ಬೆಂಗಳೂರು [ಆ.03]:  ರಾಜ್ಯದಲ್ಲಿ ನೂತನ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್‌ ಇಲಾಖೆಯಲ್ಲಿ ‘ವರ್ಗಾವಣೆ ಪರ್ವ’ ಮುಂದುವರೆದಿದ್ದು, ಶುಕ್ರವಾರ ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸೇರಿದಂತೆ ಒಂಭತ್ತು ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದೆ.

ಕೇವಲ 47 ದಿನಗಳ ಹಿಂದಷ್ಟೆಬೆಂಗಳೂರು ಆಯುಕ್ತ ಹುದ್ದೆ ಅಲಂಕರಿಸಿದ್ದ ಅಲೋಕ್‌ ಕುಮಾರ್‌ ಅವರನ್ನು ಎತ್ತಂಗಡಿ ಮಾಡಿದ ಸರ್ಕಾರ, ನೂತನ ಆಯುಕ್ತರನ್ನಾಗಿ ಹಿರಿಯ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರನ್ನು ನೇಮಿಸಿದ್ದಾರೆ.

ಭಾಸ್ಕರ್‌ ರಾವ್‌ ಅವರಿಂದ ತೆರವಾದ ರಾಜ್ಯ ಸಶಸ್ತ್ರ ಮೀಸಲು ಪಡೆಯ ಎಡಿಜಿಪಿಯಾಗಿ ಅಲೋಕ್‌ ಕುಮಾರ್‌ ನಿಯೋಜನೆಗೊಂಡಿದ್ದಾರೆ. ಹುದ್ದೆ ನಿರೀಕ್ಷೆಯಲ್ಲಿದ್ದ ಹೇಮಂತ್‌ ನಿಂಬಾಳ್ಕರ್‌ ಅವರಿಗೆ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್‌ ಆಯುಕ್ತ (ಆಡಳಿತ) ಹಾಗೂ ಡಾ.ಬಿ.ಆರ್‌.ರವಿಕಾಂತೇಗೌಡ ಅವರಿಗೆ ಡಿಜಿಪಿ ಕಚೇರಿಯಲ್ಲಿ ಜವಾಬ್ದಾರಿ ಕೊಡಲಾಗಿದೆ. 

ಹಾಗೆಯೇ ಮತ್ತೊಬ್ಬ ಅಧಿಕಾರಿ ಡಿ.ದೇವರಾಜ್‌ ಅವರು ಸಿಐಡಿ ಎಸ್ಪಿ ಹುದ್ದೆಗೆ ನಿಯೋಜಿತರಾಗಿದ್ದಾರೆ. ಈ ನಡುವೆಯೇ ತಮ್ಮನ್ನು ಅಲ್ಪಾವಧಿಯಲ್ಲೇ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿದ ಆದೇಶವನ್ನು ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.