ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯರು ಕಾಲೇಜು ಕ್ರೀಡಾಂಗಣವನ್ನು ಖಾಸಗಿ ಸ್ಪೋರ್ಟ್ಸ್ ಕ್ಲಬ್‌ಗೆ ಬಾಡಿಗೆಗೆ ನೀಡಿ, ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕದಂಬ ಪಡೆಯಿಂದ ಉನ್ನತ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದ್ದು, ತನಿಖೆಗೆ ಆಗ್ರಹಿಸಲಾಗಿದೆ.
ಬೆಂಗಳೂರು (ಜ.28): ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯರು ಕಾಲೇಜು ಕ್ರೀಡಾಂಗಣವನ್ನು ಖಾಸಗಿ ಸ್ಪೋರ್ಟ್ಸ್ ಕ್ಲಬ್‌ಗೆ ಲಕ್ಷಾಂತರ ರೂ.ಗೆ ಬಾಡಿಗೆಗೆ ನೀಡಿದ್ದಾರೆ ಎಂದು ಕಾಲೇಜಿನ ವಿದ್ಯಾರ್ಥಿ ಸಂಘಟನೆಯಿಂದಲೇ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಕಲಾ ಕಾಲೇಜಿನ ಮೈದಾನವನ್ನು ಕಾಲೇಜು ವಿದ್ಯಾರ್ಥಿಗಳು ಮಾತ್ರ ಬಳಕೆ ಮಾಡಲು ಅವಕಾಶ ಇರುತ್ತದೆ. ಕಾಲೇಜು ನಡೆಯದ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ಮೈದಾನವನ್ನು ಸಾರ್ವಜನಿಕರು ಕ್ರೀಡಾಂಗಣಕ್ಕೆ ಯಾವುದೇ ಹಾನಿ ಮಾಡದೇ ಅದನ್ನು ಬಳಕೆ ಮಾಡಿಕೊಳ್ಳಬಹುದು. ಆದರೆ, ಇಲ್ಲಿ ಸರ್ಕಾರಿ ಕಾಲೇಜಿನ ಪ್ರಾಚಾರ್ಯರೇ ಕಾಲೇಜು ಕ್ರೀಡಾಂಗಣವನ್ನು ಮಾರಿಕೊಂಡು ಹಣ ಮಾಡಿಕೊಳ್ಳುತ್ತಿರುವ ಘಟನೆ ನಡೆದಿದೆ.
ಸರ್ಕಾರಿ ಕಾಲೇಜು ಆಟದ ಮೈದಾನ ಸೇರಿದಂತೆ ಆಸ್ತಿಗಳ ದುರ್ಬಳಕೆ ಮಾಡಿಕೊಂಡ ದೂರು ಕೇಳಿಬಂದಿದೆ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಆಟದ ಮೈದಾನ ಸೇರಿದಂತೆ ದೈಹಿಕ ಶಿಕ್ಷಣದ ಆಸ್ತಿಗಳ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ದೂರು ಕೊಡಲಾಗಿದೆ. ಈ ಆಟದ ಮೈದಾನವನ್ನು ಖಾಸಗಿ ಸ್ಟೋಟ್ಸ್ ಕ್ಲಬ್ ಅನಧಿಕೃತ ಬಾಡಿಗೆ ನೀಡಲಾಗಿದೆ. ಈ ಮೂಲಕ ಸರ್ಕಾರಿ ಕಾಲೇಜಿನ ಮೈದಾನವನ್ನು ಬಾಡಿಗೆಗೆ ಕೊಟ್ಟು ಮಾಸಿಕ ಲಕ್ಷಾಂತರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಪ್ರಾಚಾರ್ಯರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕದ ಕದಂಬ ಪಡೆ ವತಿಯಿಂದ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ದೂರಿನ ಪ್ರತಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಸರ್ಕಾರಿ ಕಲಾ ಕಾಲೇಜಿನ ಕ್ರೀಡಾಂಗಣವನ್ನು ಖಾಸಗಿ ಸ್ಟೋರ್ಟ್ಸ್ ಕ್ಲಬ್‌ಗೆ ಕೊಟ್ಟಿದ್ದಾರೆ. ಈ ಖಾಸಗಿ ಕ್ಲಬ್ ಜೊತೆಗೆ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರು ಒಳಒಪ್ಪಂದ ಮಾಡಿಕೊಂಡಿದ್ದಾರೆಂದು ಕಾಲೇಜು ವಿದ್ಯಾರ್ಥಿ ಸಂಘಟನೆ ವತಿಯಿಂದಲೇ ಆರೋಪ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ವಿದ್ಯಾರ್ಥಿ ಸಂಘಟನೆಯಿಂದ ಒತ್ತಾಯ ಮಾಡಲಾಗಿದೆ.
ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್ ಕಳ್ಳನಿಂದ ಪಾರು ಮಾಡಿದ ಕಂಡಕ್ಟರ್; ಕಳ್ಳರ ಕರಾಮತ್ತು ಹೇಗಿರುತ್ತದೆ ಗೊತ್ತಾ?
ಸರ್ಕಾರಿ ಮೈದಾನ ಬಳಸಿಕೊಂಡು ಹಣ ಮಾಡುತ್ತಿರುವ ಖಾಸಗಿ ಸ್ಪೋರ್ಟ್ಸ್ ಕ್ಲಬ್: ಸರ್ಕಾರಿ ಕಾಲೇಜು ಮೈದಾನವನ್ನು ಕಾಲೇಜು ಪ್ರಾಂಶುಪಾಲರಿಗೆ ಲಂಚದ ಆಮಿಷವೊಡ್ಡಿ ಒಪ್ಪಂದದ ಮೂಲಕ ಈ ಮೈದಾನದ ಒಂದು ಭಾಗವನ್ನು ವಶಕ್ಕೆ ಪಡದುಕೊಂಡಿದ್ದಾರೆ. ಇಲ್ಲಿ ಕ್ರಿಕೆಟ್ ನೆಟ್ ಅನ್ನು ಅಳವಡಿಕೆ ಮಾಡಿ, ಇಲ್ಲಿ ಪ್ರಾಕ್ಟೀಸ್ ಮಾಡಲು ಬರುವವರಿಗೆ ತರಬೇತಿ ಕೊಡುವುದಾಗಿ ಅಭ್ಯರ್ಥಿಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸಾರ್ವಜನಿಕರ ಬಳಕೆಗೆ ಇರುವ ಸರ್ಕಾರಿ ಕಾಲೇಜು ಮೈದಾನವನ್ನು ಖಾಸಗಿ ಸ್ಫರ್ಟ್ಸ್ ಕ್ಲಬ್ ಮಾಲೀಕರು ಹಣ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಸ್ವತಃ ಇದೇ ಕಾಲೇಜಿನ ಮಕ್ಕಳಿಗೂ ಉಚಿತ ಅವಕಾಶವಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
