ಬೆಂಗಳೂರು[ಫೆ.17]: ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಒಟ್ಟು ಐದು ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಅದರಲ್ಲಿ ಎರಡು ಪ್ರಕರಣ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆರುವುದು ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ.

ಕಳೆದ ಜನವರಿ 1ರಂದು ಓಲ್ಡ್‌ ಮದ್ರಾಸ್‌ ರಸ್ತೆಯ ಸಾಂಕ್ರಮಿಕ ರೋಗಗಳ ಆಸ್ಪತ್ರೆಯಲ್ಲಿ ಹನುಮಂತನಗರದ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ರೇಬಿಸ್‌ಗೆ ಬಲಿಯಾಗಿದ್ದರು. ಇದೀಗ ಫೆ.15ರ ಶನಿವಾರ ನಗರ ವಿಕ್ರಂ ಆಸ್ಪತ್ರೆಯಲ್ಲಿ 31 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವುದು ಸಾರ್ವಜನಿಕರನ್ನು ತೀವ್ರ ಆತಂಕಕ್ಕೀಡು ಮಾಡಿದೆ.

ಶನಿವಾರ ಮೃತಪಟ್ಟಮಹಿಳೆ ಕಾಕ್ಸ್‌ ಟೌನ್‌ನ ನಿವಾಸಿಯಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ನಾಯಿ ಮರಿಯಿಂದ ಕಚ್ಚಿಸಿಕೊಂಡಿದ್ದರು. ಆದರೆ, ರೇಬಿಸ್‌ ರೋಗ ನಿರೋಧಕ ಲಿಸಿಕೆ ಪಡೆದುಕೊಂಡಿರಲಿಲ್ಲ. ಜ್ವರದಿಂದ ಬಳಲುತ್ತಿರುವುದಾಗಿ ಕಳೆದ ಬುಧವಾರ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚು ಜೊಲ್ಲು ಸುರಿಸುತ್ತಿದ್ದರು, ಗಾಳಿ-ನೀರಿಗೆ ಭಯ ಪಡುತ್ತಿದ್ದರು. ಈ ಎಲ್ಲ ರೇಬಿಸ್‌ ರೋಗದ ಲಕ್ಷಣಗಳು ಎಂದು ತಿಳಿದ ಬಂದ ಹಿನ್ನೆಲೆಯಲ್ಲಿ ರಕ್ತ ಹಾಗೂ ಇತರೆ ಮಾದರಿಯನ್ನು ಪರೀಕ್ಷೆಗೆ ನಿಮಾನ್ಸ್‌ ಆಸ್ಪತ್ರೆ ಲ್ಯಾಬ್‌ಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷಾ ವರದಿಯಲ್ಲಿ ರೇಬಿಸ್‌ ಇರುವುದು ದೃಢವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಮಹಿಳೆ ಮೃತಪಟ್ಟಿದ್ದಾರೆ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಿಕ್ರಂ ಆಸ್ಪತ್ರೆಯ ವೈದ್ಯ ವಿಜಯ್‌ ಕುಮಾರ್‌ ಅನನ್ಯ ರೆಡ್ಡಿ, ರೇಬಿಸ್‌ ರೋಗಕ್ಕೆ ತುತ್ತಾದವರು ಬದುಕುವುದು ತೀರಾ ಕಡಿಮೆ. ಇಡೀ ಪ್ರಪಂಚದಲ್ಲಿ ಈವರೆಗೆ ಸುಮಾರು ನಾಲ್ಕರಿಂದ ಐದು ಮಂದಿ ಮಾತ್ರ ರೇಬಿಸ್‌ ರೋಗ ಗೆದ್ದು ಬದುಕಿರಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಮೃತಪಟ್ಟಮಹಿಳೆಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು, ದಾದಿಯರು, ಸಹಾಯಕರು ಸೇರಿದಂತೆ ಒಟ್ಟು 22 ಮಂದಿಗೆ ರೇಬಿಸ್‌ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಜತೆಗೆ ರೇಬಿಸ್‌ ರೋಗಕ್ಕೆ ಮಹಿಳೆ ಮೃತಪಟ್ಟಿರುವ ಬಗ್ಗೆ ಸ್ಥಳೀಯ ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅನ್ಸರ್‌ಅಹ್ಮದ್‌ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಿಂದ ಸರಾಸರಿ 5 ರಿಂದ 6 ಮಂದಿ ರೇಬಿಸ್‌ ರೋಗಕ್ಕೆ ಮರಣ ಹೊಂದುತ್ತಿದ್ದಾರೆ. ಅದಕ್ಕಿಂತ ಹಿಂದಿನ ವರ್ಷದಲ್ಲಿ ಮೃತರ ಸಂಖ್ಯೆ ಇನ್ನು ಹೆಚ್ಚಾಗಿತ್ತು. ರೇಬಿಸ್‌ ಸಂಬಂಧಿಸಿದಂತೆ ನಗರದಲ್ಲಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡಿರುವುದರಿಂದ ಮೃತರ ಸಂಖ್ಯೆ ಕಡಿಮೆಯಾಗಿದೆ ಎಂದರು.

ವಿಕ್ರಂ ಆಸ್ಪತ್ರೆ ವಿರುದ್ಧ ಆಕ್ಷೇಪ

ವಿಕ್ರಂ ಆಸ್ಪತ್ರೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅನ್ಸರ್‌ಅಹ್ಮದ್‌, ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೇಬಿಸ್‌ ರೋಗಿಗೆ ಚಿಕಿತ್ಸೆ ನೀಡುವುದು ಹಾಗೂ ದಾಖಲಿಸಿಕೊಳ್ಳುವಂತಿಲ್ಲ. ರೇಬಿಸ್‌ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ರೋಗಿಯನ್ನು ಸಾಂಕ್ರಮಿಕ ರೋಗಗಳ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಆದರೆ, ವಿಕ್ರಂ ಆಸ್ಪತ್ರೆಯಲ್ಲಿ ರೇಬಿಸ್‌ ರೋಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಇದರಿಂದ ಬೇರೆ ರೋಗಿಗಳಿಗೆ ಹಾಗೂ ಸಿಬ್ಬಂದಿಗೆ ರೇಬಿಸ್‌ ಹರಡುವ ಸಾಧ್ಯತೆ ಇರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.