ಶ್ರೀಕಾಂತ ಎನ್‌.ಗೌಡಸಂದ್ರ

ಬೆಂಗಳೂರು [ಸೆ.22]:  ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್‌ ಸರಬರಾಜು ಸಂಸ್ಥೆಯು ಬೆಂಗಳೂರಿನ ಚಂದಾಪುರದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ಸ್ಮಾರ್ಟ್‌ ವಿದ್ಯುತ್‌ ಮೀಟರ್‌ ಯೋಜನೆ ಭಾಗಶಃ ಯಶಸ್ವಿಯಾಗಿದ್ದು, ವಾರದೊಳಗಾಗಿ ವಿದ್ಯುತ್‌ ಬಿಲ್‌ ರೀಡ್‌ ಮಾಡುವ ಅಂತಿಮ ಘಟ್ಟದ ಪರೀಕ್ಷಾ ಕಾರ್ಯ ಪ್ರಾರಂಭವಾಗಲಿದೆ.

ಈ ಯೋಜನೆ ಸಂಪೂರ್ಣ ಯಶಸ್ವಿಯಾಗಿ ಬೆಸ್ಕಾಂನ ಇತರೆಡೆಯೂ ಅನುಷ್ಠಾನಗೊಂಡರೆ ಸಾವಿರಾರು ಮಂದಿ ವಿದ್ಯುತ್‌ ಮೀಟರ್‌ ರೀಡರ್‌ಗಳು (ವಿದ್ಯುತ್‌ ಮಾಪನ ಓದುಗ) ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.

ಹೌದು, ಸ್ಮಾರ್ಟ್‌ ಮೀಟರ್‌ ಅಳವಡಿಕೆ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಬೆಸ್ಕಾಂ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲೂ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಯೋಜನೆ ವಿಸ್ತರಿಸಲು ಚಿಂತಿಸಲಾಗಿದೆ.

ಅತ್ಯಾಧುನಿಕ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆಯಿಂದ ಮೀಟರ್‌ ರೀಡರ್‌ಗಳು ಖುದ್ದಾಗಿ ಪ್ರತಿ ಮನೆ-ಮನೆಗೂ ಸಂಚರಿಸಿ ಮೀಟರ್‌ ರೀಡ್‌ ಮಾಡಿ ಬಿಲ್‌ ನೀಡುವ ಅಗತ್ಯವಿರುವುದಿಲ್ಲ. ಬದಲಿಗೆ ಬೆಸ್ಕಾಂ ನಿಯಂತ್ರಣಾ ಕೊಠಡಿಯಿಂದಲೇ ಐಟಿ ಸರ್ವರ್‌ ನೆರವಿನಿಂದ ಗ್ರಾಹಕರ ವಿದ್ಯುತ್‌ ಮೀಟರ್‌ ರೀಡ್‌ ಮಾಡಬಹುದು. ಅಷ್ಟೇ ಅಲ್ಲದೆ ವಿದ್ಯುತ್‌ ಶುಲ್ಕದ ವಿವರ ಗ್ರಾಹಕರಿಗೆ ಮೊಬೈಲ್‌ ಸಂದೇಶ ಹಾಗೂ ಇ-ಮೇಲ್‌ ಮೂಲಕ ರವಾನಿಸಲಾಗುವುದು. ಅದೇ ಸಂದೇಶ ಹಾಗೂ ನಿಖರ ಮಾಹಿತಿಯು ಬೆಸ್ಕಾಂ ಸರ್ವರ್‌ನಲ್ಲೂ ಸಂರಕ್ಷಿಸಲ್ಪಡುತ್ತಿದೆ.

ಅಲ್ಲದೆ ಸ್ಮಾರ್ಟ್‌ ಮೀಟರ್‌ನಿಂದಾಗಿ ವಿದ್ಯುತ್‌ ಕಳ್ಳತನ, ಮೀಟರ್‌ ಟ್ಯಾಂಪರಿಂಗ್‌ ಮಾತ್ರವಲ್ಲದೆ ವಿದ್ಯುತ್‌ ಕಡಿತ ಉಂಟಾದರೂ ಪತ್ತೆ ಮಾಡಬಹುದು. ಜತೆಗೆ ವಿದ್ಯುತ್‌ ಮೀಟರ್‌ನಲ್ಲಿ ದೋಷ ಕಂಡು ಬಂದರೆ ಆನ್‌ಲೈನ್‌ನಲ್ಲಿಯೇ ದೋಷ ಸರಿಪಡಿಸಲು ಸಹ ಅವಕಾಶವಿದೆ. ಇದರಿಂದ ಗ್ರಾಹಕರು ದೂರು ನೀಡದೆಯೇ ಬೆಸ್ಕಾಂ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಕೆಲಸ ನಿರ್ವಹಿಸಲು ಇದು ಅನುಕೂಲವಾಗಲಿದೆ. ವಿದ್ಯುತ್‌ ಸೋರಿಕೆ, ಹಣದ ನಿರ್ವಹಣೆಯಲ್ಲಿ ನಿಖರತೆ ಬರುವುದರಿಂದ ಬೆಸ್ಕಾಂಗೂ ಆದಾಯ ವೃದ್ಧಿಸಲಿದೆ ಎಂಬುದು ಅಧಿಕಾರಿಗಳ ಮಾತು.

