Asianet Suvarna News Asianet Suvarna News

ಬೆಂಗಳೂರು ನೂತನ ಪೊಲೀಸ್ ಆಯುಕ್ತರ ಮೊದಲ ಆದ್ಯತೆಯೇ ಇದು

ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ನಗರದ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ. 

Bengaluru New Police Commissioner Bhaskar Rao interview
Author
Bengaluru, First Published Aug 3, 2019, 9:23 AM IST

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಆ.03]:  ರಾಜಧಾನಿ ನಾಗರಿಕರಿಗೆ ‘ಎಂದೆಂದಿಗೂ ನಾವು ನಿಮ್ಮೊಂದಿಗೆ’ ಅಭಯ ನೀಡಿರುವ ನೂತನ ಆಯುಕ್ತ ಭಾಸ್ಕರ್‌ ರಾವ್‌, ಮಾದಕ ವಸ್ತು ಮುಕ್ತ ಬೆಂಗಳೂರು, ಜನ ಸ್ನೇಹಿ ಆಡಳಿತ ಹಾಗೂ ಜನರಿಗೆ ಸುರಕ್ಷತೆಯೇ ನಮ್ಮ ಆದ್ಯತೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಶುಕ್ರವಾರ ಇಳಿ ಸಂಜೆ ಹೊತ್ತಿನಲ್ಲಿ ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂದರ್ಶನದಲ್ಲಿ ಅವರು, ತಮ್ಮ ಆಡಳಿತಕ್ಕಾಗಿ ಹಾಕಿಕೊಂಡಿರುವ ಯೋಜನೆಗಳು ಮತ್ತು ಚಿಂತನೆಗಳನ್ನು ವ್ಯಕ್ತಪಡಿಸಿದರು.

ನಾನು ಬೆಂಗಳೂರಿನ ಮಣ್ಣಿನಲ್ಲೇ ಹುಟ್ಟಿಬೆಳೆದವನು. ಇಲ್ಲಿನ ಗಲ್ಲಿಗಳಲ್ಲಿ ಸೈಕಲ್‌ನಲ್ಲಿ ಅಡ್ಡಾಡಿದ್ದೇನೆ. ಬೈಕ್‌ನಲ್ಲಿ ಸುತ್ತಾಡಿದ್ದೇನೆ. ಅಧಿಕಾರಿಯಾಗಿ ಸರ್ಕಾರಿ ವಾಹನದಲ್ಲಿ ಸಂಚರಿಸಿದ್ದೇನೆ. ಕಾಲಾನುಕಾಲಕ್ಕೆ ನಗರದ ಬೆಳವಣಿಗೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ನಾನು ಆಯುಕ್ತನಲ್ಲ. ಜನ ಸೇವಕ ಎಂಬ ಭಾವನೆಯಿಂದ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಜನಸ್ನೇಹಿ ಆಡಳಿತ ಎಂಬುದು ಕೇವಲ ಘೋಷಣೆಗೆ ಸಿಮೀತವಾಗಬಾರದು. ಅದೂ ಜನರ ಭಾವನೆಯಲ್ಲಿ ವ್ಯಕ್ತವಾಗಬೇಕು. ಅಂತಹ ವಾತಾವರಣವನ್ನು ಪೊಲೀಸ್‌ ವ್ಯವಸ್ಥೆಯಲ್ಲಿ ಕಟ್ಟಿಕೊಡುವ ಗುರಿ ಹೊಂದಿದ್ದೇನೆ. ಮಾದಕ ವಸ್ತು ಮುಕ್ತ ಬೆಂಗಳೂರು, ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ಕಾಣಬಹುದು ಎಂದು ಭಾಸ್ಕರ್‌ ರಾವ್‌ ನುಡಿದರು.

ನಿಮ್ಮ ಅಧಿಕಾರ ಸ್ವೀಕಾರಕ್ಕೆ ನಿಗರ್ಮಿತ ಆಯುಕ್ತ ಅಲೋಕ್‌ ಕುಮಾರ್‌ ಗೈರಿಗೆ ಕಾರಣವೇನು?

-ಅವರು (ಅಲೋಕ್‌ ಕುಮಾರ್‌) ಯಾಕೆ ಬಂದಿಲ್ಲ ಎಂಬುದು ನನಗೆ ಗೊತ್ತಿಲ್ಲ. ಆ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ನಾನು ಸರ್ಕಾರದ ಆದೇಶ ಪಾಲನೆ ಮಾಡಿದ್ದೇನೆ.

ನಗರದ ಜನರಿಗೆ ಮೊದಲ ಸಂದೇಶವೇನು?

