ಬೆಂಗಳೂರು ಭಾರಿ ಮಳೆ: ರಸ್ತೆ ಗುಂಡಿಯ ನೀರಲ್ಲಿ 'ಈಜಾಡಿದ' ಎಎಪಿ ನಾಯಕ!
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೈಲೈಟ್ ಮಾಡಲು ಆಮ್ ಆದ್ಮಿ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಗುಂಡಿಯಲ್ಲಿ ಈಜುವ ಮೂಲಕ ಸರ್ಕಾರ ಮತ್ತು ಬಿಬಿಎಂಪಿಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.
ಬೆಂಗಳೂರು (ಅ.06): ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿಗೆ ವಾರ್ಷಿಕ 10 ಸಾವಿರ ಕೋಟಿ ರೂ.ಗಿಂತ ಅಧಿಕ ಹಣವನ್ನು ಖರ್ಚು ಮಾಡುತ್ತಿದ್ದರೂ, ರಸ್ತೆ ಗುಂಡಿಯನ್ನೇ ಸಮರ್ಪಕವಾಗಿ ಮುಚ್ಚಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ರಸ್ತೆ ಗುಂಡಿಯಲ್ಲಿಯೇ ಈಜಾಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಎಎಪಿ ನಾಯಕರು 'ಇದು ಕೆರೆಯಲ್ಲ. ಇದು ಬಳಗೆರೆಯಿಂದ ಕುಂದಲಹಳ್ಳಿ ರಸ್ತೆಯಾಗಿದ್ದು, ಮಳೆ ಹಾಗೂ ಚರಂಡಿ ನೀರಿನಿಂದ ತುಂಬಿ 1.5 ಅಡಿ ದೊಡ್ಡ ಗುಂಡಿಗಳು ಬಿದ್ದಿವೆ. ವಾಹನಗಳು ಸಿಲುಕಿಕೊಳ್ಳುತ್ತಿವೆ ಮತ್ತು ಯಾವುದೇ ಚುನಾಯಿತ ಪ್ರತಿನಿಧಿ ಅಥವಾ ಅಧಿಕಾರಿಗಳು ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರಸ್ತೆಗಳ ಗುಂಡಿ ತುಂಬಲು 1,000 ಕೋಟಿ ರೂ. ಖರ್ಚು ಮಾಡಿದ್ದೀರಿ. ಇದು ನಿಮ್ಮ ಸರ್ಕಾರದ ಮತ್ತೊಂದು ಹಗರಣವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರಿ ಮಳೆಗೆ ಮುಳುಗಿದ ರಸ್ತೆ, ಮುಂದಿನ 5 ದಿನ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್!
ಬೆಂಗಳೂರಿನಾದ್ಯಂತ ನಿಮ್ಮ ಭ್ರಷ್ಟಾಚಾರ ಮತ್ತು ಹದಗೆಟ್ಟ ರಸ್ತೆಗಳಿಂದ ಬೆಂಗಳೂರಿನ ಜನರು ಬೇಸತ್ತಿದ್ದಾರೆ. ಮಂಜುಳಾ ಅರವಿಂದ ಲಿಂಬಾವಳಿ ಈ ಕ್ಷೇತ್ರದ ಶಾಸಕರು. ಫೋಟೋ ಆಪ್‌ಗಳಲ್ಲಿ ಸಮಯ ಕಳೆಯುವುದನ್ನು ಬಿಟ್ಟರೆ, ನೀವು ನಿಜವಾಗಿಯೂ ಮಹದೇವಪುರದ ಜನರಿಗೆ ಸಹಾಯ ಮಾಡುತ್ತಿಲ್ಲ. ಬೆಂಗಳೂರಿನ ಜನತೆ ವಾರ್ಷಿಕವಾಗಿ ಪಾಲಿಕೆ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟಿದರೂ ಜನರು ಈ ರಸ್ತೆಯ ಮೂಲಕ ಹೋಗುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸುರಿದ ಒಂದೇ ಒಂದು ಘಂಟೆಯ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ನಿಯಂತ್ರಣ ಗುಂಡಿಗಳಲ್ಲಿ ಬೀಳುತ್ತುದ್ದಾರೆ. ಇನ್ನು ಕೆಲವರು ರಸ್ತೆ ಗುಂಡಿಗಳನ್ನು ವಾಹನ ತೆಗೆದುಕೊಂಡು ಹೋಗಿ ಅಲ್ಲಿಯೇ ಲಾಕ್ ಆಗುತ್ತಿದ್ದಾರೆ. ಬೇರೆಯವರು ಬಂದು ಸಹಾಯ ಮಾಡಿದರಷ್ಟೇ ಹೊರಬರಲು ಸಾಧ್ಯ. ಇದು ಸಿಲಿಕಾನ್ ಸಿಟಿ ಹೆಜ್ಜೆ ಹೆಜ್ಜೆಗೂ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ಇನ್ನು ವಾಹನ ಸವಾರರು ಪರದಾಡುತ್ತಿದ್ದು, ಒಂದು ಮಳೆಗೆ ಬಿಬಿಎಂಪಿ ಹಾಗೂ ಸರ್ಕಾರದ ಬಣ್ಣ ಬಯಲಾಗಿದೆ.
ಬೆಂಗ್ಳೂರಲ್ಲಿ ಭಾರೀ ಮಳೆ: ಎಲೆಕ್ಟ್ರಾನಿಕ್ಸ್ ಸಿಟಿ ಜಲಾವೃತ, ತತ್ತರಿಸಿದ ಐಟಿಬಿಟಿ ಮಂದಿ!
ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಳಗೆರೆ - ಕುಂದಹಳ್ಳಿ ರಸ್ತೆ ಜಲಾವೃತವಾಗಿದೆ. ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿ ನಿರ್ಮಾಣವಾಗಿದ್ದು, ವಾಹನಗಳು ರಸ್ತೆ ಗುಡಿಗಳಲ್ಲಿ ಕೆಟ್ಟು ನಿಲ್ಲುವ ಪರಿಣಾಮ ವಾಹನ ಸವಾರರರು ಪರದಾಡುತ್ತಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕೆಲವು ಸ್ಥಳದಲ್ಲಿ ಎಎಪಿ ಮುಖಂಡರಿಂದ ಜನರಿಗೆ ಸಹಾಯ ಮಾಡಲಾಗುತ್ತಿದೆ. ರಸ್ತೆ ಗುಂಡಿಯಲ್ಲಿನ ನೀರಿನ ಆಳವನ್ನು ತೋರಿಸಿ ಇಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗಬೇಡಿ ಎಂದು ಜಾಗೃತಿ ಮೂಡಿಸಿದ್ದಾರೆ.