ಒಲ್ಲದ ಹೆಂಡತಿಯನ್ನು ಕೊಂದು ಕಥೆ ಕಟ್ಟಿದ ಗಂಡ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ಜಿಪಿಎಸ್ ಕೊಲೆಗಾರನ ಸುಳಿವು ನೀಡಿ ಆತ ಬಂಧಿತನಾಗಿದ್ದಾನೆ

ಬೆಂಗಳೂರು [ಡಿ.04]: ತನ್ನ ಬದುಕಿಗೆ ‘ಆನ್‌ ಲಕ್ಕಿ’ ಎಂದು ಭಾವಿಸಿ ಪತ್ನಿ ಮೇಲೆ ಕಾರು ಹರಿಸಿ ಕೊಂದ ಬಳಿಕ ಅಪಘಾತದ ನಾಟಕ ಹೆಣೆದಿದ್ದ ಚಿನ್ನಾಭರಣ ವ್ಯಾಪಾರಿಯೊಬ್ಬನ ನಿಜ ಬಯಲಾಗಿ ಜೈಲು ಸೇರಿದ ಕುತೂಹಲಕಾರಿ ಘಟನೆ ದೇವನಹಳ್ಳಿ ಸಮೀಪ ನಡೆದಿದೆ.

ಹುಣಸಮಾರನಹಳ್ಳಿ ಸಮೀಪದ ಜನತಾ ಕಾಲೋನಿ ನಿವಾಸಿ ತೇಜ್‌ ಸಿಂಗ್‌ (27) ಬಂಧಿತನಾಗಿದ್ದು, ನಂದಿ ಬೆಟ್ಟದ ರಸ್ತೆಯಲ್ಲಿ ತನ್ನ ಪತ್ನಿ ಗಟ್ಟು ಕಂವಾರ್‌ ಉರುಫ್‌ ದೀಪಲ್‌ ಕಂವಾರ್‌ (27) ಅವರನ್ನು ಕಾರು ಹತ್ತಿಸಿ ಹತ್ಯೆಗೈದಿದ್ದ.

ಐದು ವರ್ಷಗಳ ಹಿಂದೆ ರಾಜಸ್ಥಾನ ಮೂಲದ ತೇಜ್‌ಸಿಂಗ್‌ ಹಾಗೂ ಗಟ್ಟು ಕಂವಾರ್‌ ವಿವಾಹವಾಗಿದ್ದು, ಮದುವೆ ಬಳಿಕ ಜನತಾ ಕಾಲೋನಿಯಲ್ಲಿ ದಂಪತಿ ನೆಲೆಸಿದ್ದರು. ಮನೆ ಹತ್ತಿರದಲ್ಲೇ ಚಿನ್ನಾಭರಣ ಮಾರಾಟ ಮಳಿಗೆ ಇಟ್ಟಿದ್ದ ಆತ, ಕೌಟುಂಬಿಕ ವಿಚಾರವಾಗಿ ಪತ್ನಿ ಜತೆ ಜಗಳವಾಡುತ್ತಿದ್ದ. ಈ ಕಲಹ ಹಿನ್ನೆಲೆಯಲ್ಲಿ ಪತ್ನಿ ಕೊಲೆಗೆ ನಿರ್ಧರಿಸಿದ್ದ.