-ನನಗೆ ಬೆಂಗಳೂರು ಹೊಸದಲ್ಲ. ಇಲ್ಲೇ ಆಡಿ ಬೆಳೆದವನು. ಇದೇ ಮಣ್ಣಿನಲ್ಲಿ ಮಡಿಯುವವನು. ನಗರದಲ್ಲಿ ಸೇವೆ ಸಲ್ಲಿಸಲು ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಡಿಜಿ-ಐಜಿಪಿ ಅವರು ಅವಕಾಶ ನೀಡಿದ್ದಾರೆ. ಅವರ ನಂಬಿಕೆ ಹುಸಿಯಾಗದಂತೆ ನಗರಕ್ಕೆ ಸ್ವಚ್ಛ ಮತ್ತು ಪಾರದರ್ಶಕ ಆಡಳಿತವನ್ನು ನೀಡುತ್ತೇನೆ. ನನ್ನದು ನಾಗರಿಕರಿಗೆ ‘ಎಂದೆಂದಿಗೂ ನಾವು ನಿಮ್ಮೊಂದಿಗೆ’ ಎಂಬುದು ಧ್ಯೇಯ ಘೋಷಣೆಯಾಗಿದೆ. 1977ರಲ್ಲಿ ಗರುಡಾಚಾರ್‌ ಅವರು ಆಯುಕ್ತರಾಗಿದ್ದಾಗ ಮೊದಲ ಬಾರಿಗೆ ಆಯುಕ್ತರ ಕಚೇರಿಗೆ ಬಂದಿದ್ದೆ. ಅನಂತರ ಡಿ.ಜಿ.ಹರ್ಲಕರ್‌ ಅವರನ್ನು ಕಾಲೇಜಿನ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದೆ. ಅಂದು ಪೊಲೀಸರ ಬಗ್ಗೆ ನನಗೆ ಭಯವಿತ್ತು. ಇಂದೇ ನಾನು ಆಯುಕ್ತನಾಗಿದ್ದೇನೆ. ನನಗೆ ಹೆಮ್ಮೆ ಎನಿಸುತ್ತದೆ.

ನಗರದ ರಕ್ಷಣೆಗೆ ನಿಮ್ಮ ಯೋಜನೆಗಳೇನು?

-ಎರಡೂವರೆ ವರ್ಷಗಳ ಕಾಲ ಅಪರಾಧ ವಿಭಾಗದ ಎಡಿಜಿಪಿ ಆಗಿ ಕೆಲಸ ಮಾಡಿದ್ದೇನೆ. ಶಾಲಾ-ಕಾಲೇಜು ಆವರಣದಲ್ಲಿ ಮಾದಕ ವಸ್ತು ಪರಿಣಾಮದ ಬಗ್ಗೆ ಅರಿವಿದೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ನಾಗರಿಕರ ಸಹಕಾರದಲ್ಲಿ ‘ಮಾದಕ ವಸ್ತು ಮುಕ್ತ ಬೆಂಗಳೂರು’ ಮಾಡುತ್ತೇನೆ. ಪೊಲೀಸರಿಂದ ಮಾತ್ರ ಸುಧಾರಣೆ ಸಾಧ್ಯವಿಲ್ಲ. ಸಮಾಜವು ನಮ್ಮೊಂದಿಗೆ ಕೈ ಸೇರಿಸಬೇಕು. ಇಂದು ಮಾರಕವಾಗಿರುವ ಡ್ರಗ್ಸ್‌ ಜಾಲವನ್ನು ಮಟ್ಟಹಾಕುವ ತುರ್ತು ಅಗತ್ಯವಿದೆ. ಈ ಸಂಬಂಧ ಶಾಲಾ- ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜನ ಸ್ನೇಹಿ ಆಡಳಿತ ಘೋಷಣೆಯಲ್ಲೇ ಉಳಿದಿದೆಯಲ್ಲ?

-ಪೊಲೀಸರು ಜನರ ವಿಶ್ವಾಸ ಗಳಿಸುವುದು ಮುಖ್ಯವಾಗುತ್ತದೆ. ‘ಜನ ಸ್ನೇಹಿ’ ಆಡಳಿತ ಎಂಬುದು ಘೋಷಣೆಗೆ ಮಾತ್ರ ಸಿಮೀತವಾಗಬಾರದು. ಅದು ಜನರ ಭಾವನೆಗಳಲ್ಲಿ ವ್ಯಕ್ತವಾಗಬೇಕು. ಅಂತಹ ವಾತಾವರಣವನ್ನು ಪೊಲೀಸ್‌ ವ್ಯವಸ್ಥೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಮೊದಲು ನನ್ನ ಮನೆಯನ್ನು (ಇಲಾಖೆ) ಸರಿಪಡಿಸುತ್ತೇನೆ. ಅಪರಾಧ ಪ್ರಕರಣ ದಾಖಲಾತಿ ಪ್ರಮಾಣವು ಹೆಚ್ಚಾದರೂ ಪರವಾಗಿಲ್ಲ. ನಾಗರಿಕರ ಪ್ರತಿಯೊಂದು ದೂರನ್ನು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸುತ್ತೇನೆ. ಟ್ವಿಟರ್‌, ಫೇಸ್‌ಬುಕ್‌ ಹಾಗೂ ವಾಟ್ಸಪ್‌ ಮೂಲಕ ಜನರು ನೇರವಾಗಿ ನನ್ನೊಂದಿಗೆ ಸಮಸ್ಯೆ ಹೇಳಬಹುದು. ನಾನು ಆಯುಕ್ತನಲ್ಲ ಜನ ಸೇವಕ ಎಂಬ ಭಾವನೆಯಿಂದ ಕೆಲಸ ಮಾಡುತ್ತೇನೆ.

