲಾಗಿದೆ. ಅಲ್ಲದೆ, ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಘೋಷಿಸುವ ಸಂಬಂಧ ವಿವಿಧ ಮೂಲಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ರಾಜ್ಯ ಮುಜರಾಯಿ ಇಲಾಖೆ ಮುಂದಾಗಿದೆ.
ಅಲ್ಲದೆ, ಅಂಜನಾದ್ರಿಯ ಕಿಷ್ಕಿಂದೆಯಿಂದ ಅಯೋಧ್ಯೆಗೆ ನೇರ ಸಂಪರ್ಕ ಕಲ್ಪಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಕೋರಿ ನೈಋುತ್ಯ ರೈಲ್ವೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.