ದೊಡ್ಡಬಳ್ಳಾಪುರ [ಮಾ.03]:  ಭವಿಷ್ಯದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಹಾಗೂ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ, ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ನಿರ್ವಹಣೆ ಕುರಿತು ಆಯಾ ತಾಲೂಕಿನ ತಹಸೀಲ್ದಾರ್‌ಗಳು ಖುದ್ದಾಗಿ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಕುರಿತು ಪರಿಶೀಲಿಸಬೇಕೆಂದರಲ್ಲದೆ, 15 ದಿನಗಳಿಗೊಮ್ಮೆ ತಾಲೂಕುವಾರು ಟಾಸ್ಕ್‌ ಫೋರ್ಸ್‌ ಸಭೆಯನ್ನು ಕಡ್ಡಾಯವಾಗಿ ನಡೆಸುವಂತೆ ಸೂಚಿಸಿದರು.

ತಿಳುವಳಿಕೆ ನೀಡಿ:

ಬೇಸಿಗೆಯಲ್ಲಿ ಸಾಕು ಪ್ರಾಣಿಗಳಲ್ಲಿ ರೋಗ ರುಜಿನಗಳು ಹೆಚ್ಚಾಗುವ ಸಂಭವವಿರುವುದರಿಂದ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಆಯಾ ತಾಲ್ಲೂಕು ವ್ಯಾಪ್ತಿಯ ಫೌಲ್ಟಿ್ರಫಾರಂಗಳಿಗೆ, ಚಿಕನ್‌ ಸ್ಟಾಲ್‌ಗಳಿಗೆ ದಿಢೀರ್‌ ಭೇಟಿ ನೀಡಿ, ಸ್ವಚ್ಛತೆ ಕಾಯ್ದುಕೊಳ್ಳುವಂತೆ ತಿಳುವಳಿಕೆ ನೀಡಿ ಎಂದರಲ್ಲದೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ, ನಗರಸಭೆ, ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಘನತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಮನೆ-ಮನೆಯಿಂದ ಒಣಕಸ ಸಂಗ್ರಹಿಸುವ ಕಾರ್ಯ ಮತ್ತ?Üು್ಟಚುರುಕುಗೊಳಿಸಬೇಕು, ರಸ್ತೆ ದುರಸ್ತಿ ಕುರಿತು ಸಾರ್ವಜನಿಕರ ಗಮನಕ್ಕಾಗಿ ಸೂಚನಾ ಫಲಕ ಅಳವಡಿಸಿ ಎಂದರಲ್ಲದೆ, ರಸ್ತೆಯಲ್ಲಿ ಬೆಳೆ ಒಕ್ಕಣೆ ಮಾಡದಂತೆ ರೈತರಿಗೆ ಅರಿವು ಮೂಡಿಸಿ ಎಂದು ಹೇಳಿದರು.

ಬೇಸಿಗೆ ನಿರ್ವಹಣೆಗೆ ಕ್ರಮ:

ಬೇಸಿಗೆಯಲ್ಲಿ ಅಗ್ನಿ ಅವಘಡಗಳ ಸಂಭವ ಹೆಚ್ಚಾಗಿರುವುದರಿಂದ ಅಗ್ನಿ ಶಾಮಕ ದಳದವರು ಶೀಘ್ರ ಕ್ರಮ ಕೈಗೊಳ್ಳಲು ತಿಳಿಸಿದರು ಹಾಗೂ ಜಿಲ್ಲೆಯಲ್ಲಿನ ಶಾಲಾ ಕೊಠಡಿಗಳ ದುರಸ್ತಿ ಕಾರ್ಯವು ಗುಣಮಟ್ಟದಾಗಿರಲಿ ಎಂದರಲ್ಲದೆ ಕೊಳವೆಬಾವಿ ಪೈಪ್‌ಲೈನ್‌ ವಿಸ್ತರಣೆ ಸಂದರ್ಭದಲ್ಲಿ ನಿರುಪಯುಕ್ತ, ಅನುಪಯೋಗಿತ ಪೈಪ್‌ಗಳನ್ನು ಮರುಬಳಕೆಗೆ ಬಳಸಿಕೊಳ್ಳುವಂತೆ ನಿರ್ದೇಶಿಸಿದರು.

ಮಂತ್ರಿ ಡೆವಲಪರ್ಸ್ & 215 ಕುಟುಂಬಗಳಿಗೆ ಬಿಗ್ ಶಾಕ್!

ಜಿಲ್ಲೆಯಲ್ಲಿ ಯಾವುದೇ ವಿಪತ್ತು ಸಂಭವಿಸಿದಾಗ ಸಂತ್ರಸ್ತರ ನೆರವಿಗೆ ಬೇಕಾದ ತುರ್ತು ಸೇವೆಗಳಾದ ಆಸ್ಪತ್ರೆ, ಅಗ್ನಿ ಶಾಮಕ, ವೈದ್ಯರ ಮಾಹಿತಿ ಇನ್ನಿತರೆ ಮಾಹಿತಿಗಳನ್ನು ವೆಬ್‌ ಪೋರ್ಟಲ್‌ನಲ್ಲಿ ದಾಖಲಿಸಲು ವಿವಿಧ ಇಲಾಖೆ ಒದಗಿಸುವ ಸೇವೆಗಳ ಕುರಿತು ಒಂದು ವಾರದೊಳಗೆ ಮಾಹಿತಿ ಒದಗಿಸುವಂತೆ ಎಲ್ಲ ಇಲಾಖೆಯರಿಗೆ ಸೂಚಿಸಿದರಲ್ಲದೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನಾ ವರದಿಯನ್ನು ಸಲ್ಲಿಸಿದ್ದಕ್ಕಾಗಿ ಮಾರ್ಗಸೂಚಿಗಳ ಅನ್ವಯ ಉತ್ತಮ ವರದಿಯಾದ ಹಿನ್ನಲೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಪ್ರಶಂಸನೀಯ ಎಂದು ತಿಳಿಸುವ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಡಾ.ವಿನುತಾ ಅವರನ್ನು ಅಭಿನಂದಿಸಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ನ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ರವಿಸೂರನ್‌ ಸೇರಿದಂತೆ ನಾಲ್ಕು ತಾಲೂಕುಗಳ ತಹಸೀಲ್ದಾರ್‌ಗಳು, ನಗರಸಭೆ-ಪುರಸಭೆ ಮುಖ್ಯಾಧಿಕಾರಿಗಳು, ಪೌರಾಯುಕ್ತರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.