ಬೆಂಗಳೂರು [ಜು.25] :  ನಮ್ಮ ಮೆಟ್ರೋ ಏರ್‌ಪೋರ್ಟ್‌ ಕಾರಿಡಾರ್‌ ಸಂಪರ್ಕ ಜೋಡಣೆ ಮಾರ್ಗ ಬದಲಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಾಂತ್ರಿಕ ಸರ್ವೆ ಕಾರ್ಯ ಆರಂಭಗೊಂಡಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರಂವರೆಗೂ ಮೆಟ್ರೋ 2ನೇ ಹಂತದ ಕಾಮಗಾರಿ ನಡೆಯುತ್ತಿದೆ. ಇದೀಗ ಕೆ.ಆರ್‌.ಪುರಂನಿಂದ ಹೆಬ್ಬಾಳದ ಮೂಲಕ ಏರ್‌ಪೋರ್ಟ್‌ ತಲುಪುವ 39 ಕಿ.ಮೀ ನೂತನ ಮಾರ್ಗಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದ್ದು, ಈ ಮಾರ್ಗದಲ್ಲಿ 17 ಮೆಟ್ರೋ ಸ್ಟೇಷನ್‌ ಬರಲಿವೆ. ಈ ಯೋಜನೆಗೆ ಒಟ್ಟು 10,584 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆ ಕೆ.ಆರ್‌.ಪುರಂ ಮೂಲಕ ನಾಗವಾರದಿಂದ ಆರ್‌.ಕೆ.ಹೆಗ್ಡೆ ನಗರದ ಮಾರ್ಗವಾಗಿ ಏರ್‌ಪೋರ್ಟ್‌ಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಈ ಮಾರ್ಗವಾಗಿ ಏರ್‌ಪೋರ್ಟ್‌ ತಲುಪಲು ಕೇವಲ 29 ಕಿ.ಮೀ ಇತ್ತು. ಆದರೆ ಇದೇ ಮಾರ್ಗದಲ್ಲಿ ಜಲಮಂಡಳಿಯ ಎರಡು ಬೃಹತ್‌ ಪೈಪ್‌ಲೈನ್‌ಗಳಿದ್ದು, ಆರ್‌.ಕೆ.ಹೆಗ್ಡೆ ನಗರದಿಂದ ಜಕ್ಕೂರು ರಸ್ತೆ ಮಧ್ಯೆ ಬೃಹತ್‌ ಗ್ಯಾಸ್‌ಪೈಪ್‌ ಅಳವಡಿಕೆಯಾಗಿದೆ. ನೀರಿನ ಪೈಪ್‌ಲೈನ್‌ ಬಿಟ್ಟು ರಸ್ತೆಯ ಉತ್ತರ ಅಥವಾ ದಕ್ಷಿಣ ಭಾಗದಲ್ಲಿ ಮೆಟ್ರೋ ಲೈನ್‌ ಮಾಡುವುದಕ್ಕೆ ಹೊರಟರೆ 4.6 ಕಿ.ಮೀ.ಮಾರ್ಗದಲ್ಲಿ ವಸತಿ ಪ್ರದೇಶವಿದ್ದು, ಭೂಸ್ವಾಧೀನ ಅನಿವಾರ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆಗೆ ಬಿಎಂಆರ್‌ಸಿಎಲ್‌ ಮುಂದಾಗಿದೆ.

ಇದೀಗ ವಸತಿ ಪ್ರದೇಶದ ಭೂಸ್ವಾಧೀನದ ಅವಶ್ಯಕತೆ ಇಲ್ಲ. ಜಲಮಂಡಳಿ ಮತ್ತು ಗ್ಯಾಸ್‌ ಪೈಪ್‌ಲೈನ್‌(ಬೆಂಗಳೂರು-ಮಂಗಳೂರು)ಗೂ ಯಾವುದೇ ತೊಂದರೆ ಇಲ್ಲ. ಮುಖ್ಯವಾಗಿ ಮೆಟ್ರೋ ಮಾರ್ಗ ಬದಲಾವಣೆಯಿಂದ ಬೆಂಗಳೂರು ಪೂರ್ವ ಹಾಗೂ ದಕ್ಷಿಣ ಭಾಗದಿಂದ ವಿಮಾನ ನಿಲ್ದಾಣಕ್ಕೆ ವಿವಿಧ ಉದ್ದೇಶದಿಂದ ಹೊರ ರಾಜ್ಯಗಳು, ವಿದೇಶಗಳಿಗೆ ತೆರಳುವ ಕೈಗಾರಿಕೋದ್ಯಮಿಗಳು, ಐಟಿ ಬಿಟಿ ನೌಕರರು ಸೇರಿದಂತೆ ಇತರರಿಗೆ ಅನುಕೂಲವಾಗಲಿದೆ. ಹಾಗೆಯೇ ಕೆ.ಆರ್‌.ಪುರಂ ಮತ್ತು ಹೆಬ್ಬಾಳ ಹೊರವರ್ತುಲ ರಸ್ತೆ ನಡುವೆ ಹೆಚ್ಚು ಐಟಿ ಕಂಪನಿಗಳಿದ್ದು, ಇನ್ನೂ ಹೆಚ್ಚಿನ ಉದ್ಯೋಗಗಳ ಸೃಷ್ಟಿಮತ್ತು ಮೆಟ್ರೋಗೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುವ ನಿರೀಕ್ಷೆ ಮೆಟ್ರೋ ನಿಗಮದ್ದಾಗಿದೆ.

