ಬೆಂಗಳೂರು ಆಟೋ ಅವಾಂತರ: ತಪ್ಪಾದ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಚಲಿಸುವ ಆಟೋದಿಂದ ಜಿಗಿದ ಮಹಿಳೆ!
ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ನಮ್ಮ ಯಾತ್ರಿ ಆಟೋದಿಂದ ಜಿಗಿದು ಪ್ರಾಣ ಉಳಿಸಿಕೊಂಡ ಘಟನೆ ನಡೆದಿದೆ. ಆಟೋ ಚಾಲಕ ಮಹಿಳೆಯನ್ನು ತಪ್ಪಾದ ದಾರಿಗೆ ಕರೆದೊಯ್ಯುತ್ತಿದ್ದಾಗ, ಚಲಿಸುತ್ತಿದ್ದ ಆಟೋದಿಂದ ಜಿಗಿದು ಮಹಿಳೆ ತಪ್ಪಿಸಿಕೊಂಡಿದ್ದಾರೆ.
ಬೆಂಗಳೂರು (ಜ.03): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆಟೋ ಬುಕಿಂಗ್ ಮಾಡಿ ಮನೆಗೆ ತೆರಳುತ್ತಿದ್ದ ಮಹಿಳೆಯನ್ನು ದಾರಿ ತಪ್ಪಿಸಿ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದುದು ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಆಟೋ ನಿಲ್ಲಿಸುವಂತೆ ಗಲಾಟೆ ಮಾಡಿದರೂ ವೇಗವಾಗಿ ಹೋಗುತ್ತಿದ್ದ ಆಟೋದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾಳೆ ಎಂದು ಸ್ವತಃ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಆತಂಕಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬರು ಹೆಬ್ಬಾಳ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋದಿಂದ ಜಿಗಿದು ಉರುಳಿ ಬಿದ್ದು, ನಂತರ ಜೀವ ಉಳಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ವೇಳೆ ಮಹಿಳೆ ನಮ್ಮ ಯಾತ್ರಿ ಆಟೋ ಬುಕಿಂಗ್ ಮಾಡಿಕೊಂಡು ಹೊರಮಾವು ಏರಿಯಾದಿಂದ ಥಣಿಸಂದ್ರಕ್ಕೆ ಹೋಗುತ್ತಿದ್ದರು. ಆದರೆ ಆಟೋ ಚಾಲಕ ಥಣಿಸಂದ್ರಕ್ಕೆ ಹೋಗುವ ಬದಲು ತಪ್ಪಾದ ದಾರಿಯಲ್ಲಿ ಬೇರೆ ಕಡೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ಆಟೋ ಚಾಲಕನಿಗೆ ಈ ದಾರಿ ಥಣಿಸಂದ್ರಕ್ಕೆ ಹೋಗುವುದಿಲ್ಲ, ನೀವೆಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಆಗ ಆಟೋ ಚಾಲಕ ಇದೇ ಸರಿಯಾದ ದಾರಿ ನಿಮ್ಮನ್ನು ನಾನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಆಟೋವನ್ನು ಮತ್ತಷ್ಟು ವೇಗವಾಗಿ ಓಡಿಸಲು ಮುಂದಾಗಿದ್ದಾನೆ. ಆಗ ಮಹಿಳೆ ಆಟೋ ನಿಲ್ಲಿಸಿ ಎಂದು ಕೂಗಾಡಿದ್ದಾರೆ. ಆದರೂ ಆಟೋ ನಿಲ್ಲಿಸದ ಚಾಲಕನ ವರ್ತನೆಯಿಂದ ಭಯಗೊಂಡ ಮಹಿಳೆ, ಚಲಿಸುತ್ತಿದ್ದ ಆಟೋದಿಂದ ಜಿಗಿದಿದ್ದಾರೆ. ಆಗ ರಸ್ತೆಯಲ್ಲಿ ಹಿಂದೆ ಯಾವುದೇ ಬಾಹನ ಬಾರದ ಹಿನ್ನೆಲೆಯಲ್ಲಿ ರಸ್ತೆಗೆ ಬಿದ್ದು ಗಾಯಗೊಂಡರೂ ಮಹಿಳೆ ಮೇಲೆದ್ದು ಜನರನ್ನು ಕರೆದು ರಕ್ಷಣೆ ಪಡೆದು ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಹೆಬ್ಬಾಳದ ವೀರಣ್ಣಪಾಳ್ಯ ಬಳಿ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಾರಿಗೆ ಸಚಿವರೇ ಇಲ್ನೋಡಿ; ಆಟೋ, ಕ್ಯಾಬ್ ಚಾಲಕರ ಪುಂಡಾಟಕ್ಕೆ ಕೊನೆ ಎಂದು?
ಈ ಬಗ್ಗೆ ಸ್ವತಃ ಮಹಿಳೆಯ ಗಂಡ ಅಝರ್ ಖಾನ್ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ನಿನ್ನೆ ರಾತ್ರಿ, ನನ್ನ ಹೆಂಡತಿ ಹೊರಮಾವಿನಿಂದ ಥಣಿಸಂದ್ರಕ್ಕೆ ಹೋಗಲು ನಮ್ಮ ಯಾತ್ರಿ ಆ್ಯಪ್ ಮೂಲಕ KA03-AM8956 ನಂಬರ್‌ನ ಆಟೋ ಬುಕ್ ಮಾಡಿದ್ದರು. ಆದರೆ ಮದ್ಯ ಸೇವನೆ ಮಾಡಿದ್ದ ಚಾಲಕ ಅವಳನ್ನು ಹೆಬ್ಬಾಳ ಕಡೆಗೆ ತಪ್ಪು ಸ್ಥಳಕ್ಕೆ ಕರೆದೊಯ್ದ. ಆತಂಕದಿಂದ, ಅವಳು ಚಲಿಸುತ್ತಿರುವ ಆಟೋದಿಂದ ಜಿಗಿದು ಪ್ರಾಣ ಉಳಿಸಿಕೊಂಡರು.
ನಮ್ಮ ಯಾತ್ರಿ ಆಟೋದ ಸೇವೆಯ ದೊಡ್ಡ ಕೊರತೆಯೆಂದರೆ, ಗ್ರಾಹಕರ ಸಹಾಯವಿಲ್ಲ. 24ಗಂಟೆ ಕಾಯಿರಿ ಎಂಬ ಉತ್ತರ. ತುರ್ತು ಪರಿಸ್ಥಿತಿಯಲ್ಲಿ 24 ಗಂಟೆ ಕಾಯಲು ಹೇಗೆ ಸಾಧ್ಯ? ಮಹಿಳೆಯ ಭದ್ರತೆ ಹೇಗೆ? ಬೆಂಗಳೂರು ನಗರ ಪೊಲೀಸರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ದಯವಿಟ್ಟು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ಇಂತಹ ಅಪರಾಧಿಗಳಿಗೆ ತೀವ್ರ ಕ್ರಮ ಕೈಗೊಳ್ಳಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ ಒಂದು ವಿಡಿಯೋ ಕೂಡ ಹಂಚಿಕೊಂಡು ಅದರಲ್ಲಿ ತಪ್ಪಿತಸ್ಥ ಆಟೋ ಚಾಲಕನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನಗರದಲ್ಲಿ ಆಟೋ ಚಾಲಕರ ಮೀಟರ್ ವಂಚನೆ ಗುರುತಿಸಲು ಈ ತಂತ್ರ ತಿಳಿಯಿರಿ!