Asianet Suvarna News Asianet Suvarna News

ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ಗೆ ಇತಿಶ್ರೀ ಹಾಡಿ : ಭಾಸ್ಕರ್‌ರಾವ್‌

ಆರೋಪಿಗಳಿಗೆ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಡುವ ತನಿಖಾ ಕ್ರಮ ನಿಲ್ಲುವಂತಾಗಲಿ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸಲಹೆ ನೀಡಿದರು.

Bengaluru Police Commissioner Bhaskar Rao Oppose Third Degree Treatment
Author
Bengaluru, First Published Sep 22, 2019, 9:07 AM IST

ಬೆಂಗಳೂರು [ಸೆ.22]:  ಅಪರಾಧ ಪ್ರಕರಣಗಳ ಪತ್ತೆಗೆ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕಡೆಗೆ ಪೊಲೀಸರು ಲಕ್ಷ್ಯ ತೋರಿಸಬೇಕು. ಇನ್ನಾದರೂ ಆರೋಪಿಗಳಿಗೆ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಡುವ ತನಿಖಾ ಕ್ರಮ ನಿಲ್ಲುವಂತಾಗಲಿ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸಲಹೆ ನೀಡಿದರು.

ಆರ್‌.ಟಿ.ನಗರದ ಎಚ್‌ಎಂಟಿ ಮೈದಾನದಲ್ಲಿ ಶನಿವಾರ ಉತ್ತರ ವಿಭಾಗದ ಪೊಲೀಸರು ಆಯೋಜಿಸಿದ್ದ ‘ಅಪರಾಧ ಪ್ರಕರಣಗಳ ಪತ್ತೆ ಮತ್ತು ಮಾಲಿಕರಿಗೆ ವಸ್ತುಗಳನ್ನು ಮರಳಿಸುವ’ ಕಾರ್ಯಕ್ರಮದಲ್ಲಿ ಆಯುಕ್ತರು, ತಂತ್ರಜ್ಞಾನದಲ್ಲಿ ಹೊಸ ಅವಿಷ್ಕಾರಗಳ ಬಳಕೆಯೂ ತನಿಖೆಗೆ ನೆರವಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸವಾಲಿನ ಪ್ರಕರಣಗಳನ್ನು ಕೂಡ ತಂತ್ರಜ್ಞಾನ ಆಧಾರದ ಮೇಲೆ ಪತ್ತೆ ಮಾಡಬಹುದು. ಅಪರಾಧ ನಡೆದ ಬಳಿಕ ಕ್ಯಾಮೆರಾಗಳು, ಸಾಂದರ್ಭಿಕ ಸಾಕ್ಷ್ಯಗಳು, ಶಂಕಿತರ ಚಹರೆಗಳನ್ನಾಧರಿಸಿ ಪ್ರಕರಣವನ್ನು ಬೇಧಿಸಬಹುದಾಗಿದೆ. ಹೀಗಿರುವಾಗ ಇನ್ನೂ ಥರ್ಡ್‌ ಡಿಗ್ರಿ ಟ್ರಿಟ್‌ಮೆಂಟ್‌ ಯುಗವೇ ಮುಂದುವರೆಸುವುದು ಸರಿಯೇ ಎಂದರು.

‘ಸರ್ಕಾರದ ಇತರೆ ಇಲಾಖೆಗಳಂತೆ ಪೊಲೀಸರಿಂದಲೂ ಸಹ ನ್ಯೂನತೆಗಳಾಗುತ್ತವೆ. ಈ ತಪ್ಪುಗಳೇ ಇಲಾಖೆಗೆ ಕೆಟ್ಟಹೆಸರು ತರುತ್ತವೆ. ಖಾಕಿ ಧರಿಸಿರುವ ಕಾರಣ ಪೊಲೀಸರು ಹೆಚ್ಚು ಚರ್ಚೆಗೆ ತುತ್ತಾಗುತ್ತಾರೆ. ಹೀಗಾಗಿ ನಮ್ಮ (ಪೊಲೀಸರು) ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು’ ಎಂದು ನುಡಿದರು.