ಸಾವಿರಾರು ಜನರ ಕೆಲಸ ಹೋಗುತ್ತಾ?

ಬೆಸ್ಕಾಂ ರಾಜ್ಯದ ಅತಿದೊಡ್ಡ ವಿದ್ಯುತ್‌ ಸರಬರಾಜು ಕಂಪನಿಯಾಗಿ ಹೆಸರು ಮಾಡಿದೆ. 41 ಸಾವಿರ ಚದರ ಕಿಲೋ ಮೀಟರ್‌ ವಿಸ್ತೀರ್ಣದ ಎಂಟು ಜಿಲ್ಲೆಗಳಲ್ಲಿ 2.07 ಕೋಟಿ ಜನರಿಗೆ ವಿದ್ಯುತ್‌ ಪೂರೈಕೆ ಮಾಡುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಸಾವಿರಾರು ಮಂದಿ ಮೀಟರ್‌ ರೀಡರ್‌ಗಳು ಪ್ರತಿ ಮನೆ-ಮನೆಗೂ ತೆರಳಿ ಮೀಟರ್‌ ರೀಡಿಂಗ್‌ ಕಾರ್ಯ ಮಾಡುತ್ತಿದ್ದಾರೆ.

ಇದೀಗ ಸ್ಮಾರ್ಟ್‌ ಮೀಟರ್‌ ಯೋಜನೆ ಯಶಸ್ವಿಯಾದರೆ ಮೀಟರ್‌ ರೀಡರ್‌ಗಳ ಅಗತ್ಯವೇ ಬೆಸ್ಕಾಂಗೆ ಇರುವುದಿಲ್ಲ. ಎಂಟೂ ಜಿಲ್ಲೆಗಳಲ್ಲೂ ಅನುಷ್ಠಾನ ಮಾಡುವ ಮೂಲಕ ಮೀಟರ್‌ ರೀಡರ್‌ಗಳ ನೌಕರಿಗೆ ಕುತ್ತು ಉಂಟು ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಹಾಗೆ ಆಗಲ್ಲ:  ಹಾಲಿ ಇರುವ ಮೀಟರ್‌ ರೀಡರ್‌ಗಳ ಉದ್ಯೋಗಕ್ಕೆ ಕುತ್ತು ತರುವ ಉದ್ದೇಶ ಬೆಸ್ಕಾಂಗೆ ಇಲ್ಲ. ಮಾನವನ ಹಸ್ತಕ್ಷೇಪದಿಂದ ಉಂಟಾಗುವ ದೋಷಗಳ ನಿವಾರಣೆಗೆ ಸ್ಮಾರ್ಟ್‌ ಮೀಟರ್‌ ಅನುಕೂಲವಾಗಲಿದೆ. ಬೆಸ್ಕಾಂನ ಇತರೆ ಭಾಗಕ್ಕೆ ಇದನ್ನು ವಿಸ್ತರಿಸಬೇಕು ಎಂಬ ಬಗ್ಗೆಯೂ ಬೆಸ್ಕಾಂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಸ್ಮಾರ್ಟ್‌ ಮೀಟರ್‌ನಿಂದ ಯಾರ ಉದ್ಯೋಗವಕಾಶವನ್ನೂ ಕಸಿದಂತಾಗುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಾರೆ.

ಬೆಂಗಳೂರಿನ ಚಂದಾಪುರ ಉಪ ವಿಭಾಗದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲು ಒಂದೂವರೆ ವರ್ಷದ ಹಿಂದೆ ಬೆಸ್ಕಾಂ ಸ್ಮಾರ್ಟ್‌ ಅಳವಡಿಕೆ ಯೋಜನೆ ಕೈಗೆತ್ತಿಕೊಂಡಿತ್ತು.

