ಮಂಗಳೂರು (ಅ.25) :  ಕೊರೋನಾ ಅನ್‌ಲಾಕ್‌ ಬಳಿಕವೂ ಪ್ರೇಕ್ಷಕರನ್ನು ಕಾಣದೆ ನಿರಾಸೆಗೊಂಡಿರುವ ಮಲ್ಟಿಫ್ಲೆಕ್ಸ್‌ಗಳು ಈಗ ಸಿನಿಮಾ ಪ್ರಿಯರನ್ನು ಸೆಳೆಯಲು ಹೊಸ ಉಪಾಯ ಕಂಡುಕೊಂಡಿವೆ.

ಸಿನಿಮಾ ಥಿಯೇಟರ್‌ಗಳಿಗೆ ಪ್ರೇಕ್ಷಕರ ಆಕರ್ಷಿಸುವ ಸಲುವಾಗಿ ಮಂಗಳೂರಿನ ಮಲ್ಟಿಪ್ಲೆಕ್ಸ್‌ಗಳು ಹೊಸ ಆಫರ್‌ಗಳನ್ನು ನೀಡುತ್ತಿವೆ. ಈ ಮೂಲಕ ತಮಗೆ ಇಷ್ಟವಾದ ಚಿತ್ರವನ್ನು ಕುಟುಂಬ ಸಮೇತ ಅಥವಾ ಸ್ನೇಹಿತರ ಜೊತೆಗೆ ವೀಕ್ಷಿಸಲು ಅವಕಾಶ ನೀಡಲಾಗಿದೆ.

ಮಂಗಳೂರಿನ ಬಿಗ್‌ ಸಿನೆಮಾ ಥಿಯೇಟರ್‌ನಲ್ಲಿ 1,999 ರು. ಪಾವತಿಸಿದರೆ ಇಡೀ ಚಿತ್ರಮಂದಿರವನ್ನು ಸಿನೆಮಾ ವೀಕ್ಷಿಸಲು ಒಬ್ಬರಿಗೆ ಬುಕ್‌ ಮಾಡಲು ಅವಕಾಶ ನೀಡಲಾಗಿದೆ. ಈ ರೀತಿ ಕುಟುಂಬ ಸಮೇತರಾಗಿ ಇಲ್ಲವೇ, ಸ್ನೇಹಿತರ ಜೊತೆಯಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಸಾಮಾನ್ಯವಾಗಿ ಗೋಲ್ಡ್‌ ಕ್ಲಾಸ್‌ ಟಿಕೆಟ್‌ಗೆ 500 ರಿಂದ 250 ರು ವರೆಗೆ ದರವಿರುತ್ತದೆ. ಸಿಲ್ವರ್‌ಗೆ 200 ರು.ಗಳಿಂದ 150 ರು. ವರೆಗೆ ದರ ಇರುತ್ತದೆ. ಈಗ ಎಲ್ಲ ಸೀಟುಗಳಿಗೂ 50 ರು. ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ಡಿ-ಬಾಸ್‌ ಸಿನಿ ಲೈಫ್‌ನ ಫಸ್ಟ್ ನಾಯಕಿ ಯಾರು ಗೊತ್ತಾ? ..

ಸಿನೆಪೊಲಿಸ್‌ ಥಿಯೇಟರ್‌ನಲ್ಲಿ 5,000 ರು. ನೀಡಿದರೆ ಥಿಯೇಟರ್‌ ಬುಕ್‌ ಮಾಡಬಹುದು. ಇಲ್ಲಿ ತಮಗೆ ಇಷ್ಟದವರ ಜೊತೆಗೆ (ಗರಿಷ್ಠ 50 ಜನರು) ಕೂಡ ಸಿನೆಮಾ ವೀಕ್ಷಿಸಲು ಅವಕಾಶವಿದೆ. ಇಲ್ಲಿ ಗೋಲ್ಡ್‌ ಕ್ಲಾಸ್‌, ಸಿಲ್ವರ್‌ ಕ್ಲಾಸ್‌ಗೆ 100 ರು. ನಿಗದಿ ಮಾಡಲಾಗಿದೆ.

ಸದ್ಯ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರೇಕ್ಷಕರ ಸಂಖ್ಯೆ ಕೊರತೆ ಇರುವ ಕಾರಣದಿಂದ ಪ್ರೇಕ್ಷಕರನ್ನು ಆಕರ್ಷಿಸಲು ಥಿಯೇಟರ್‌ಗಳು ಇಂತಹ ಆಫರ್‌ ಜಾರಿಗೊಳಿಸುತ್ತಿವೆ. ಹೊಸ ಸಿನಿಮಾಗಳು ಇನ್ನೂ ಬಿಡುಗಡೆಗೊಳ್ಳದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಂಗಲ್‌ ಥಿಯೇಟರ್‌ ಇನ್ನೂ ಕೂಡ ಆರಂಭವಾಗಿಲ್ಲ.