ಎನ್‌.ಲಕ್ಷ್ಮಣ್‌

ಬೆಂಗಳೂರು (ಜೂ.22) : ರಾಜ್ಯದ ಏಕೈಕ ಪೊಲೀಸ್‌ ಮಕ್ಕಳ ವಸತಿ ಶಾಲೆ ಬೀಗ ಹಾಕುವ ಸ್ಥಿತಿ ತಲುಪಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದೆ...!

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಬಂದಿಲ್ಲ ಎಂಬ ಕಾರಣಕ್ಕೆ ಶಾಲಾ ಆಡಳಿತ ಮಂಡಳಿ 9 ಶಿಕ್ಷಕರನ್ನು ಶಾಲೆಯಿಂದ ಹೊರ ಹಾಕಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ 50ಕ್ಕೆ ಕುಸಿದಿದೆ. ಪರಿಣಾಮ ಧಾರವಾಡದ ನವನಗರದಲ್ಲಿರುವ ಎನ್‌.ಎ.ಮುತ್ತಣ್ಣ ಸ್ಮಾರಕ ಪೊಲೀಸ್‌ ಮಕ್ಕಳ ವಸತಿ ಶಾಲೆ ಸ್ಥಿತಿ ಡೋಲಾಯವಾಗಿದೆ.

ವಿದ್ಯಾರ್ಥಿಗಳ ಪೋಷಕರಿಗೆ ಧಾರವಾಡ ‘ನಿಯಂತ್ರಣ ಕೊಠಡಿ’ಯಿಂದ ಕರೆ ಮಾಡಿ, ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣಪತ್ರವನ್ನು ಕೊಂಡೊಯ್ಯುವಂತೆ ಹೇಳುತ್ತಿದ್ದಾರೆ. ಮಕ್ಕಳನ್ನು ಕರೆದೊಯ್ಯದಿದ್ದರೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ನೀವೇ ಜಾವಾಬ್ದಾರರು ಎನ್ನುತ್ತಿದ್ದಾರೆ ಎಂದು ಆಡಳಿತ ಮಂಡಳಿ ವಿರುದ್ಧ ಪೊಲೀಸರೊಬ್ಬರು ಆರೋಪಿಸಿದ್ದಾರೆ. 

1997ರಲ್ಲಿ ಅಂದಿನ ಎಸ್ಪಿ, ಅಮರ್‌ಕುಮಾರ್‌ ಪಾಂಡೆ ಪೊಲೀಸರ ಮಕ್ಕಳಿಗಾಗಿ ಧಾರವಾಡದಲ್ಲಿ ವಸತಿ ಶಾಲೆ ಆರಂಭಿಸಿದ್ದರು. ಆರನೇ ತರತಿಯಿಂದ 10ನೇ ತರಗತಿ ವರೆಗೆ ಇದ್ದು, ಪ್ರವೇಶಾ ಪರೀಕ್ಷೆ ನಡೆಸಿ ಮೆರಿಟ್‌ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಕನ್ನಡ ಮತ್ತು ಇಂಗ್ಲೀಷ್‌ ಮಾಧ್ಯಮ ಇರುವ ಶಾಲೆ ಸರ್ಕಾರದ ಅನುದಾನದಲ್ಲಿ ನಡೆಯುತ್ತಿದ್ದು, ಪ್ರತಿ ತರಗತಿಗೆ ತಲಾ 25 ಸೀಟಿಗೆ ಸೀಮಿತಗೊಳಿಸಲಾಗಿದೆ. ಉತ್ತರ ವಲಯದ ಐಜಿಪಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರೆ, ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನೊಳಗೊಂಡ ಸಮಿತಿ ಶಾಲೆಯ ಜವಾಬ್ದಾರಿ ಹೊತ್ತಿದೆ.

10 ಮಂದಿ ಫೇಲ್‌ ಆಗಿದ್ದೆ ಕಾರಣ?

ಮೊದಲಿಗೆ 250ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ 2018-19ರ ಸಾಲಿನಲ್ಲಿ 124ಕ್ಕೆ ಕುಸಿದಿದೆ. 6ನೇ ತರಗತಿಯಲ್ಲಿ 21, 7ನೇ ತರಗತಿಯಲ್ಲಿ 14, 8ನೇ ತರಗತಿ- 23, 9ನೇ ತರಗತಿ- 19 ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ 39 ವಿದ್ಯಾರ್ಥಿಗಳಿದ್ದರು. ಇದರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 10 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದರು.