ಇತ್ತೀಚಿಗೆ ಪೊಲೀಸರ ದಿಢೀರ್‌ ದಾಳಿಗಳು ಜನರಿಗೆ ತೊಂದರೆ ಮಾಡುವೆಯಲ್ಲ?

-ಬೆಂಗಳೂರಿಗೆ ಹೊರ ಜಿಲ್ಲೆ, ರಾಜ್ಯ ಹಾಗೂ ದೇಶಗಳಿಂದ ಜನರು ಬಂದು ನೆಲೆಸಿದ್ದಾರೆ. ನಗರದ ಸಾಂಸ್ಕೃತಿಕ ವೈವಿಧ್ಯತೆ ಅರ್ಥ ಮಾಡಿಕೊಳ್ಳಬೇಕಿದೆ. ರಾತ್ರೋರಾತ್ರಿ ಜನ ಗುಂಪುಗೂಡಿರುವೆಡೆ ದಾಳಿ ನಡೆಸುವುದು, ಭಯಗೊಂಡು ಕಿಟಕಿ, ಬಾಗಿಲುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜನ ಅಪಾಯಕ್ಕೆ ಸಿಲುಕುವುದು ಈ ರೀತಿ ಸಮಸ್ಯೆ ಉಂಟು ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ತಪ್ಪು ನಡೆದರೆ ಕ್ರಮ ಜರುಗಿಸುತ್ತೇವೆ. ಆದರೆ ಕಾರ್ಯಾಚರಣೆ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುವುದಿಲ್ಲ. ಜನರಿಗೆ ಅಸುರಕ್ಷತೆ ಕಾಡಬಾರದು.

ವೈಟ್‌ ಕಾಲರ್‌ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಕ್ರಮವೇನು?

-ಇತ್ತೀಚೆಗೆ ಆರ್ಥಿಕ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಈ ವೈಟ್‌ ಕಾಲರ್‌ ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಮೋಸದ ಜಾಲದ ಆಮಿಷಗಳಿಗೆ ಜನರು ಮರುಳಾಗಬಾರದು. ವಂಚಕ ಕಂಪನಿಗಳ ಕುರಿತು ಮಾಹಿತಿ ಕಲೆ ಹಾಕಿ ಬಳಿಕ ಅವುಗಳ ಕಡಿವಾಣಕ್ಕೆ ಯೋಜನೆ ರೂಪಿಸಲಾಗುತ್ತದೆ.

ಪೊಲೀಸ್‌ ಠಾಣೆಗಳು ರಿಯಲ್‌ ಎಸ್ಟೇಟ್‌ ಅಡ್ಡೆಗಳಾಗಿವೆ ಎಂಬ ಅಪವಾದವಿದೆ?

-ಭೂ ಮಾಫಿಯಾದ ವಿರುದ್ಧ ನಾನು ಕಠಿಣ ನಿಲುವು ಹೊಂದಿದ್ದೇವೆ. ಯಾವುದೇ ಕಾರಣಕ್ಕೂ ಜನರ ಶೋಷಣೆಗೆ ಅಸ್ಪದವಿರುವುದಿಲ್ಲ. ಪೊಲೀಸರು ಅಕ್ರಮ ಭೂ ವ್ಯವಹಾರದಲ್ಲಿ ತೊಡಗಿದ್ದರೆ ಅಂತಹವರು ಮುಲಾಜಿಲ್ಲದೆ ಕಾನೂನು ಕ್ರಮಕ್ಕೆ ತುತ್ತಾಗುತ್ತಾರೆ. ಹಾಗೆಯೇ ಸುಲಿಗೆ ಹಾಗೂ ಹಫ್ತಾ ವಸೂಲಿಯನ್ನು ನಾನು ಸಹಿಸುವುದಿಲ್ಲ.

ವಿದೇಶಿಯರ ಹಾವಳಿ, ಶಂಕಿತರ ಅಶ್ರಯ ತಾಣವಾಗಿದೆ ಆತಂಕ ಎದುರಾಗಿದೆ?

-ಡ್ರಗ್ಸ್‌ ಮಾರಾಟ ಸೇರಿದಂತೆ ಕಾನೂನು ಬಾಹಿರ ಕೃತ್ಯಗಳಲ್ಲಿ ಆಫ್ರಿಕಾ ಪ್ರಜೆಗಳಾದಿಯಾಗಿ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಮಾಹಿತಿ ಇದೆ. ವಿದೇಶಿ ಪ್ರಜೆಗಳ ಸಂಘ- ಸಂಸ್ಥೆಗಳ ಸಭೆ ಕರೆದು ಸಮಾಲೋಚಿಸಲಾಗುತ್ತದೆ. ಅದೇ ರೀತಿ ಭಯೋತ್ಪಾದಕ ಸಂಘಟನೆಗಳ ಮೇಲೂ ಕಣ್ಣಿಡಲಾಗುತ್ತದೆ.

Follow Us:
Download App:
  • android
  • ios