ಅದರಂತೆ ನ.16ರಂದು ತೇಜ್‌ಸಿಂಗ್‌, ತನ್ನ ಸ್ನೇಹಿತ ಗುರುಪ್ರೀತ್‌ ಸಿಂಗ್‌ ಹೆಸರಿನಲ್ಲಿ ಬಾಡಿಗೆ ಕಾರು ಬುಕ್‌ ಮಾಡಿಸಿದ್ದ. ಬಳಿಕ ತೇಜ್‌ ಮನೆಗೆ ಗುರು ಕಾರು ತಂದು ಬಿಟ್ಟು ತೆರಳಿದ್ದ. ಅಮೃತಹಳ್ಳಿ ಸಮೀಪ ಹೋಟೆಲ್‌ಗೆ ಅಂದು ರಾತ್ರಿ ಊಟಕ್ಕೆ ಪತ್ನಿ ಗಟ್ಟು ಹಾಗೂ ಸ್ನೇಹಿತರಾದ ಶಂಕರ್‌ಸಿಂಗ್‌ ಮತ್ತು ಭರತ್‌ಸಿಂಗ್‌ ಜತೆ ತೇಜ್‌ ಹೋಗಿದ್ದ. ಆ ವೇಳೆ ಸ್ನೇಹಿತರ ಜತೆ ಸೇರಿ ಕಂಠಮಟಾ ಮದ್ಯ ಸೇವಿಸಿದ ತೇಜ್‌, ಆ ವೇಳೆ ಬಲವಂತವಾಗಿ ಪತ್ನಿಗೂ ಮದ್ಯಪಾನ ಮಾಡಿಸಿದ್ದ.

ಈ ಪಾರ್ಟಿ ಮುಗಿದ ಬಳಿಕ ಸ್ನೇಹಿತರನ್ನು ಅವರ ಮನೆಗೆ ಬಿಟ್ಟಆತ, ರಾತ್ರಿ 12.20ರ ಪತ್ನಿಯನ್ನು ದೇವನಹಳ್ಳಿ ರಸ್ತೆಗೆ ಕರೆ ತಂದಿದ್ದಾನೆ. ಪಾನಮತ್ತಳಾಗಿ ನಿದ್ರೆಗೆ ಜಾರಿದ್ದ ಪತ್ನಿಯನ್ನು ತೇಜ್‌, ಬಚ್ಚಳ್ಳಿ ಗೇಟ್‌ ಸಮೀಪ ಕಾರು ಚಲಿಸುವಾಗಲೇ ಬಾಗಿಲು ತೆರೆದ ಪರಿಣಾಮ ಆಕೆ ಕೆಳಗೆ ಬಿದ್ದಿದ್ದಳು. ಆಗ ಕಾರನ್ನು ರಿವರ್ಸ್‌ ಮಾಡಿಕೊಂಡು ಬಂದ ತೇಜ್‌, ರಸ್ತೆ ಬದಿ ಉರುಳಿದ್ದ ಪತ್ನಿ ಮೇಲೆ ಹರಿಸಿ ಭೀಕರವಾಗಿ ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಹೇಳಿ ಸಿಕ್ಕಿ ಬಿದ್ದ:

ಈ ಘಟನೆ ಕುರಿತು ಕೆಐಎಎಲ್‌ ಸಂಚಾರ ಠಾಣೆ ಪೊಲೀಸರಿಗೆ ದೂರು ನೀಡಿದ ತೇಜ್‌, ‘ಪತ್ನಿ ವಾಂತಿ ಮಾಡಬೇಕು ಎಂದಳು. ತಕ್ಷಣವೇ ನಾನು ಕಾರು ನಿಲ್ಲಿಸಿದೆ. ಆದರೆ ಆಕೆ ಕಾರಿನಿಂದಿಳಿದಾಗ ಹಿಂದಿನಿಂದ ಅತಿವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿಯಾಯಿತು’ ಎಂದಿದ್ದ. ಅದರಂತೆ ಅಪಘಾತ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್‌ ಚಂದ್ರಶೇಖರ್‌ ಅವರಿಗೆ ಘಟನಾ ಸ್ಥಳವನ್ನು ಪರಿಶೀಲಿಸಿದಾಗ ತೇಜ್‌ ಮೇಲೆ ಅನುಮಾನ ಮೂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಪಘಾತಕ್ಕೂ ಮುನ್ನ ತೇಜ್‌ ಎಲ್ಲೆಲ್ಲಿ ಹೋಗಿದ್ದ ಎಂಬುದನ್ನು ವಿಚಾರಿಸಿದರು. ಈ ವೇಳೆ ಸ್ನೇಹಿತರು, ‘ಯಾವತ್ತೂ ಪತ್ನಿಯನ್ನು ಎಲ್ಲಿಗೂ ಕರೆದೊಯ್ದ ತೇಜ್‌, ಅಂದು ಊಟಕ್ಕೆ ಪತ್ನಿ ಜತೆ ಬಂದಿದ್ದನ್ನು ನೋಡಿ ಅಚ್ಚರಿಯಾಯಿತು. 3 ದಿನಗಳ ಬಳಿಕ ಆತನ್ನು ನಾವು ಭೇಟಿಯಾಗಿ ಸಂತಾಪ ವ್ಯಕ್ತಪಡಿಸಿದ್ದೆವು. ಆದರೆ ತೇಜ್‌, ನನ್ನ ಪತ್ನಿ ಅಪಘಾತದಲ್ಲಿ ಸಾಯಲಿಲ್ಲ. ನಾನೇ ಆಕೆ ಮೇಲೆ ಕಾರು ಹತ್ತಿಸಿ ಕೊಂದೆ. ನನ್ನ ಬದುಕಿಗೆ ಶಾಪವಾಗಿದ್ದಳು’ ಎಂದ ಎಂದು ಹೇಳಿಕೆ ಕೊಟ್ಟರು.