ಇದರಿಂದ ಆಡಳಿತ ಮಂಡಳಿ ಶಿಕ್ಷಕರ ಬಗ್ಗೆ ಅಸಮಾಧಾನಗೊಂಡಿತ್ತು. ಇನ್ನು ಪ್ರತಿ ವರ್ಷದಂತೆ ಕಳೆದ ಎರಡು ತಿಂಗಳ ಹಿಂದೆ ಶಾಲೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಪರೀಕ್ಷೆ ನಡೆದು ವಿದ್ಯಾರ್ಥಿಗಳ ನೋಂದಣಿ ಕೂಡ ಆಗಿತ್ತು.

ಶಾಲೆಯಿಂದ ಹೊರ ಹಾಕಿದ್ರು!

ಎಂದಿನಂತೆ ಕಳೆದ ಮೇ 29ರಂದು ಶಾಲೆ ಆರಂಭಗೊಂಡಿದೆ. ಜೂ.11 ರಂದು ಶಿಕ್ಷಕರು ತರಗತಿಯಲ್ಲಿ ಬೋಧನಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಸ್ಥಳೀಯ ಇನ್ಸ್‌ಪೆಕ್ಟರ್‌ ತಮ್ಮ ಸಿಬ್ಬಂದಿ ಜತೆ ಬಂದು ಶಿಕ್ಷಕರನ್ನು ಹೊರ ಹೋಗುವಂತೆ ಹೇಳಿದ್ದಾರೆ. ಈ ಬಗ್ಗೆ ಶಿಕ್ಷಕರು ಪ್ರಶ್ನಿಸಿದಾಗ ಎಸ್ಪಿ ಅವರು ನಿಮ್ಮ ಸೇವೆ ಬೇಡವೆಂದು ಹೇಳಿದ್ದಾರೆ ಎಂದು ಹೇಳಿ ಕ್ಯಾಂಪಸ್‌ನಿಂದ ಹೊರ ಹಾಕಿದರು ಎಂದು ಶಿಕ್ಷಕರೊಬ್ಬರು ಪತ್ರಿಕೆಗೆ ತಿಳಿಸಿದರು.

ಹೊಸ ಶಿಕ್ಷಕರ ನೇಮಕ ಮಾಡಿ ಹಳೇ ಶಿಕ್ಷಕರನ್ನು ತೆಗೆದು ಹಾಕಬೇಕಿತ್ತು. ಅದು ಕೂಡ ಆಗಿಲ್ಲ. ಬದಲಿಗೆ ನಮಗೆ (ಪೋಷಕರಿಗೆ) ನಿಯಂತ್ರಣ ಕೊಠಡಿಯಿಂದ ಕರೆ ಬರುತ್ತಿದ್ದು, ಎಸ್ಪಿ ಅವರು ತುರ್ತು ಪೋಷಕರ ಸಭೆ ಕರೆದಿದ್ದಾರೆ ಎಂದಿದ್ದರು. ನಾವು ಹೊರಗಡೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದೇವೆ. ಸ್ವಲ್ಪ ಬರಲು ತಡವಾಗುತ್ತದೆ ಎಂದು ಹೇಳಿದ್ದೆವು. ಮತ್ತೆ ಕರೆ ಮಾಡಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ ಎನ್ನುತ್ತಾರೆ ಪೋಷಕರೊಬ್ಬರು.

ವಿದ್ಯಾರ್ಥಿಗಳಿಗೆ ಖಾಕಿ ಪಾಠ!