ಐಐಟಿ ವಾರಣಾಸಿ (ಐಐಟಿ ಬಿಎಚ್‌ಯು), ಸಿಎಸ್‌ಟಿಇಪಿ (ಸೆಂಟರ್‌ ಫಾರ್‌ ಸ್ಟಡಿ ಆಫ್‌ ಸೈನ್ಸ್‌, ಟೆಕ್ನಾಲಜಿ, ಪಾಲಿಸಿ) ಸಂಸ್ಥೆಗಳ ಸಹಯೋಗದಲ್ಲಿ ಬೆಸ್ಕಾಂ 1,200 ಸ್ಮಾರ್ಟ್‌ ಮೀಟರ್‌ಗಳನ್ನು ಪಡೆದುಕೊಂಡಿದೆ. ಇವುಗಳಲ್ಲಿ 500 ಮೀಟರ್‌ಗಳನ್ನು ಚಂದಾಪುರದ 43 ಟ್ರಾನ್ಸ್‌ಫಾರ್ಮರ್‌ಗಳ ವ್ಯಾಪ್ತಿಯಲ್ಲಿ ವಸತಿ, ವಾಣಿಜ್ಯ ಕಟ್ಟಡಗಳಿಗೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಿದೆ.

ಮೀಟರ್‌ನಲ್ಲಿ ಕಮ್ಯುನಿಕೇಷನ್‌ ಸಿಸ್ಟಂ, ಐಟಿ ಸರ್ವರ್‌, ವಿದ್ಯುತ್‌ ಮಾಪನ ಸೇರಿ ಮೂರು ಸಾಧನ ಅಳವಡಿಸಲಾಗಿರುತ್ತದೆ. ಹೀಗೆ ಅಳವಡಿಸಿರುವ ಮೀಟರ್‌ಗಳನ್ನು ವಾರದೊಳಗಾಗಿ ಪರೀಕ್ಷೆಗೆ ಒಳಪಡಿಸಲಾಗುವುದು. ಸ್ಮಾರ್ಟ್‌ ಮೀಟರ್‌ಗಳ ಮೂಲಕವೇ ಪ್ರಸಕ್ತ ತಿಂಗಳ ವಿದ್ಯುತ್‌ ಬಳಕೆ ಹಾಗೂ ವಿದ್ಯುತ್‌ ಶುಲ್ಕವನ್ನು ಮಾಪನ ಮಾಡಲಾಗುವುದು. ನೂತನ ಸ್ಮಾರ್ಟ್‌ ಮೀಟರ್‌ಗಳಲ್ಲಿ ಲೋಪ ದೋಷ ಉಂಟಾಗಬಹುದು ಎಂಬ ಕಾರಣಕ್ಕೆ ಅಷ್ಟೂಕಟ್ಟಡಗಳಲ್ಲಿ ಸಾಂಪ್ರದಾಯಿಕ ಮೀಟರ್‌ಗಳನ್ನೂ ಉಳಿಸಿಕೊಳ್ಳಲಾಗಿದೆ. ಎರಡೂ ಮೀಟರ್‌ಗಳ ಶುಲ್ಕಗಳನ್ನು ಹೋಲಿಕೆ ಮಾಡಿ ಲೋಪ-ದೋಷಗಳಿದ್ದರೆ ಸರಿಪಡಿಸಲಾಗುವುದು ಎಂದು ಬೆಸ್ಕಾಂ ಉನ್ನತ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸ್ಮಾರ್ಟ್‌ ಮೀಟರ್‌ ಅಳವಡಿಕೆಯನ್ನು ಪ್ರಾಯೋಗಿಕವಾಗಿ ಚಂದಾಪುರ ಉಪವಿಭಾಗದಲ್ಲಿ ಮಾಡಿದ್ದೇವೆ. ಸದ್ಯದಲ್ಲೇ ಮೀಟರ್‌ ರೀಡಿಂಗ್‌ ಕಾರ್ಯ ಶುರುವಾಗಲಿದೆ. ಯಾವುದೇ ಲೋಪದೋಷ ಉಂಟಾಗದಂತೆ ಹಳೆಯ ಮೀಟರ್‌ ಹಾಗೂ ಸ್ಮಾರ್ಟ್‌ ಮೀಟರ್‌ ಎರಡನ್ನೂ ಅಳವಡಿಸಲಾಗಿದೆ. ಹೀಗಾಗಿ ಮಾಪನದ ವ್ಯತ್ಯಾಸ ಗಮನಿಸಿ ದೋಷಗಳಿದ್ದರೆ ಸರಿಪಡಿಸಲಾಗುವುದು. ಯೋಜನೆ ಯಶಸ್ವಿ ಆಧಾರದ ಮೇಲೆ ಮುಂದಿನ ನಿರ್ಣಯವನ್ನು ಬೆಸ್ಕಾಂ ತೆಗೆದುಕೊಳ್ಳಲಿದೆ.

-ಸಿ.ಕೆ.ಶ್ರೀನಾಥ್‌, ಉಪ ಪ್ರಧಾನ ವ್ಯವಸ್ಥಾಪಕರು, (ಸ್ಮಾರ್ಟ್‌ ಗ್ರಿಡ್‌) ಬೆಸ್ಕಾಂ.