ಹಾಗೆಯೇ ಅಪಘಾತಕ್ಕೀಡಾದ ಕಾರಿಗೆ ಅಳವಡಿಸಿದ್ದ ಜಿಪಿಎಸ್‌ ವರದಿ ತೆಗೆದು ನೋಡಿದಾಗ ಘಟನಾ ಸ್ಥಳದಲ್ಲಿ ಕಾರು ಹಿಂದಕ್ಕೆ ಮುಂದಕ್ಕೆ ಚಲಿಸಿರುವುದು ಗೊತ್ತಾಯಿತು. ಗೆಳೆಯರನ್ನು ಅಮೃತಹಳ್ಳಿಯಲ್ಲಿ ಮನೆಗೆ ತಲುಪಿಸಿದ ಬಳಿಕ ತೇಜ್‌, ಸೀದಾ ತನ್ನ ಮನೆಗೆ ತೆರಳದೆ ಮಾರ್ಗ ಬದಲಾಯಿಸಿ ದೇವನಹಳ್ಳಿಗೆ ಬಂದಿದ್ದು ಶಂಕೆ ಕಾರಣವಾಯಿತು. ಈ ಎಲ್ಲ ಅಂಶಗಳನ್ನು ಮುಂದಿಟ್ಟು ತೇಜ್‌ನನ್ನು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪತಿಯೊಂದಿಗೆ ಕಲಹ : 21ನೇ ಮಹಡಿಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ.

ಕೊಲೆ ಕೃತ್ಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ವರ್ಗಾಯಿಸಲಾಗಿದೆ.

ಒಲ್ಲದ ಪತ್ನಿ ಜತೆ ಸಂಸಾರ

ತನ್ನ ಪೋಷಕರ ಒತ್ತಾಯಕ್ಕೆ ಮಣಿದು ಗಟ್ಟಜತೆ ವಿವಾಹವಾಗಿದ್ದ ತೇಜ್‌, ಯಾವತ್ತೂ ಪತ್ನಿ ಜತೆ ಅನ್ಯೋನ್ಯವಾಗಿ ಬಾಳ್ವೆ ಮಾಡಲಿಲ್ಲ. ಪ್ರತಿದಿನ ಮನೆಯಲ್ಲಿ ರಗಳೆ ತೆಗೆಯುತ್ತಿದ್ದ. ಇನ್ನು ತೇಜ್‌ ಮದುವೆ ದಿನವೇ ಆತನ ಚಿಕ್ಕಪ್ಪ ಮೃತಪಟ್ಟಿದ್ದರು. ಇದರಿಂದ ಆತ, ತನ್ನ ಬದುಕಿಗೆ ಪತ್ನಿ ಶಾಪಗ್ರಸ್ತೆ ಎಂದೂ ಭಾವಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.