ಶಿಕ್ಷಕರಿಲ್ಲದ ಕಾರಣಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ಸ್ಥಳೀಯ ಪ್ರೊಬೆಷನರಿ ಪೊಲೀಸರಿಂದ ಮಕ್ಕಳಿಗೆ ಬೋಧನೆ ಮಾಡಿಸುತ್ತಿದ್ದಾರೆ. ಇನ್ನು ಅತಂತ್ರ ಸ್ಥಿತಿಯಿಂದಾಗಿ ಕಳೆದ ವರ್ಷ 124 ಸಂಖ್ಯೆಯಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸ್ತುತ 50ಕ್ಕೆ ಇಳಿದಿದೆ. ಮಕ್ಕಳ ಭವಿಷ್ಯಕ್ಕೆ ಹೆದರಿದ ಪೋಷಕರು ಮಕ್ಕಳ ವರ್ಗಾವಣೆ ಪತ್ರದೊಂದಿಗೆ ಬೇರೆ ಕಡೆ ಕರೆದೊಯ್ಯುತ್ತಿದ್ದಾರೆ ಎಂದು ಶಾಲೆಯ ಸಿಬ್ಬಂದಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ನಾಟ್‌ ರೀಚಬಲ್‌ ಡಿಜಿಪಿ

ಈ ವಿಷಯದ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌.ರಾಜು ಅವರನ್ನು ಪತ್ರಿಕೆ ದಿನವಿಡೀ ಸಂಪರ್ಕಿಸಿದಾಗಲೂ ನಿರಂತರವಾಗಿ ‘ಬ್ಯುಸಿ’ ಎಂದು ಬರುತ್ತಿತ್ತು. ಕಚೇರಿಯ ದೂರವಾಣಿ ಹಾಗೂ ವರದಿಗಾರನ ಮೊಬೈಲ್‌ನಿಂದಲೂ ಸಂಪರ್ಕ ಮಾಡಿದಾಗಲೂ ಸಹ ಸಂಪರ್ಕಕ್ಕೆ ಸಿಗಲಿಲ್ಲ.

ಶಾಲೆ ಬಳಿ ಹೋದರೆ ವೈಯಕ್ತಿಕ ಕಾರಣಕ್ಕೆ ಮಗನನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಬರೆದುಕೊಡಿ ಎಂದು ಕೇಳಿದರು. ಜೋರಾಗಿ ಪ್ರಶ್ನೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಐಜಿಪಿ ಅವರನ್ನು ಸಂಪರ್ಕ ಮಾಡಿದೆವು. ತಕ್ಷಕ್ಕೆ ಕರೆದುಕೊಂಡು ಹೋಗಿ, ಆರು ತಿಂಗಳ ಬಳಿಕ ಎಲ್ಲವೂ ಸರಿ ಹೋಗಲಿದೆ ಎನ್ನುತ್ತಾರೆ. ಫಲಿತಾಂಶವನ್ನು ಮುಂದಿಟ್ಟುಕೊಂಡು ಶಾಲೆ ಮುಚ್ಚಲು ಹುನ್ನಾರ ನಡೆಸಿದ್ದಾರೆ. ಶಾಲೆ ಉಳಿಸಿಕೊಳ್ಳುವ ಉದ್ದೇಶ ಇದ್ದರೆ, ಹೊಸ ಶಿಕ್ಷಕರನ್ನು ಮೊದಲೇ ನೇಮಿಸಿಕೊಳ್ಳಬೇಕಿತ್ತು.

-ವಿದ್ಯಾರ್ಥಿ ಪೋಷಕರು

 

ಶಾಲೆಯನ್ನು ಮುಚ್ಚಲಾಗುತ್ತದೆ ಎಂಬುದು ಊಹಾಪೋಹ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಾರದ ಕಾರಣ ಹಳೇ ಶಿಕ್ಷಕರನ್ನು ಕೈ ಬಿಡಲಾಗಿದೆ. ಒಂದು ವಾರದಲ್ಲಿ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಪ್ರಸ್ತುತ 89 ಮಕ್ಕಳಿದ್ದು, ಕೆಲವರು ವೈಯಕ್ತಿಕವಾಗಿ ವರ್ಗಾವಣೆ ಪತ್ರ ಕೊಂಡೊಯ್ದಿದ್ದಾರೆ. ನೂತನ ಪ್ರಾಂಶುಪಾಲರನ್ನು ನೇಮಕ ಮಾಡಲಾಗಿದೆ.

- ರಾಘವೇಂದ್ರ ಸುಹಾಸ್‌, ಉತ್ತರ ವಲಯ ಐಜಿಪಿ