ಸೋಶಿಯಲ್ ಮೀಡಿಯಾ ಸ್ಟಾರ್ಸ್‌ಗೆ ಬಿಬಿಎಂಪಿ ಆಫರ್: ರೀಲ್ಸ್ ಮಾಡಿ 10 ಸಾವಿರ ಗೆಲ್ಲಿ!
ಬಿಬಿಎಂಪಿಯಿಂದ ವೋಟ್-ಎ-ಥಾನ್ ರೀಲ್ಸ್ ಸ್ಪರ್ಧೆ
ಅತ್ಯುತ್ತಮ ರೀಲ್ಸ್‌ಗೆ 10 ಸಾವಿರ ರೂ. ಬಹುಮಾನ
ಏ.30ರೊಳಗೆ ನಿಮ್ಮ ರೀಲ್ಸ್ ಕಳಿಸಿ ಬಹುಮಾನ ಗೆಲ್ಲಿ
ವರದಿ - ರಕ್ಷಾ ಕಟ್ಟೆ ಬೆಳಗುಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಏ.17): ಈಗ ಜಾಗತಿಕವಾಗಿ ಸೋಶಿಯಲ್ ಮೀಡಿಯಾ ಸ್ಟಾರ್ಸ್‌ಗಳು ಕೂಡ ಯಾವುದೇ ಸಿನಿಮಾ ಮತ್ತು ಕಿರುತೆರೆ ನಟರಿಗಿಂತ ಕಡಿಮೆಯೇನಿಲ್ಲ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಲೇ ಭರ್ಜರಿ ಅಭಿಮಾನಿಗಳನ್ನು ಹೊಂದುವ ಜೊತೆಗೆ ಮಾಸಿಕ ಲಕ್ಷಾಂತರ ರೂ. ಕಮಾಯಿ ಮಾಡುತ್ತಿದ್ದಾರೆ. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ಸೋಶಿಯಲ್ ಮೀಡಿಯಾ ಸ್ಟಾರ್ಸ್‌ಗಳಿಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲುವುದಕ್ಕೆ ಭರ್ಜರಿ ಆಫರ್ ನೀಡಿದೆ.
ಹೌದು, ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಬಿಬಿಎಂಪಿಯು ವಿನೂತನವಾಗಿ “ವೋಟ್-ಎ-ಥಾನ್" (VOTE-A-THON) ಎಂಬ ಸ್ಪರ್ಧೆಯನ್ನು ಏರ್ಪಡಿಸಿದೆ. ಬೆಂಗಳೂರಿನ ಜನತೆ ಚುನಾವಣೆ ಕುರಿತು ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡುವ ವೋಟ್-ಎ-ಥಾನ್ ಸ್ಪರ್ಧೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಇಂದು ಚಾಲನೆ ನೀಡಿದರು.
ಶತಕೋಟಿ ಒಡೆಯನಾದರೂ ಗುಲಗಂಜಿಯಷ್ಟು ಬಂಗಾರವಿಲ್ಲ! ಲಿಂಗಾಯತ ನಾಯಕನ ಆಸ್ತಿ ಮೌಲ್ಯವೆಷ್ಟು ಗೊತ್ತಾ?
ಇನ್ನು ವೋಟ್-ಎ-ಥಾನ್ ಸ್ಪರ್ಧೆಯ ಕುರಿತು ಇಂದು ಮಾತನಾಡಿದ ಅವರು, ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಾಗೂ ಪಾಲಿಕೆ ವತಿಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಗರಿರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದೀಗ ವೋಟ್-ಎ-ಥಾನ್ ಎಂಬ ವಿನೂತನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಚುನಾವಣೆಯ ವೇಳೆ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಉತ್ತಮ ಸಂದೇಶವುಳ್ಳ ರೀಲ್ಸ್ ಮಾಡಿದವರಿಗೆ 10 ಸಾವಿರ ರೂ. ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಿದರು.
ಸ್ಪರ್ಧೆಯಲ್ಲಿ ಯಾರೆಲ್ಲ ಭಾಗವಹಿಸಬಹುದು: ವೋಟ್-ಎ-ಥಾನ್ ಸ್ಪರ್ಧೆಯು ಬೆಂಗಳೂರು ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 17 ರಿಂದ ಏಪ್ರಿಲ್ 30 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕ್ರಿಯಾತ್ಮಕ ಆಲೋಚನೆಗಳ ಮೂಲಕ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡಿ ಹ್ಯಾಶ್ ಟ್ಯಾಗ್ (#Vote-A-Thon) ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು. ಅಥವಾ ಇ-ಮೇಲ್ ಐಡಿ contact-us@bbmp.gov.inಗೆ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಏಪ್ರಿಲ್ 30 ರೊಳಗಾಗಿ ಕಳುಹಿಸಬೇಕು.
ನಗದು ಬಹುಮಾನ: ಕ್ರಿಯಾತ್ಮಕವಾಗಿ ರಚಿಸಿದ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳಿಗೆ ನಗದು ಬಹುಮಾನ, ಪ್ರಮಾಣ ಮತ್ರ ಹಾಗೂ ಇನ್ನಿತ್ಯಾದಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು. ವೊಟ್-ಎ-ಥಾನ್ ಸ್ಪರ್ಧೆಯ ಮೂಲಕ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮತದಾರರಲ್ಲಿ ಉತ್ಸಾಹವನ್ನು ಉಂಟುಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂಬುದಾಗಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.
ಹೊಸಕೋಟೆಯಲ್ಲ ಇದು ಶ್ರೀಮಂತರ ಕೋಟೆ: 1,600 ಕೋಟಿ ಒಡೆಯ ಎಂಟಿಬಿ ನಾಗರಾಜ್, ಶತಕೋಟಿ ವೀರ ಶರತ್ ಬಚ್ಚೇಗೌಡ
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.