Asianet Suvarna News Asianet Suvarna News

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ವಿದ್ಯುತ್‌ ಸಾಮಗ್ರಿ ಪೂರೈಸದೆ ಪಾಳು ಬಿದ್ದ ಉಗ್ರಾಣ

ಸ್ಟೋರ್‌ ಕೀಪರ್‌ ನೇಮಿಸಿದ್ದರೂ ವಿದ್ಯುತ್‌ ಸಾಮಗ್ರಿ ಪೂರೈಸದ ಬೆಸ್ಕಾಂ| ವಿದ್ಯುತ್‌ ಸಾಮಗ್ರಿ ಕೃತಕ ಅಭಾವ ಸೃಷ್ಟಿಗೆ ಯತ್ನ: ಆರೋಪ|ಪ್ರತಿಕ್ರಿಯಿಸಲು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ನಿರಾಕರಣೆ| ನಿರ್ಮಾಣವಾಗಿ ಎರಡ್ಮೂರು ವರ್ಷ ಕಳೆದರೂ ಬಳಕೆಯಾಗದ ಉಗ್ರಾಣ|

BESCOM Officials Did not Use Godown in Bengaluru
Author
Bengaluru, First Published Jan 16, 2020, 8:14 AM IST
  • Facebook
  • Twitter
  • Whatsapp

ಬೆಂಗಳೂರು(ಜ.16): ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಗಮ (ಬೆಸ್ಕಾಂ)ಯು ಕೆಂಗೇರಿಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ನೂತನ ಉಗ್ರಾಣವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಳು ಬೀಳುತ್ತಿದೆ. ಸ್ಟೋರ್‌ಕೀಪರ್‌ ನೇಮಕ ಸೇರಿದಂತೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದ್ದರೂ ವಿದ್ಯುತ್‌ ಸಾಮಗ್ರಿ ಪೂರೈಸದೆ ಉಗ್ರಾಣವನ್ನು ನಿರುಪಯುಕ್ತ ಕಟ್ಟಡವನ್ನಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕುಂಬಳಗೋಡು ಬಳಿ ಬೆಸ್ಕಾಂನ ಕೆಂಗೇರಿ ಪಶ್ಚಿಮ ವೃತ್ತದ ವ್ಯಾಪ್ತಿಗೆ ಬರುವ ಮೈಸೂರು ರಸ್ತೆಯಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ನೂತನವಾಗಿ ವಿದ್ಯುತ್‌ ಸಾಮಗ್ರಿಗಳನ್ನು ಶೇಖರಿಸುವ ಉಗ್ರಾಣ ನಿರ್ಮಾಣ ಮಾಡಲಾಗಿದೆ. ಉಗ್ರಾಣ ನಿರ್ಮಾಣವಾಗಿ ಎರಡು ಮೂರು ವರ್ಷ ಕಳೆದರೂ ಉಗ್ರಾಣವನ್ನು ಬಳಕೆ ಮಾಡುತ್ತಿಲ್ಲ. ಇತ್ತೀಚೆಗೆ ಉಗ್ರಾಣಕ್ಕೆ ಸ್ಟೋರ್‌ ಕೀಪರ್‌ ನೇಮಕಗೊಂಡಿದ್ದರೂ ಸಾಮಗ್ರಿ ಪೂರೈಕೆ ಮಾಡದ ಕಾರಣ ಸ್ಟೋರ್‌ ಕೀಪರ್‌ಗೂ ಕೆಲಸವಿಲ್ಲದಂತಾಗಿದೆ. ಸ್ಥಳೀಯ ಗುತ್ತಿಗೆದಾರರಿಗೆ ಪರೋಕ್ಷವಾಗಿ ತೊಂದರೆ ನೀಡುವ ಸಲುವಾಗಿಯೇ ಉಗ್ರಾಣವನ್ನು ಬಳಕೆ ಮಾಡುತ್ತಿಲ್ಲ ಎಂಬ ಆರೋಪ ಗುತ್ತಿಗೆದಾರರಿಂದ ಕೇಳಿಬಂದಿದೆ.

ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ:

ಬೆಸ್ಕಾಂ ಸಂಸ್ಥೆಯು ಕೃತಕವಾಗಿ ವಿದ್ಯುತ್‌ ಸಾಮಗ್ರಿಗಳ ಅಭಾವ ಸೃಷ್ಟಿಸುವ ಮೂಲಕ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸವಿಲ್ಲದಂತೆ ಮಾಡಲು ಮುಂದಾಗಿದೆ. ಇದಕ್ಕಾಗಿಯೇ ಕೆಂಗೇರಿಯಲ್ಲಿ 3-4 ವರ್ಷದ ಹಿಂದೆಯೇ ಉಗ್ರಾಣ ನಿರ್ಮಾಣವಾಗಿ ಸ್ಟೋರ್‌ ಕೀಪರ್‌ ನೇಮಕಗೊಂಡಿದ್ದರೂ ವಿದ್ಯುತ್‌ ಸಾಮಗ್ರಿ ಪೂರೈಕೆ ಮಾಡುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

ಸಾಮಾನ್ಯ ಗುತ್ತಿಗೆದಾರರು ಇದುವರೆಗೂ ನಡೆಸುತ್ತಿದ್ದ ಸಣ್ಣ ಪುಟ್ಟ ವಿದ್ಯುತ್‌ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್‌ ಆಗಿ ಒಂದು ಪ್ಯಾಕೇಜ್‌ ಮಾಡಿ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿದೆ. 450 ಕೋಟಿ ಕಾಮಗಾರಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿದೆ. ಪ್ರಸ್ತುತ  1 ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳನ್ನು ಬೆಸ್ಕಾಂ ವ್ಯಾಪ್ತಿಯ 6 ಸಾವಿರ ಮಂದಿ ಪರವಾನಗಿ ಪಡೆದ ಗುತ್ತಿಗೆದಾರರು ನಿರ್ವಹಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕಾಮಗಾರಿಗಳಿಗೆ ಅಗತ್ಯ ವಿದ್ಯುತ್‌ ಸಾಮಗ್ರಿ ಪೂರೈಕೆ ಮಾಡದೆ ಕಾಮಗಾರಿಗಳನ್ನು ನಿರ್ವಹಿಸದಂತೆ ಪಿತೂರಿ ನಡೆಸಲಾಗಿದೆ. 450 ಕೋಟಿ ಮೊತ್ತದ ಟೆಂಡರ್‌ ಅಂತಿಮವಾದ ಬಳಿಕ ಈ ಕಾಮಗಾರಿಗಳನ್ನೂ ಪ್ಯಾಕೇಜ್‌ನಡಿ ಸೇರಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಸ್ತುತ ಸಾಮಗ್ರಿ ಪೂರೈಸದ ಕಾರಣ ಹಣ ಸಂದಾಯ ಮಾಡಿರುವ ಗ್ರಾಹಕರಿಗೂ ವಿದ್ಯುತ್‌ ಸಂಪರ್ಕ (ಸರ್ವಿಸ್‌ ಮೈನ್‌ ಕನೆಕ್ಷನ್‌) ಒದಗಿಸಲು ಸಾಧ್ಯವಾಗುತ್ತಿಲ್ಲ. ಉದ್ದೇಶಪೂರ್ವಕವಾಗಿ ಸಂಸ್ಥೆಯು ಒಂದು ತಿಂಗಳ ಕಾಲ ಸಾಮಗ್ರಿ ಅಭಾವ ಸೃಷ್ಟಿಸಿ ಪ್ಯಾಕೇಜ್‌ ಟೆಂಡರ್‌ ಆದ ಬಳಿಕ ಈ ಕಾಮಗಾರಿಗಳನ್ನೂ ಹೊಸ ಗುತ್ತಿಗೆ ಸಂಸ್ಥೆಗೆ ವಹಿಸಲು ಷಡ್ಯಂತರ ರೂಪಿಸಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಬೆಂಗಳೂರು ಜಿಲ್ಲಾ ಸಮಿತಿಯು ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದೆ.

ಪ್ರತಿಕ್ರಿಯಿಸಲು ಬೆಸ್ಕಾಂ ಅಧಿಕಾರಿ ನಕಾರ

ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಉಗ್ರಾಣ ಸದ್ಬಳಕೆ ಮಾಡಿಕೊಳ್ಳದ ಬಗ್ಗೆ ಪ್ರತಿಕ್ರಿಯಿಸಲು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಪ್ರೊಕ್ಯೂರ್‌ಮೆಂಟ್‌) ಸೋಮಶೇಖರ್‌ ನಿರಾಕರಿಸಿದ್ದಾರೆ. ಸತತವಾಗಿ ಸಂಪರ್ಕಕ್ಕೆ ಯತ್ನಿಸಿದರೂ ಸೋಮಶೇಖರ್‌ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸಂಪರ್ಕಕ್ಕೆ ಸಿಕ್ಕಾಗಲೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
 

Follow Us:
Download App:
  • android
  • ios