Asianet Suvarna News Asianet Suvarna News

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸೊಲ್ಲ; ಮಾಜಿ ಸಂಸದ ಡಿ.ಕೆ. ಸುರೇಶ್

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ‌ ಮಾಡ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

Bengaluru Rural former MP DK Suresh says am not contest in Channapatna by election sat
Author
First Published Jun 10, 2024, 1:31 PM IST

ರಾಮನಗರ (ಜೂ.10): ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆದ್ದಿರುವುದು ಬಿಜೆಪಿ-ಜೆಡಿಎಸ್‌ನ ಗೆಲುವಲ್ಲ. ಇದು ಜಾತಿ, ಧರ್ಮ ಭಾವನೆ ಹಾಗೂ ಅಸೂಯೆಯ ಗೆಲುವು. ರಾಜಕಾರಣದಲ್ಲಿ ಜಾತಿ ಇಷ್ಟೊಂದು ಪ್ರಮುಖ ಆಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಇನ್ನುಮುಂದೆ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ‌ ಮಾಡ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಕನಕಪುರದಲ್ಲಿ ಸೋಮವಾರ ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು. ಜನ ನನಗೆ ವಿರಾಮ ಕೊಟ್ಟಿದ್ದಾರೆ. ಅದನ್ನ ನಾನು ಒಪ್ಪಿಕೊಳ್ತೇನೆ. ಈ ಚುನಾವಣೆಯ ಸೋಲು ನನ್ನ ವೈಯಕ್ತಿಕ ಸೋಲು, ಇದಕ್ಕೆ ನಾನೇ ಹೊಣೆ. ಇದು ಬಿಜೆಪಿ-ಜೆಡಿಎಸ್ ಗೆಲುವಲ್ಲ. ಇದು ಜಾತಿ ಧರ್ಮ, ಭಾವನೆ, ಅಸೂಯೆಯ ಗೆಲುವು. ಗ್ಯಾರಂಟಿಗಳಿಗಿಂತ ಪ್ರಬಲವಾಗಿರೋದು ಜಾತಿ, ಧರ್ಮ ಭಾವನೆಯಾಗಿದೆ. ರಾಜಕಾರಣದಲ್ಲಿ ಜಾತಿ ಇಷ್ಟೊಂದು ಪ್ರಮುಖ ಆಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.