1.5 ಕೋಟಿ ಜನರಿಗೆ 19 ಸಾವಿರ ಪೊಲೀಸರ ಕಾವಲು:

ನಗರದಲ್ಲಿ ಜನಸಂಖ್ಯೆ ಅನುಪಾತಕ್ಕೆ ಅನುಗುಣವಾಗಿ ಪೊಲೀಸ್‌ ಬಲವಿಲ್ಲ. ನಗರದ ಜನಸಂಖ್ಯೆ 1.47 ಕೋಟಿ ಇದ್ದು, ಅವರ ರಕ್ಷಣೆಗೆ 19 ಸಾವಿರ ಪೊಲೀಸರಿದ್ದಾರೆ. ಇದರಲ್ಲಿ ರಜೆ, ತರಬೇತಿ, ಅನಾರೋಗ್ಯದ ರಜೆ ಹೀಗೆ ಇತರೆ ಕಾರಣಗಳಿಂದ ನಾಲ್ಕು ಸಾವಿರ ಸಿಬ್ಬಂದಿ ಸೇವೆಗೆ ಅಲಭ್ಯರಾಗುತ್ತಾರೆ. ಪ್ರತಿ ದಿನ ಕರ್ತವ್ಯಕ್ಕೆ 15 ಸಾವಿರ ಪೊಲೀಸರು ಮಾತ್ರ ಹಾಜರಿರುತ್ತಾರೆ ಎಂದು ವಿವರಿಸಿದರು.

ಅಪರಾಧ ಪ್ರಕರಣಗಳಲ್ಲಿ ವಸ್ತುಗಳನ್ನು ಜಪ್ತಿ ಸುಲಭವಾದ ಕೆಲಸವಲ್ಲ. ಆರೋಪಿಗಳು ಅಮಲಿನಲ್ಲಿರುತ್ತಾರೆ. ಅವರ ವರ್ತನೆಗಳು ಭಿನ್ನ ವಾಗಿರುತ್ತವೆ. ಬಹಳ ಎಚ್ಚರಿಕೆಯಿಂದ ಸಾಕ್ಷ್ಯಾಧಾರ ಆಧಾರಿತ ತನಿಖೆ ನಡೆಸಬೇಕು. ತನಿಖೆ ಮುಗಿದ ನಂತರ ಸೂಕ್ತ ರೀತಿಯಲ್ಲಿ ನ್ಯಾಯಾ ಲಯಕ್ಕೆ ಆರೋಪಪಟ್ಟಿಸಲ್ಲಿಸಬೇಕು. ತಪ್ಪಿತಸ್ಥರು ಶಿಕ್ಷೆ ಗುರಿಪಡಿಸುವುದರ ಜೊತೆಗೆ ಅವರ ಮನಃಪರಿವರ್ತನೆಗೆ ಸಹ ಪೊಲೀಸರು ಯತ್ನಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ವಾರಸುದಾರರಿಗೆ ಆಯುಕ್ತರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಉಮೇಶ್‌ ಕುಮಾರ್‌ ಹಾಗೂ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

5 ಕೋಟಿ ಮೌಲ್ಯದ ವಸ್ತು ಜಪ್ತಿ

ಆರು ತಿಂಗಳ ಅವಧಿಯಲ್ಲಿ ಉತ್ತರ ವಿಭಾಗದ ಪೊಲೀಸರು, 425 ಪ್ರಕರಣಗಳನ್ನು ಪತ್ತೆ ಹಚ್ಚಿ 5.28 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ ದರೋಡೆ, ಸುಲಿಗೆ, ಸರಗಳ್ಳತನ, ಮನೆಗಳ್ಳತನ ಹಾಗೂ ವಾಹನ ಕಳ್ಳತನ ಸೇರಿದಂತೆ ಇತರೆ ಪ್ರಕರಣಗಳು ಸೇರಿದ್ದು, 334 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಆಯುಕ್ತರು ವಿವರಿಸಿದರು.

Follow Us:
Download App:
  • android
  • ios