ಬೆಂಗಳೂರು[ಜೂ.25]: ಮದ್ಯಪಾನವನ್ನು ಪ್ರಶ್ನಿಸಿದ ಪತ್ನಿಗೆ ಪತಿಯೇ ಚಾಕು ಇರಿದಿರುವ ಘಟನೆ ಬೆಳ್ಳಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ತಪಸ್ವಿನಿ ಅವರು ಇರಿತಕ್ಕೆ ಒಳಗಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆರೋಪಿ ಪತಿ ಪ್ರದೀಪ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರದೀಪ್‌ ಖಾಸಗಿ ಏಜೆನ್ಸಿಯ ಭದ್ರತಾ ಸಿಬ್ಬಂದಿಯಾಗಿದ್ದು, ತಪಸ್ವಿನಿ ಅವರು ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರು. ಆರೋಪಿ ಪ್ರದೀಪ್‌ ಮದ್ಯ ವ್ಯಸನಿಯಾಗಿದ್ದು, ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಭಾನುವಾರ ರಾತ್ರಿ ಕೂಡ ಕಂಠಮಟ್ಟಕುಡಿದು ತಡರಾತ್ರಿ 1 ಗಂಟೆಗೆ ಮನೆಗೆ ಬಂದಿದ್ದ. ಇದನ್ನು ಪತ್ನಿ ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿತ್ತು. ನಸುಕಿನ 3ಗಂಟೆವರೆಗೂ ಜಗಳ ಮುಂದುವರೆದು ಈ ವೇಳೆ ಪತಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಗೆ ಇರಿದಿದ್ದ.

ತಪಸ್ವಿನಿಯ ಕೂಗಾಟ ಕೇಳಿ ಅಕ್ಕ ಪಕ್ಕದವರು ಸ್ಥಳಕ್ಕೆ ಬಂದದ್ದಲ್ಲದೆ ಸಮೀಪದಲ್ಲೇ ಇದ್ದ ತಪಸ್ವಿನಿ ಅಣ್ಣ ಮಧುಸೂದನ್‌ಗೆ ವಿಷಯ ಮುಟ್ಟಿಸಿದ್ದರು. ಮಧುಸೂದನ್‌ ಸ್ಥಳಕ್ಕೆ ಬಂದು ಅಕ್ಕ ಪಕ್ಕದವರ ನೆರವಿನಿಂದ ತಪಸ್ವನಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದ್ದು ಸದ್ಯಕ್ಕೆ ಪ್ರಾಣಾಪಾಯ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.