ನಂಗೆ ರಾಜಕೀಯ ಆಸಕ್ತಿಯಿಲ್ಲ; ಈ ಸೋಲನ್ನು ಸಂತೋಷದಿಂದ ಸ್ವೀಕರಿಸ್ತೇನೆ: ಡಿ.ಕೆ. ಸುರೇಶ್

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆದ್ದು ಕೇಂದ್ರ ಮಂತ್ರಿಯಾದ ಬೆನ್ನಲ್ಲಿಯೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಖಾಲಿಯಾಗಿದೆ. ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಡ ಕೇಳಿಬಂದಿದೆ. ಆದರೆ, ನಾನು ಚನ್ನಪಟ್ಟಣದಲ್ಲಿ ಅಥವ ಬೇರೆಲ್ಲೂ ಸ್ಪರ್ಧೆ ಮಾಡಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ‌ ಮಾಡ್ತೇನೆ. ನನಗೆ ರಾಜಕಾರಣವೇ ಆಸಕ್ತಿ ಇರಲಿಲ್ಲ. ನಾನು ಅಭಿವೃದ್ಧಿ ಮಾಡಲು ರಾಜಕೀಯಕ್ಕೆ ಬಂದೆ. ಆದರೆ ಜನ ಅದನ್ನ ತಿರಸ್ಕಾರ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈ ಜಿಲ್ಲೆಯನ್ನ ಅಭಿವೃದ್ಧಿ ಮಾಡುವಲ್ಲಿ ಈಗಲೂ ನಾನು ಕೆಲಸ ಮಾಡುತ್ತೇನೆ. ರಾಜಕಾರಣದಲ್ಲಿ ಸೋಲು-ಗೆಲುವು ಇದ್ದದ್ದೇ.! ನಾನು ಹೊಸದಾಗಿ ಬಂದಾಗ ಜನ ನನ್ನನ್ನ ಗೆಲ್ಲಿಸಿದ್ದರು. ಆದರೆ, ಬರಬರುತ್ತಾ ವಿಪಕ್ಷಗಳು ನನ್ನನ್ನ ಬೇರೆ ರೀತಿ ಬಿಂಬಿಸಿದ್ದರಿಂದ ನನಗೆ ಸೋಲಾಗಿದೆ. ಹೊಸ ಲೋಕಸಭಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರ ಹಿಂದೆ ನಾನು ಇರ್ತೇನೆ. ಡಿ.ಕೆ.ಸುರೇಶ್ ಸೋತಿದ್ದಾನೆ ಅವನ ಕೈಯಲ್ಲಿ ಏನೂ ಆಗಲ್ಲ ಅಂದುಕೊಳ್ಳೊದು ಬೇಡ. ಎಲ್ಲಾ ಕಾರ್ಯಕರ್ತರ ಜೊತೆ  ನಾನು ಇರ್ತೇನೆ ಎಂದು ಭರವಸೆ ನೀಡಿದರು.

ಈ ಹಿಂದೆ ನಾನು ಸಂಸದನಾಗಿದ್ದಾಗ ಬೆಂಗಳೂರು ಲೋಕಸಭಾ ಕ್ಷೇತ್ರದ ಜನರು, ಅಧಿಕಾರಿಗಳು, ಮುಖಂಡರು ಸಹಕಾರ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನನ್ನಿಂದ ಕಾರ್ಯಕರ್ತರು, ಮುಖಂಡರು, ಅಧಿಕಾರಿಗಳಿಗೆ ನೋವಾಗಿದ್ರೆ ಕ್ಷಮೆ ಕೇಳ್ತೇನೆ. ಇನ್ನು ಲೋಕಸಭಾ ಚುನಾವನೆ ಬಳಿಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಸ್ಥಗಿತವಾಗುತ್ತವೆ ಎಂಬ ಆರೋಪ ಕೇಳಿಬಂದಿವೆ. ಆದರೆ, ಗ್ಯಾರಂಟಿಗಳು ಕಾಂಗ್ರೆಸ್ ಸರ್ಕಾರದಲ್ಲಿ ಮುಂದುವರೆಯುತ್ತವೆ. ಈ ಬಗ್ಗೆ ಚರ್ಚೆ ಮಾಡುವುದು ಅನಗತ್ಯವಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವರಾದ ವಿ.ಸೋಮಣ್ಣ; ನಮ್ಮಪ್ಪಂಗೆ ಇದೇ ಖಾತೆ ಕೊಡಬೇಕೆಂದ ಪುತ್ರ ಅರುಣ್ ಸೋಮಣ್ಣ

ಕೇಂದ್ರದಲ್ಲಿ ಹೆಚ್.ಡಿ. ಕುಮಾರಸ್ವಾಮಿಗೆ ಸಚಿವ ಸ್ಥಾನ ನೀಡಿದ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಈ ಜಿಲ್ಲೆಯನ್ನ ಪ್ರತಿನಿಧಿಸುತ್ತಿದ್ದರು. ಈಗ ಮಂಡ್ಯದಿಂದ ಗೆದ್ದು, ಕೇಂದ್ರದ ಮಂತ್ರಿ ಆಗಿದ್ದಾರೆ. ಇದೇ ಜಿಲ್ಲೆಯ ವಿ.ಸೋಮಣ್ಣ ಸೇರಿ 5 ಮಂದಿ ಸಚಿವರಾಗಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಪರವಾಗಿ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

Latest Videos
Follow Us:
Download App:
  • android
  • ios