ನಿಲ್ದಾಣಗಳ ಸಂಖ್ಯೆ 7ರಿಂದ 17ಕ್ಕೆ ಏರಿಕೆ

ಈ ಹಿಂದಿನ ಯೋಜನೆಯಂತೆ ನಾಗವಾರ, ಆರ್‌.ಕೆ.ಹೆಗ್ಡೆ ನಗರ, ಜಕ್ಕೂರು, ಯಲಹಂಕ, ಚಿಕ್ಕಜಾಲ, ಕೆಐಎಎಲ್‌ ರಸ್ತೆ ಮತ್ತು ವಿಮಾನ ನಿಲ್ದಾಣ ಟಮಿನಲ್‌ ಒಟ್ಟು ಸೇರಿ ಏಳು ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.

ಮೆಟ್ರೋ ಹೊಸ ಸಂಪರ್ಕ ಮಾರ್ಗದ ಅನ್ವಯ ಕೆ.ಆರ್‌.ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣ ನಗರ(ಬಾಬು ಸಾಹೇಬ್‌ ಪಾಳ್ಯ), ಎಚ್‌ಆರ್‌ಬಿಆರ್‌ ಲೇಔಟ್‌, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ ಕ್ರಾಸ್‌, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು, ಕೋಗಿಲು ಕ್ರಾಸ್‌, ಪೆರಿಫೆರಲ್‌ ರಿಂಗ್‌ ರಸ್ತೆ(ಬಾಗಲೂರು), ಟ್ರಂಪೆಟ್‌ ಇಂಟರ್‌ಸೆಕ್ಷನ್‌ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡು ನಿಲ್ದಾಣಗಳು ಸೇರಿ 17 ಮೆಟ್ರೋ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಗಂಟೆಗೆ 60 ಕಿ.ಮೀ. ವೇಗ

ಮೆಟ್ರೋ 1ನೇ ಹಂತದಲ್ಲಿ 80 ಕೆಎಂಪಿಎಚ್‌ ವೇಗ ಸಾಮರ್ಥ್ಯದಲ್ಲಿ ಮೆಟ್ರೋ ಮಾರ್ಗವನ್ನು ನಿರ್ಮಿಸಲಾಗಿದ್ದೆ. ಆದರೂ ಮೆಟ್ರೋ ರೈಲುಗಳು ಸರಾಸರಿ 34 ಕೆಎಂಪಿಎಚ್‌ (ಕಿಲೋ ಮೀಟರ್‌ ಪರ್‌ ಅವರ್‌) ವೇಗದಲ್ಲಿ ಸಂಚರಿಸುತ್ತವೆ. ಆದರೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆ.ಆರ್‌.ಪುರಂ- ವಿಮಾನ ನಿಲ್ದಾಣ ಮಾರ್ಗದ ಸಾಮರ್ಥ್ಯ 90ರಿಂದ 95ಕೆಎಂಪಿಎಚ್‌ ಇರಲಿದ್ದು, ಮೆಟ್ರೋ ರೈಲುಗಳ ಸಂಚಾರ ಪ್ರತಿ ಗಂಟೆಗೆ 60 ಕಿ.ಮೀ. ವೇಗ ಇರಲಿವೆ. ಇದರಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಈಗ ತೆಗೆದುಕೊಳ್ಳುತ್ತಿರುವ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ ಎಂದು ಮೆಟ್ರೋ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ : ಸಂಪತ್‌ ತರೀಕೆರೆ